ಸಾರಾಂಶ
ಉಪನ್ಯಾಸ । ನಾಣ್ಯಗಳ ಮಹತ್ವದ ಬಗ್ಗೆ ಮಾಹಿತಿ
ಕನ್ನಡಪ್ರಭ ವಾರ್ತೆ ಹಾಸನಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಅನೇಕ ಸ್ತ್ರೀಯರು ಬ್ರಿಟಿಷರ ವಿರುದ್ದ ಹೋರಾಡಿ ವೀರ ಮರಣವನ್ನು ಹೊಂದಿದರು. ಅಷ್ಟೇ ಅಲ್ಲದೇ ಅನೇಕ ಸ್ತ್ರೀಯರು ನಾನಾ ರೀತಿಯಲ್ಲಿ ಸಹಕಾರ ನೀಡಿದರು. ಸ್ವಾತಂತ್ರ್ಯ ಪಡೆಯುವಲ್ಲಿ ಇಂತಹ ಸ್ತ್ರೀಯರ ಪಾತ್ರ ಅತ್ಯಂತ ಮಹತ್ವದಿಂದ ಕೂಡಿದೆ ಎಂದು ಅಂಚೆಚೀಟಿ, ಅಂಚೆ ಲಕೋಟೆ, ನಾಣ್ಯಗಳ ಅನನ್ಯ ಸಂಗ್ರಾಹಕ, ವಾಗ್ಮಿ ಎಚ್.ಕೆ.ಸತೀಶ್ ಅಭಿಪ್ರಾಯಪಟ್ಟರು.
ನಗರದ ಸಂಸ್ಕೃತ ಭವನದಲ್ಲಿ ಮಾಸಿಕ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ‘ಬ್ರಿಟಿಷರ ವಿರುದ್ಧ ಹೋರಾಡಿದ ಸ್ತ್ರೀಯರಲ್ಲಿ ಮುಂಚೂಣಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ರಾಣಿ ಅಬ್ಬಕ್ಕದೇವಿ ಇತ್ಯಾದಿ ಅನೇಕ ಮಹನೀಯರ ಹೆಸರನ್ನು ಮಾತ್ರ ನಾವು ಕೇಳಿದ್ದೇವೆ. ಅನೇಕ ಗ್ರಂಥಗಳಲ್ಲಿ ಉಲ್ಲೇಖವಾಗಿವೆ. ಆದರೆ ಇನ್ನೂ ಅನೇಕ ಕರ್ನಾಟಕದ ಸ್ತ್ರೀಯರು ಸಹ ನಮ್ಮ ದೇಶದ ರಕ್ಷಣೆಗಾಗಿ, ಬ್ರಿಟಿಷರಿಂದ ಭಾರತವನ್ನು ಮುಕ್ತಿಗೊಳಿಸಲು ಸಂಗ್ರಾಮದಲ್ಲಿ ಭಾಗವಹಿಸಿದ್ದಾರೆ. ನಮ್ಮ ದುರಾದೃಷ್ಟವೆಂದರೆ ಕೆಲವೇ ಕೆಲವು ಸ್ತ್ರೀಯರ ಹೆಸರು ಮಾತ್ರ ಕೇಳಿರುತ್ತೇವೆ. ಆದರೆ ತಮ್ಮ ದೇಹವನ್ನು ತ್ಯಾಗ ಮಾಡಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಅನೇಕ ಮಹನೀಯರು ಇದ್ದಾರೆ. ಅಂತವರ ಪರಿಚಯವು ನಮಗೆಲ್ಲಾ ಆಗಲೆಂದೇ ಸರ್ಕಾರವು ನಾಣ್ಯಗಳ ಮೇಲೆ, ಅನೇಕ ಅಂಚೆ ಲಕೋಟೆಗಳ ಮೇಲೆ ಮತ್ತು ಸ್ಟ್ಯಾಂಪ್‌ಗಳನ್ನು ಬಿಡುಗಡೆಗೊಳಿಸಿದ್ದಾರೆ’ ಎಂದು ಹೇಳಿದರು.‘ಇಂತಹ ನಾಣ್ಯಗಳ ಮುಖ್ಯ ಉದ್ದೇಶವೇ ಆ ಮಹನೀಯರ ವಿಶೇಷತೆಯನ್ನು ಜಗತ್ತಿಗೆ ಸಾರುವ ಉದ್ದೇಶವಾಗಿದೆ. ಒಬ್ಬ ಮಹನೀಯರ ಹೆಸರನ್ನು ಅಥವಾ ಭಾವಚಿತ್ರವನ್ನು ಲಕೋಟೆಯಲ್ಲಿ ಅಥವಾ ಸ್ಟ್ಯಾಂಪ್‌ನಲ್ಲಿ ಮುದ್ರಿಸಬೇಕೆಂದರೆ ಅವರು ಮಾಡಿರುವ ಸಾಧನೆ, ದೇಶಕ್ಕೆ ನೀಡಿರುವ ಅವರ ಕೊಡುಗೆ ಎಲ್ಲವನ್ನು ಗಮನಿಸಿ ಒಂದು ಸ್ಟ್ಯಾಂಪ್ ಅನ್ನು ಅವರ ಹೆಸರಿನಲ್ಲಿ ಬಿಡುಗಡೆಗೊಳಿಸುತ್ತಾರೆ. ಹೀಗೆ ಅನೇಕ ಮಹನೀಯರು ಅದರಲ್ಲೂ ಕರ್ನಾಟಕದ ಅನೇಕ ಸ್ತ್ರೀಯರನ್ನು ನಾವು ಇಂತಹ ಅಂಚೆ ಲಕೋಟೆ ಹಾಗೂ ಸ್ಟ್ಯಾಂಪ್‌ನಲ್ಲಿ ಹಾಗೂ ನಾಣ್ಯಗಳಲ್ಲಿ ಕಾಣಬಹುದು’ ಎಂದು ಹೇಳಿದರು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಬಿ.ಎಸ್.ರಂಗನಾಥ್ ಮಾತನಾಡಿ, ‘‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಎಂಬ ಮಾತಿನಂತೆ ಭಾರತದ ಇತಿಹಾಸದಲ್ಲಿ ಸ್ತ್ರೀಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅಷ್ಟೇ ಅಲ್ಲದೇ ಸ್ತ್ರೀಯರನ್ನು ಅತ್ಯಂತ ಗೌರವಯುತವಾಗಿ ಕಂಡಂತಹ ದೇಶವೇ ಭಾರತ’ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕೃತ ಸಂಘದ ಸಹಕಾರ್ಯದರ್ಶಿ ನಮಿತಾ ಗೋಪಾಲ್ ವಹಿಸಿದ್ದರು.ಅನಿರುದ್ಧ ನಿರೂಪಣೆ ಮಾಡಿದರು. ಪ್ರಾರ್ಥನೆಯನ್ನು ತನುಶ್ರೀ ನಡೆಸಿಕೊಟ್ಟರು. ಶಿವರಂಜನಿ ಸ್ವಾಗತಿಸಿದರು. ರಮೇಶ್ ಮೂಲಿಮನಿ ವಂದಿಸಿದರು. ಈ ಮಾಸಿಕ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ಸಂಸ್ಕೃತ ಸಂಘದ ಪದಾಧಿಕಾರಿಗಳು ಮತ್ತು ಪೋಷಕರು ಇದ್ದರು.