- ಶಾಲಾ ಪ್ರಾರಂಭೋತ್ಸವ ಹಾಗೂ ಪೋಷಕರು ಹಾಗೂ ಶಿಕ್ಷಕರ ಮಹಾಸಭಾ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಮೂಲಸೌಕರ್ಯಗಳನ್ನು ಕಲ್ಪಿಸುವ ಮೂಲಕ ಅವುಗಳನ್ನು ಮಾದರಿ ಶಿಕ್ಷಣ ಕೇಂದ್ರಗಳನ್ನಾಗಿ ಪರಿವರ್ತಿಸಲು ಬದ್ಧವಿದ್ದೇವೆ. ಗ್ರಾಮೀಣ ಮಕ್ಕಳ ಶಿಕ್ಷಣದ ಪ್ರಗತಿಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಆದ್ಯತೆ ಮೇರೆಗೆ ಒದಗಿಸಲಾಗುವುದು ಎಂದು ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ ಸಮರ್ಥ್ ಮಲ್ಲಿಕಾರ್ಜುನ್ ಶಾಮನೂರು ತಿಳಿಸಿದರು.ಸೋಮವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಬಸಾಪುರದ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ, 2026-27ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ಪೋಷಕರು ಹಾಗೂ ಶಿಕ್ಷಕರ ಮಹಾಸಭಾ ಕಾರ್ಯಕ್ರಮ ಉದ್ಪಾಟಿಸಿ ಅವರು ಮಾತನಾಡಿದರು.
ಮೂರು ತಿಂಗಳ ಹಿಂದಷ್ಟೇ ಬಸಾಪುರ ಗ್ರಾಮಕ್ಕೆ ಭೇಟಿ ನೀಡಿ, ಶಾಲೆ ನೂತನ ಕಾಂಪೌಂಡ್ ಹಾಗೂ ಎರಡು ನೂತನ ತರಗತಿ ಕೊಠಡಿಗಳ ಉದ್ಘಾಟನೆ ನೆರವೇರಿಸಲಾಗಿತ್ತು. ಈ ಯಶಸ್ವಿ ಯೋಜನೆಯ ಬೆನ್ನಲ್ಲೇ, ಸಾರ್ವಜನಿಕರ ಬೇಡಿಕೆಯಂತೆ ಇದೀಗ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಪ್ರಾರಂಭಿಸುವ ಪ್ರಕ್ರಿಯೆ ಯಶಸ್ವಿಯಾಗಿ ಮುನ್ನಡೆಸಲಾಗಿದೆ ಎಂದು ತಿಳಿಸಿದರು.
ಸ್ಥಳೀಯ ಗ್ರಾಮಸ್ಥರು ಹಾಗೂ ಶಾಲಾ ಮಂಡಳಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖಂಡರು, ಮುಂಬರುವ ದಿನಗಳಲ್ಲಿ ಶಾಲೆಗೆ ಅಗತ್ಯವಿರುವ ಇನ್ನೂ 2 ಹೆಚ್ಚುವರಿ ತರಗತಿ ಕೊಠಡಿಗಳನ್ನು ಮಂಜೂರು ಮಾಡಲಾಗುವುದು. ಇದರೊಂದಿಗೆ ಸಣ್ಣ ಮಕ್ಕಳ ದೈಹಿಕ ವಿಕಾಸಕ್ಕಾಗಿ ಶಾಲಾ ಆವರಣದಲ್ಲಿ ಸುಸಜ್ಜಿತ ಆಟದ ಮೈದಾನ ನಿರ್ಮಿಸಿಕೊಡಲಾಗುವುದು. ಬಸಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಶೀಘ್ರದಲ್ಲೇ ದುರಸ್ತಿಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಶಾಲೆಗೆ ಅಗತ್ಯ ಮೂಲಸೌಕರ್ಯಗಳು, ಕಟ್ಟಡ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಗ್ರಾಮಸ್ಥರು ಸಹ ಇದಕ್ಕೆ ಕೈ ಜೋಡಿಸುತ್ತಿರುವುದು ಶ್ಲಾಘನೀಯ. ಆದರೆ, ಈ ವೇಳೆ ಎಲ್ಲ ಸೌಲಭ್ಯಗಳನ್ನು ಬಳಸಿ ಶಾಲೆಯಲ್ಲಿ ಶ್ರದ್ಧೆಯಿಂದ ಚೆನ್ನಾಗಿ ಓದಿ ಉತ್ತಮ ಪ್ರಜೆಗಳಾಗುವುದು ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದು ತಿಳಿಸಿದರು.ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಪೋಷಕರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಅವಲೋಕಿಸಿದಾಗ, ಅಲ್ಲಿ ಕಲಿಯುವ ಮಕ್ಕಳಿಗೆ ಹೆಚ್ಚಿನ ಉತ್ತೇಜನ, ಪ್ರೋತ್ಸಾಹ ಹಾಗೂ ಉತ್ಸಾಹ ತುಂಬುವಂತಹ ಕಾರ್ಯಕ್ರಮಗಳ ಅಗತ್ಯತೆ ಹೆಚ್ಚಾಗಿದೆ. ಖಾಸಗಿ ಶಾಲೆಗಳ ದುಬಾರಿ ಶುಲ್ಕಕ್ಕಾಗಿ ಪೋಷಕರು ಸಾಲದ ಸುಳಿಗೆ ಸಿಲುಕುವುದನ್ನು ತಪ್ಪಿಸಲು ಸರ್ಕಾರಿ ಶಾಲೆಗಳು ಉತ್ತಮಪಡಿಸುವುದು ಇದಕ್ಕೆ ಪರ್ಯಾಯವಾಗಿವೆ ಎಂದರು.
ಸರ್ಕಾರ ಒದಗಿಸುತ್ತಿರುವ ಸೌಲಭ್ಯಗಳು ಕೇವಲ ಉಚಿತವಲ್ಲ, ಅವು ಮಕ್ಕಳ ಹಕ್ಕುಗಳಾಗಿವೆ. ಬೆಳಗಿನ ರಾಗಿಮಾಲ್ಟ್, ಹಾಲು ಮತ್ತು ಮಧ್ಯಾಹ್ನದ ಬಿಸಿಯೂಟ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ. ಉಚಿತ ಪಠ್ಯಪುಸ್ತಕಗಳು, ನೋಟ್‌ಬುಕ್‌ಗಳು, ಯೂನಿಫಾರ್ಮ್ ಮತ್ತು ಶೂ-ಸಾಕ್ಸ್ ಒದಗಿಸುವ ಮೂಲಕ ಪೋಷಕರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಸಂಪೂರ್ಣವಾಗಿ ತಗ್ಗಿಸಲಾಗಿದೆ. ಸಾಧನೆಗೆ ಶಾಲೆ ಮುಖ್ಯವಲ್ಲ, ಶ್ರಮ ಮುಖ್ಯ ಸರ್ಕಾರಿ ಶಾಲೆಯಲ್ಲಿ ಓದಿದವರು ಉನ್ನತ ಸ್ಥಾನಕ್ಕೇರಲು ಸಾಧ್ಯವಿಲ್ಲ ಎಂಬುದು ಕೇವಲ ಭ್ರಮೆ ಎಂದರು.ದೇಶದ ಅತ್ಯುನ್ನತ ಸೇವೆಗಳಾದ ಐ.ಎ.ಎಸ್., ಐ.ಪಿ.ಎಸ್, ಕಂದಾಯ ಸೇವೆಗಳು, ನಾಸಾ ಮತ್ತು ಇಸ್ರೋದಂತಹ ಸಂಸ್ಥೆಗಳಲ್ಲಿರುವ ವಿಜ್ಞಾನಿಗಳು, ಪ್ರಖ್ಯಾತ ವೈದ್ಯರು ಮತ್ತು ಎಂಜಿನಿಯರ್‌ಗಳು ಸರ್ಕಾರಿ ಶಾಲೆಗಳಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದವರಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಪರಿಣಿತ, ತರಬೇತಿ ಪಡೆದ ಮತ್ತು ಅರ್ಹತೆಯುಳ್ಳ ಶಿಕ್ಷಕರಿರುತ್ತಾರೆ. ಇದು ಗುಣಮಟ್ಟದ ಶಿಕ್ಷಣಕ್ಕೆ ದೊಡ್ಡ ಬುನಾದಿಯಾಗಿದೆ ಎಂದು ತಿಳಿಸಿದರು.
ಶಿಕ್ಷಣ ಕೇವಲ ಅಂಕ ಗಳಿಕೆಗೆ ಸೀಮಿತವಾಗಬಾರದು. ಈ ನಿಟ್ಟಿನಲ್ಲಿ ವೈವಿಧ್ಯಮಯ ಚಟುವಟಿಕೆಗಳ ಮೂಲಕ ನಿರಂತರ ಕಲಿಕೆಯನ್ನು ಜೀವಂತವಾಗಿಡಲು ಅನೇಕ ಯೋಜನೆಗಳನ್ನು ರೂಪಿಸಲಾಗಿದೆ ಕಲೆ, ಕ್ರೀಡೆ, ವಿಜ್ಞಾನ ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸರ್ಕಾರಿ ಶಾಲೆಯ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಬಹುದು. ಇದು ಮಕ್ಕಳಲ್ಲಿ ಕೀಳರಿಮೆಯನ್ನು ಹೋಗಲಾಡಿಸಿ, ಆತ್ಮವಿಶ್ವಾಸ ಮತ್ತು ಉತ್ಸಾಹವನ್ನು ತುಂಬುತ್ತದೆ, ಖಾಸಗಿ ಮತ್ತು ಸರ್ಕಾರಿ ಶಾಲೆಗಳ ನಡುವಿನ ತಾರತಮ್ಯದ ಭಾವನೆ ಮೊದಲು ಪೋಷಕರ ಮನಸ್ಸಿನಿಂದ ದೂರಾಗಬೇಕು. ಸರ್ಕಾರಿ ಶಾಲೆಗಳು ಬಡವರ ಶಾಲೆಗಳಲ್ಲ, ಅವು ನಮ್ಮ ಹಕ್ಕು ಮತ್ತು ಗುಣಮಟ್ಟದ ಶಿಕ್ಷಣದ ಕೇಂದ್ರಗಳು ಎಂಬ ಭಾವನೆ ಸಮಾಜದಲ್ಲಿ ಮೂಡಬೇಕಿದೆ ಎಂದರು.ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಬಸಾಪುರ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿದರು. ಮತ್ತು ಪ್ರಸಕ್ತ ಸಾಲಿನ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತರಗತಿಯ ಟೇಪ್ ಕತ್ತರಿಸಿ 2026-27ನೇ ಸಾಲಿನ ಶೈಕ್ಷಣಿಕ ಸಾಲಿಗೆ ಪ್ರಾರಂಭೋತ್ಸವನ್ನು ಮಾಡಿದರು. ಎಲ್.ಕೆ.ಜಿ. ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದರು.ಡಿಡಿಪಿಐ ಕೃಷ್ಣ ಪ್ರಸಾದ, ಡಯಟ್ ಪ್ರಾಚಾರ್ಯೆ ಗೀತಾ, ಬಿಇಒ ವಿಶಾಲಾಕ್ಷಿ, ಬಸಾಪುರ ಗ್ರಾಮದ ಶಾಲೆಗಳ ಶಿಕ್ಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
- - --1ಕೆಡಿವಿಜಿ35:
ದಾವಣಗೆರೆಯ ಬಸಾಪುರದಲ್ಲಿ ಶಾಲಾ ಶಿಕ್ಷಣ ಇಲಾಖಾ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಹಾಗೂ ಪೋಷಕರು, ಶಿಕ್ಷಕರ ಮಹಾಸಭಾ ಕಾರ್ಯಕ್ರಮವನ್ನು ಶಾಸಕ ಸಮರ್ಥ ಶಾಮನೂರು ಮಲ್ಲಿಕಾರ್ಜುನ ಉದ್ಘಾಟಿಸಿದರು.