ಸಮಾಜ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅಗಾಧ: ಡಾ.ಪ್ರಿಯಾಂಕ ಚೌಗಲಾ

| Published : Feb 08 2025, 12:31 AM IST

ಸಮಾಜ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅಗಾಧ: ಡಾ.ಪ್ರಿಯಾಂಕ ಚೌಗಲಾ
Share this Article
  • FB
  • TW
  • Linkdin
  • Email

ಸಾರಾಂಶ

ನಾವೆಲ್ಲರೂ ವಿದ್ಯಾರ್ಥಿ ಜೀವನದಲ್ಲಿ ಸರಳವಾಗಿ ಬದುಕಿ ಉನ್ನತ ವಿಚಾರ ಅಳವಡಿಸಿಕೊಳ್ಳಬೇಕು. ಆರೋಗ್ಯ ಸಂಪತ್ತಿನ ಮುಂದೆ ಇನ್ಯಾವುದೇ ಸಂಪತ್ತು ಮುಖ್ಯವಾಗುವುದಿಲ್ಲ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ನಿಸರ್ಗದಲ್ಲಿ ಸಮಾಜದ ಸೃಷ್ಟಿಗೆ ಪುರುಷ ಹೇಗೆ ಕಾರಣವು, ಹಾಗೆ ಹೆಣ್ಣು ಅಷ್ಟೇ ಪ್ರಮುಖ ಕಾರಣವಾಗಿದ್ದಾಳೆ. ಕೇವಲ ಒಂದೇ ಕೈಯಿಂದ ಚಪ್ಪಾಳೆ ಆಗಲಾರದು, ಎರಡು ಕೈಗಳು ಸೇರಿದಾಗ ಹೇಗೆ ಚಪ್ಪಾಳೆ ಆಗುತ್ತದೆಯೋ, ಅದೇ ರೀತಿ ದೇಶದ ಪ್ರಗತಿ, ಸಮಾಜ ಅಭಿವೃದ್ಧಿ, ಕುಟುಂಬದ ಬೆಳವಣಿಗೆಯಲ್ಲಿ ಹೆಚ್ಚು ಪಾತ್ರವನ್ನು ಹೆಣ್ಣು ಮಕ್ಕಳು ನಿರ್ವಹಿಸುತ್ತಿದ್ದಾರೆ ಎಂದು ಡಾ.ಪ್ರಿಯಾಂಕ ಚೌಗಲಾ ಹೇಳಿದರು.

ಕೆರೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಚಿಕ್ಕೋಡಿ ತಾಲೂಕಿನ ಇನ್ನರ್ ವ್ಹೀಲ್ ಕ್ಲಬ್ ಸಹಭಾಗಿತ್ವದಲ್ಲಿ ಶುಕ್ರವಾರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ನಿಮಿತ್ತ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ರಕ್ತದ ಗುಂಪು ತಪಾಸಣೆ, ಆರೋಗ್ಯದ ಕುರಿತು ಅರಿವು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಹಲವಾರು ಜನ ಹೆಣ್ಣು ಮಕ್ಕಳು ಅಡೆತಡೆಗಳ ಮಧ್ಯೆಯು ಎದ್ದು ನಿಂತು ಸರ್ವ ರಂಗಗಳಲ್ಲೂ ತಮ್ಮ ಅಸ್ತಿತ್ವ ತೋರ್ಪಡಿಸುತ್ತಿದ್ದಾರೆ. ಹೆಣ್ಣು ಅಬಲೆ ಅಲ್ಲ ಅವಳು ಸಬಲೇ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದರು.

ಹೆಣ್ಣು ಮಕ್ಕಳು ಇಂದು ಹಲವಾರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಫಾಸ್ಟ್‌ಫುಡ್ ಸಂಸ್ಕೃತಿ ಹೆಚ್ಚಳ ಹಾಗೂ ಅಪಾಯಕಾರಿ ರಾಸಾಯನಿಕ ಪದಾರ್ಥ ಮಿಶ್ರಿತ ಆಹಾರಗಳ ಸೇವನೆಯಿಂದ ಹಲವು ಅಪಾಯಕಾರಿ ಉದರ ಸಂಬಂಧಿತ ಸಮಸ್ಯೆಗಳು, ಕ್ಯಾನ್ಸರ್ ನಂತಹ ಕಾಯಿಲೆಗಳು, ಅಸಿಡಿಟಿ, ಗರ್ಭಕೋಶ ಸಮಸ್ಯೆಗಳು ತಲೆದೋರುತ್ತಿವೆ. ಶಿಸ್ತಿನ ಜೀವನ, ಮನೆಯಲ್ಲಿಯೇ ತಯಾರಿಸಿದ ಆಹಾರದ ಸೇವನೆ ಮಾಡುವುದು ಅತಿ ಮುಖ್ಯವಾಗಿದೆ ಎಂದು ಹೇಳಿದರು.

ಡಾ.ಬಾಹುಬಲಿ ಕಾತ್ರಾಳಿ ಮಾತನಾಡಿ, ನಾವೆಲ್ಲರೂ ವಿದ್ಯಾರ್ಥಿ ಜೀವನದಲ್ಲಿ ಸರಳವಾಗಿ ಬದುಕಿ ಉನ್ನತ ವಿಚಾರ ಅಳವಡಿಸಿಕೊಳ್ಳಬೇಕು. ಆರೋಗ್ಯ ಸಂಪತ್ತಿನ ಮುಂದೆ ಇನ್ಯಾವುದೇ ಸಂಪತ್ತು ಮುಖ್ಯವಾಗುವುದಿಲ್ಲ ಎಂದರು.

ಕ್ಲಬ್‌ ಸದಸ್ಯೆ ವಿಜಯಲಕ್ಷ್ಮಿ ಕೋಲಾರ ಮಾತನಾಡಿ, ಸಮಾಜದಲ್ಲಿ ಸೌಲಭ್ಯದಿಂದ ವಂಚಿತರಾದ ಮತ್ತು ಕಷ್ಟದಲ್ಲಿರುವ ಜನರಿಗೆ, ಅಂಗವಿಕಲರಿಗೆ, ಅನಾಥ ಮಕ್ಕಳ ಆಶ್ರಮ, ಮತ್ತು ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಅವರಿಗೆ ಸ್ಪಂದಿಸುವ ಮತ್ತು ಅವರ ಅವಶ್ಯಕತೆಗಳನ್ನು ಸಾಧ್ಯವಾದಷ್ಟರ ಮಟ್ಟಿಗೆ ಈಡೇರಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.

ಡಾ. ಬಾಹುಬಲಿ ಕತ್ರಾಳಿ ಮತ್ತು ರೂಪಾಲಿ ಕತ್ರಾಳೆ 100 ಮಕ್ಕಳಗೆ ಉಚಿತವಾಗಿ ರಕ್ತದ ಗುಂಪು ತಪಾಸಣೆ ಮಾಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಶ್ರೀಶೈಲ ಕೋಲಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಭಾಗ್ಯಶ್ರೀ ತೊಗ್ಗಿ, ಸುವರ್ಣ ಬಬಲಿ, ಶಂಕರ್ ತೇಲಿ ಉಪಸ್ಥಿತರಿದ್ದರು. ಗಾಯತ್ರಿ ಪರಗೌಡ ನಿರೂಪಿಸಿದರು. ಶಿವಾನಂದ ಹರಕೆ ವಂದಿಸಿದರು.

----ಪೋಟೋ : 7ಸಿಕೆಡಿ1

ಕೆರೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಡಾ.ಪ್ರಿಯಾಂಕಾ ಚೌಗಲಾ ಮಾತನಾಡಿದರು. ಡಾ.ಬಾಹುಬಲಿ ಕತ್ರಾಳಿ, ರೂಪಾಲಿ ಕತ್ರಾಳೆ, ವಿಜಯಲಕ್ಷ್ಮಿ ಕೋಲಾರ ಉಪಸ್ಥಿತರಿದ್ದರು.