ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆ ಆಶ್ರಯದಲ್ಲಿ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ 121ನೇ ಸ್ಥಾಪನಾ ದಿನಾಚರಣೆ ಹಾಗೂ ಸಾಧಕರಿಗೆ ಶ್ರೇಷ್ಠ ವೃತ್ತಿಪರ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಗರದ ಆಫೀಸರ್ಸ್ ಕ್ಲಬ್ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷೆ ಸಜ್ಞಾ ಭಾಸ್ಕರ್ ನೇತೃತ್ವದಲ್ಲಿ ನಡೆಯಿತು.
ಸಜ್ಞಾ ಭಾಸ್ಕರ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ರೋಟರಿ ಸಂಸ್ಥೆಯ ವೃತ್ತಿಪರ ಸೇವಾ ಮಾಸಾಚರಣೆ ಹಾಗೂ ಯೋಜನೆಯ ಮಹತ್ವ ಮತ್ತು ಉದ್ದೇಶವನ್ನು ವಿವರಿಸಿದರು.ಈ ಸಂದರ್ಭ, ಕ್ರಿಕೆಟ್ ಆಟಗಾರನಾಗಿ, ಯುವಕರಿಗೆ ಕ್ರಿಕೆಟ್ ತರಬೇತುದಾರ- ತೀರ್ಪುಗಾರರಾಗಿ ಕಸ್ತೂರಿ ಬಾಲಕೃಷ್ಣ ಪೈ ಅವರು ದ.ಕ. ಜಿಲ್ಲೆಯ ಕ್ರಿಕೆಟ್ ಸಂಸ್ಥೆಯಲ್ಲಿ ವ್ಯವಸ್ಥಾಪಕರಾಗಿ 50 ವರ್ಷಗಳ ಸುದೀರ್ಘ ಅವಧಿಯಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಶ್ರೇಷ್ಠ ವೃತ್ತಿಪರ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.ಮುಖ್ಯ ಅತಿಥಿ, ವಲಯ ಸಹಾಯಕ ಗವರ್ನರ್ ಡಾ. ರವಿಶಂಕರ್ ರಾವ್ ಅವರು ರೋಟರಿ ಸಂಸ್ಥೆಯ ಸ್ಥಾಪನೆ, ಇತಿಹಾಸ, ಬೆಳವಣಿಗೆ, ಕೊಡುಗೆಗಳು ಮತ್ತು ವಿವಿಧ ಸಮಾಜ ಸೇವಾ ಸಾಧನೆಗಳ ಮಾಹಿತಿ ನೀಡಿದರು. ಸ್ಥಾಪನಾ ಅಧ್ಯಕ್ಷ ಡಾ. ರಂಜನ್ ಪ್ರಶಸ್ತಿ ವಿಜೇತರ ಪರಿಚಯ ಮತ್ತು ಸಾಧನೆಗಳ ವಿವರ ನೀಡಿ, ಕ್ರಿಕೆಟ್ ಕ್ಷೇತ್ರಕ್ಕೆ ಪೈ ಅವರ ಕೊಡುಗೆ ಅಮೂಲ್ಯ ಎಂದು ನುಡಿದು ಅಭಿನಂದಿಸಿದರು.
ವೇದಿಕೆಯಲ್ಲಿ ವೃತ್ತಿಪರ ಸೇವಾ ಯೋಜನೆಯ ನಿರ್ದೇಶಕ ನಿತಿನ್ ದೇವಾಡಿಗ ಇದ್ದರು. ಕಾರ್ಯದರ್ಶಿ ಸುಜೀರ್ ಪದ್ಮನಾಭ ನಾಯ್ಕ್ ವರದಿ ಮಂಡಿಸಿ, ವಂದಿಸಿದರು.