ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿಮಕ್ಕಳಿಗೆ ಕನ್ನಡ ಭಾಷೆಯ ಮಹತ್ವ ತಿಳಿಸುವಲ್ಲಿ ಮಹಿಳೆಯರು ಪ್ರಧಾನ ಪಾತ್ರ ವಹಿಸಿದ್ದು, ಮನೆಯಲ್ಲಿ ಕನ್ನಡ ಭಾಷೆಯ ಶಿಕ್ಷಕಿಯರಂತೆ ಮಕ್ಕಳಿಗೆ ಕನ್ನಡದ ಹಿರಿಮೆ ತಿಳಿಸುವ ಕೆಲಸವನ್ನು ಮಹಿಳೆಯರು ಮಾಡಬೇಕಾಗಿದೆ ಎಂದು ಹಿರಿಯ ಸಾಹಿತಿ, ವಕೀಲ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಹೇಳಿದ್ದಾರೆ.
ನಗರದ ಓಂಕಾರ ಸದನದಲ್ಲಿ ಸಮರ್ಥ ಕನ್ನಡಿಗ ಸಂಸ್ಥೆ ವತಿಯಿಂದ ಆಯೋಜಿತ ನಮ್ಮ ವೇದಿಕೆ - ನಿಮ್ಮ ಪ್ರತಿಭೆ ಕನ್ನಡ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳೊಂದಿಗೆ ಮನೆಯಲ್ಲಾದರೂ ತಾಯಂದಿರು ಕನ್ನಡದಲ್ಲಿ ಮಾತನಾಡುತ್ತಿರಬೇಕು. ಈ ಮೂಲಕ ಮಾತ್ರ ಭಾಷೆಯನ್ನು ಮಕ್ಕಳಿಗೆ ಕಲಿಸುವಂತಾಗಬೇಕು. ಮಹಿಳೆಯರು ಮನೆಯಲ್ಲಿ ಪ್ರಧಾನ ಪಾತ್ರ ವಹಿಸುವುದರಿಂದಾಗಿ ಸುಲಭವಾಗಿ ಮಕ್ಕಳಲ್ಲಿ ಕನ್ನಡದ ಮಹತ್ವ ಹಾಸುಹೊಕ್ಕಾಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮಗಳಲ್ಲಿ ಪಾಶ್ಚಾತ್ಯ ಗೀತೆಗಳನ್ನು ಹಾಡಿಸುವ ಬದಲಿಗೆ ಕನ್ನಡ ಗೀತಗಾಯನಕ್ಕೆ ಪ್ರಾಶಸ್ತ್ಯ ನೀಡಿ ಎಂದು ಸಲಹೆ ನೀಡಿದ ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಕನ್ನಡ ಭಾಷೆ, ಸಂಸ್ಕೃತಿ ಸಂಬಂಧಿತ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮಕ್ಕಳಲ್ಲಿನ ಭಾಷಾ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಶಾದಾಯಕ ನುಡಿಗಳನ್ನು ಆಡಿ ಮಕ್ಕಳ ಪ್ರತಿಭೆಯನ್ನು ಪ್ರಶಂಸಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಸ್ಪರ್ಧೆ ಯಾವುದೇ ಇದ್ದರೂ ಪ್ರತಿಭಾವಂತ ಮಕ್ಕಳ ಜತೆಗೇ ಎಲ್ಲ ಮಕ್ಕಳನ್ನೂ ಆಯೋಜಕರು ಸಮಾನಾಗಿ ಕಾಣುವ ಮೂಲಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಉತ್ಸಾಹವನ್ನು ಬಾಲ್ಯದಲ್ಲಿಯೇ ಮೂಡಿಸುವಂತಾಗಬೇಕು ಎಂದು ಕಿವಿಮಾತು ಹೇಳಿದರು.ಕನ್ನಡ ಪರ ಕಾರ್ಯಕ್ರಮಗಳು ಎಲ್ಲ ವರ್ಗದವರು ಪಾಲ್ಗೊಳ್ಳುವಂಥ ಮೌಲ್ಯಯುತ ಕಾರ್ಯಕ್ರಮಗಳಾಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮದ ಈ ಒಂದು ವರ್ಷ ಕೊಡಗಿನಲ್ಲಿಯೂ ಉತ್ತಮ ಕಾರ್ಯಕ್ರಮಗಳು ಮೂಡಿಬರುವಂತಾಗಲಿ ಎಂದು ಬಾಲಸುಬ್ರಹ್ಮಣ್ಯ ಹಾರೈಸಿದರು.ಹಿಂದಿನ ಕಾಲದ ಪಠ್ಯದಲ್ಲಿ ಪ್ರ - ಪ್ರ ಎಂಬ ವಿಭಾಗ ಇರುತ್ತಿತ್ತು. ಅಂದರೆ ಪ್ರಶ್ನೆ - ಪ್ರಕಾರ ಎಂದರ್ಥ ಇತ್ತು. ಈಗಿನ ಕಾಲದಲ್ಲಿ ಪ್ರ- ಪ್ರ- ಪ್ರ- ಪ್ರ ಎಂದರೆ ಪ್ರಚಾರ, ಪ್ರತಿಷ್ಟೆ, ಪ್ರಸಿದ್ಧಿ, ಪ್ರಶಸ್ತಿ ಎಂದರ್ಥ ಬರುವಂತಾಗಿದೆ. ಎಲ್ಲರೂ ಈ ನಾಲ್ಕೂ ‘ಪ್ರ’ ಗಳ ಹಿಂದೆ ಬಿದ್ದಂತಿದೆ ಎಂದು ಅಭಿಪ್ರಾಯಪಟ್ಟರು.ಹಾಸನದ ಉಪನ್ಯಾಸಕಿ ಉಮಾ ನಾಗರಾಜ್ ಮಾತನಾಡಿ, ಯುವಲೇಖಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯವ್ಯಾಪಿ ಸಮರ್ಥ ಕನ್ನಡಿಗರು ಸಂಸ್ಥೆ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ಸಾಹಿತ್ಯ ಪರಂಪರೆಗೆ ಪೂರಕವಾಗಿದೆ ಎಂದು ಶ್ಲಾಘಿಸಿದರು.ಸಮರ್ಥ ಕನ್ನಡಿಗ ಸಂಸ್ಥೆಯ ಜಿಲ್ಲಾ ಪ್ರಧಾನ ಸಂಚಾಲಕಿ ಕೆ.ಜಯಲಕ್ಷ್ಮೀ ಮಾತನಾಡಿ, ಕಳೆದ 5 ವರ್ಷಗಳಿಂದ ರಾಜ್ಯಮಟ್ಟದ ಸಮರ್ಥ ಕನ್ನಡಿಗ ಸಂಸ್ಥೆಯು ಕೊಡಗಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಸಂಬಂಧಿತ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬರುತ್ತಿದೆ. ಸರ್ಕಾರದಿಂದ ಯಾವುದೇ ಅನುದಾನ ಇಲ್ಲದೇ ಸ್ಪರ್ಧಿಗಳಿಂದಲೂ ಪ್ರವೇಶ ಶುಲ್ಕ ಪಡೆಯದೇ ಸಮರ್ಥ ಕನ್ನಡಿಗ ಸಂಸ್ಥೆಯಲ್ಲಿರುವ ಸದಸ್ಯೆಯರು ಸ್ವಂತ ಹಣದಿಂದ ಮತ್ತು ದಾನಿಗಳ ನೆರವಿನಿಂದ ವೈವಿಧ್ಯಮಯ ಕಾರ್ಯಕ್ರಮ ರೂಪಿಸುತ್ತಾ ಬಂದಿದ್ದಾರೆ ಎಂದರು.ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ., ಸಾಹಿತಿ ಅಂಬೆಕಲ್ ಸುಶೀಲ ಕುಶಾಲಪ್ಪ, ವಿರಾಜಪೇಟೆಯ ಲೇಖಕಿ ಪುಪ್ಪಲತ ಶಿವಪ್ಪ, ಸಮರ್ಥ ಕನ್ನಡಿಗರು ಸಂಸ್ಥೆಯ ರಾಜ್ಯ ಸಂಚಾಲಕ ಆನಂದ್ ದೆಗ್ಗನಹಳ್ಳಿ, ಹೇಮಂತ್ ಇದ್ದರು.ಸಮರ್ಥ ಕನ್ನಡಿಗರು ಸಂಸ್ಥೆಯ ಚಿತ್ರಾ ಆರ್ಯನ್ ಪ್ರಾರ್ಥಿಸಿದರು. ಪ್ರೀತಾ ಕೃಷ್ಣ ಸ್ವಾಗತಿಸಿದರು. ಗಿರಿಜಾಮಣಿ ವಂದಿಸಿದರು. ಲೇಖಕಿ, ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ನಿರೂಪಿಸಿದರು.ಕೊಡಗಿನ ವಿವಿಧ ಶಾಲಾ ವಿದ್ಯಾರ್ಥಿ ತಂಡಗಳಿಂದ ಛದ್ಮವೇಷ, ನೃತ್ಯ, ಮಹಿಳಾ ತಂಡಗಳಿಂದ ಸಮೂಹ ಗಾಯನ, ಸಮೂಹ ನೃತ್ಯ ಸ್ಪರ್ಧೆಗಳು ನಡೆದವು.
ಕನ್ನಡ ಹಬ್ಬಕ್ಕೆ ಕಲ್ಲುಸಕ್ಕರೆಯ ಸವಿ ಕೊಡುಗೆಸಮರ್ಥ ಕನ್ನಡಿಗರು ಸಂಸ್ಥೆಯ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ, ಕಲಾಪ್ರೇಮಿಗಳಿಗೆ ಕಲ್ಲುಸಕ್ಕರೆಯನ್ನು ವಿತರಿಸಿ ಕರ್ನಾಟಕ ಎಂದು ರಾಜ್ಯಕ್ಕೆ ನಾಮಕರಣವಾದ ಸಂಭ್ರಮವನ್ನು ಸಿಹಿಯ ಮೂಲಕ ಹಂಚಲಾಯಿತು. ವೇದಿಕೆಯಲ್ಲಿದ್ದ ಗಣ್ಯರಿಗೂ ಹಾರ, ಹೂವು ನೀಡುವ ಬದಲಿಗೆ ಕಲ್ಲುಸಕ್ಕರೆಯನ್ನೇ ನೀಡುವ ಮೂಲಕ ಕನ್ನಡ ಹಬ್ಬದ ಸಿಹಿಯನ್ನು ಉಣಬಡಿಸಿದ್ದು ವಿಶೇಷವಾಗಿತ್ತು.;Resize=(128,128))
;Resize=(128,128))
;Resize=(128,128))