ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಪುಷ್ಪೋದ್ಯಮದಲ್ಲಿ ಅತಿ ಹೆಚ್ಚು ಲಾಭ ತಂದುಕೊಡುವ ಬೆಳೆ ಎಂದೇ ಖ್ಯಾತಿ ಪಡೆದಿರುವ ಸೇವಂತಿಗೆ ಬೆಳೆಗೆ ಈ ಬಾರಿ ನಾನಾ ರೋಗಗಳ ಕಾಟದಿಂದ ಕಂಟಕ ಎದುರಾಗಿದೆ. ತೋಟಗಳಲ್ಲೇ ಸೇವಂತಿಗೆ ಗಿಡಗಳು ಸಾಯುತ್ತಿದ್ದು, ರೈತರಿಗೆ ದಿಕ್ಕೇ ತೋಚದಂತಾಗಿದೆ.ಮಾರುಕಟ್ಟೆಯಲ್ಲೂ ಸೇವಂತಿಗೆ ಹೂವಿಗೆ ಉತ್ತಮ ದರ ಸಿಗುತ್ತಿದೆ. ಹಬ್ಬಗಳ ಸೀಸನ್‌ಗಳಲ್ಲಿ ಪ್ರತಿ ಕೆ.ಜಿ. ಸೇವಂತಿಗೆ ಹೂವು 300ರಿಂದ 400 ರೂ.ವರೆಗೂ ಮಾರಾಟವಾಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಸೇವಂತಿಗೆಗೆ 300 ರೂ. ಬೆಲೆ ಇದೆ. ಆದರೆ ಈಗ ಬದಲಾದ ವಾತಾವರಣದಿಂದ ಸೇವಂತಿಗೆ ಬೆಳೆ ನಾನಾ ರೋಗಗಳಿಗೆ ತುತ್ತಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಉತ್ತಮ ದರವಿದ್ದರೂ ರೈತರಿಗೆ ಲಾಭವಿಲ್ಲದಂತಾಗಿದೆ.
ರೋಗಪೀಡಿತ ಸೇವಂತಿಗೆಸೇವಂತಿಗೆ ಬೆಳೆಯನ್ನು ಸೊರಗು ರೋಗ ಕಾಡುತ್ತಿದೆ. ಮೊದಲಿಗೆ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಕಂದು ಬಣ್ಣಕ್ಕೆ ತಿರುಗುತ್ತವೆ. ನಂತರ ಗಿಡವು ಬಾಡಿ ಒಣಗುತ್ತದೆ. ರೋಗಪೀಡಿತ ಗಿಡಗಳನ್ನು ಸೀಳಿ ನೋಡಿದಾಗ ಕಾಂಡದ ಅಂಚಿನಲ್ಲಿ ಕಂದು ಬಣ್ಣದ ಮಚ್ಚೆಗಳು ಕಾಣುತ್ತವೆ. ಈ ರೋಗವು ಹೆಚ್ಚು ಮಣ್ಣಿನ ತೇವಾಂಶವಿರುವ ಕಡೆ ಹೆಚ್ಚಾಗಿ ಕಂಡುಬರುತ್ತಿದ್ದು, ಬಹುಬೇಗ ನೀರಿನ ಮೂಲಕ ಗಿಡದಿಂದ ಗಿಡಕ್ಕೆ ಹರಡುವುದರಿಂದ ಇಡೀ ತೋಟಗಳೇ ಹಾಳಾಗುತ್ತಿವೆ. ಇನ್ನೊಂದೆಡೆ ಗುಲಾಬಿ ಮತ್ತು ಚೆಂಡು ಹೂವಿಗೆ ಎಲೆಚುಕ್ಕೆ ರೋಗ ಹೆಚ್ಚಾಗಿ ಕಾಡುತ್ತಿದೆ.
ಈಗಾಗಲೇ ಈ ರೋಗದ ಬಗ್ಗೆ ದೂರುಗಳು ಬಂದ ಹಿನ್ನೆಲೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳು ತೋಟಗಳಿಗೆ ಭೇಟಿ ನೀಡಿ ರೈತರಿಗೆ ಸಲಹೆಗಳನ್ನು ನೀಡಿದ್ದಾರೆ. ರೋಗ ಬಂದ ನಂತರ ತಡೆಯುವ ಬದಲು ನಾಟಿ ಆರಂಭದಿಂದಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಜಾಗೃತಿ ಮೂಡಿಸಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಶ್ರಾವಣದಲ್ಲಿ ಒಳ್ಳೆಯ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಸೇವಂತಿಗೆ ಗಿಡಕ್ಕೆ ಕೊಳೆ ರೋಗಸೇವಂತಿ ನಾಟಿ ಮಾಡಿದ ದಿನದಿಂದ ಒಂದಿಲ್ಲೊಂದು ರೋಗ ಸೇವಂತಿಗೆ ಬೆಳೆಯನ್ನು ಕಾಡುತ್ತಿದೆ. ಎಷ್ಟೇ ಔಷಧಗಳನ್ನು ಸಿಂಪಡಿಸಿದರೂ ಗಿಡ ಸಾಯುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಈಗ ತುಂತುರು ಮಳೆಯಾಗುತ್ತಿದ್ದು ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿದೆ. ನಾಟಿ ಮಾಡಿದ್ದ ಸೇವಂತಿಗೆಗೆ ಕೊಳೆ ರೋಗ ಹರಡಿದ್ದು, ಗಿಡಗಳ ಬೆಳವಣಿಗೆ ಯಾಗದೆ ಉತ್ತಮ ಇಳುವರಿ ಬಾರದ ಕಾರಣ ರೈತರು ಗಿಡಗಳನ್ನೇ ಕತ್ತರಿಸಿ ಹಾಕುತ್ತಿದ್ದಾರೆ.ಕೃಷಿ ವಿಜ್ಞಾನ ಕೇಂದ್ರದ ಕೃಷಿ ರೋಗ ಶಾಸ್ತ್ರಜ್ಞರು ಪ್ರತಿಕ್ರಿಯಿಸಿದ್ದು, ಸೊರಗು ರೋಗದಿಂದ ಸೇವಂತಿಗೆ ಗಿಡಗಳು ಸತ್ತಿವೆ. ಇದಕ್ಕೆ ನಿರಂತರವಾಗಿ ಇರುವ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರ ಮಳೆಯೇ ಕಾರಣ. ನಾಟಿ ಆರಂಭದಲ್ಲೇ ಔಷಧೋಪಚಾರವನ್ನು ಮಾಡಿದರೆ ಈ ರೋಗ ತಡೆಯಬಹುದು. ಅಲ್ಲದೇ ಎಚ್ಚರಿಕೆಯಿಂದ ಬೆಳೆಯನ್ನು ಗಮನಿಸುತ್ತಾ ಕಾಲಕಾಲಕ್ಕೆ ಶಿಫಾರಸು ಮಾಡಿದಂತೆ ಔಷಧೋಪಚಾರ ಮಾಡಬೇಕುಎನ್ನುತ್ತಾರೆ
ಮುಂಜಾಗ್ರತೆ ವಹಿಸಬೇಕುಹಲವು ಕಡೆ ಹೂವು ಬೆಳೆಗಾರರಿಂದ ಸೊರಗು ರೋಗದ ಬಗ್ಗೆ ದೂರುಗಳು ಬಂದಿದ್ದು ಕೃಷಿ ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಹಲವು ಮುಂಜಾಗ್ರತಾ ಕ್ರಮಗಳನ್ನು ಶಿಫಾರಸು ಮಾಡಿದ್ದಾರೆ. ರೈತರು ನಾಟಿ ಹಂತದಿಂದಲೇ ಎಚ್ಚೆತ್ತುಕೊಂಡರೆ ರೋಗಗಳನ್ನು ತಡೆಯಬಹುದು. ಬದಲಾದ ವಾತಾವರಣದಿಂದ ರೋಗದ ತೀವ್ರತೆ ಹೆಚ್ಚಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹದು ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು
;Resize=(128,128))
;Resize=(128,128))