ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪರಿಸರ ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ಸಾಗಬೇಕಿದ್ದು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.ಮೈಸೂರು ವಿವಿ ಸಹಯೋಗದೊಂದಿಗೆ ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಮತ್ತು ರೋಟರಿ ಕ್ಲಬ್ ಆಫ್ ಶ್ರೀಗಂಧ ಮೈಸೂರು ಸಂಯುಕ್ತವಾಗಿ ವಿವಿ ಆವರಣದಲ್ಲಿ ಶುಕ್ರವಾರ ನಡೆದ 2 ಸಾವಿರ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಕಾಳಜಿಯ ಜೊತೆಗೆ ಸುಸ್ಥಿರ ಅಭಿವೃದ್ದಿಯು ಸಮಾಜಕ್ಕೆ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ನಾವೆಲ್ಲರೂ ಪರಿಸರ ಉಳಿಸಿ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿ, ಕರ್ತವ್ಯ ಹೊಂದಬೇಕು. ವಿವಿ ಆವರಣ ಮತ್ತಷ್ಟು ಹಸಿರು ವಾತಾವರಣವಾಗಲು ಅಗತ್ಯ ಸಹಕಾರ ನೀಡಲಾಗುವುದು. ಪರಿಸರವನ್ನು ನಾವು ನಾಶ ಮಾಡುತ್ತ ಹೋದರೆ, ಮುಂದೊಂದು ದಿನ ಮನುಕುಲವೇ ನಾಶವಾಗುವ ಸಂದರ್ಭ ಎದುರಾಗಬಹುದಾಗಿದ್ದು, ಪರಿಸರವನ್ನು ತಾಯಿಯಂತೆ ಪೂಜಿಸಿ, ಮಗುವಿನಂತೆ ಪಾಲನೆ ಮಾಡಬೇಕು ಎನ್ನುವುದೇ ನಮ್ಮೆಲ್ಲರ ಆಶಯವಾಗಿದೆ ಎಂದರು.ರೋಟರಿ ಜಿಲ್ಲಾ ಗವರ್ನರ್ ವಿಕ್ರಮದತ್ತ ಮಾತನಾಡಿ, ಪರಿಸರ, ಸಸಿಗಳನ್ನು ನೆಟ್ಟು ಪೋಷಿಸಬೇಕು. ಸುಂದರ ಪರಿಸರವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ದೈನಂದಿನ ಜೀವನ ಶೈಲಿಯಲ್ಲಿ ಪರಿಸರ ಪೂರಕ ಕ್ರಮಗಳನ್ನು ಅಳವಡಿಸಿಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ರೋಟರಿ ಭೂಮಿ ಮತ್ತು ಹಸಿರು ಉಳಿಸಿ ವಿಭಾಗದ ಉಪಾಧ್ಯಕ್ಷ ಎನ್.ವೈ. ಚಿಗರಿ ಮಾತನಾಡಿ, ಪರಿಸರ ನಾಶದಿಂದ ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿದ್ದು, ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಸರವನ್ನು ಉಳಿಸಿ ಬೆಳೆಸುವಲ್ಲಿ ಅತ್ಯಂತ ಆಸಕ್ತಿ ವಹಿಸಬೇಕಿದೆ ಎಂದರು.ನಿವೃತ್ತ ಪ್ರಾಂಶುಪಾಲ ಡಾ.ಸಿ. ರಾಮಸ್ವಾಮಿ, ಮೈಸೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಷ್ಮಾ, ಎನ್‌ಎಸ್‌ಎಸ್ ಸಂಯೋಜಕರಾದ ಡಾ.ಎಂ.ಬಿ. ಸುರೇಶ್, ಡಾ. ಮಧುಸೂಧನ್, ಮಾನಸಗಂಗೋತ್ರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ. ರಂಗರಾಜನ್, ರೋಟರಿ ಜಿಲ್ಲಾ ಕಾರ್ಯದರ್ಶಿ ಡೋನರ್ ರಿತೇಶ್ ಬಳಿಗ, ವಲಯ7ರ ಸಹಾಯಕ ಗವರ್ನರ್ ಕೆ.ಎ. ಪ್ರಹಲ್ಲಾದ್, ವಲಯ 8ರ ಸಹಾಯಕ ಗವರ್ನರ್ ಎಂ. ರಾಜೀವ್, ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಅಧ್ಯಕ್ಷ ಆರ್. ರಾಜೇಶ್, ರೊಟರಿ ಕ್ಲಬ್ ಆಫ್ ಶ್ರೀಗಂಧದ ಅಧ್ಯಕ್ಷ ಎನ್. ಚಂದ್ರು, ರೊಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಸಂಸ್ಥಾಪಕ ಅಧ್ಯಕ್ಷ ಕೆ. ಮಂಜುನಾಥ್, ಕಾರ್ಯದರ್ಶಿ ಬಿ.ಸಿ. ಸುಂದರರಾಜ, ಎನ್. ರಾಮು, ಕೇಶವ ಬಿದರೆ, ಸುಧಿಂದ್ರ, ಮಧುಸೂಧನ್, ಶಂಭು ಹೆಗಡೆ, ನಾರಾಯಣ ನಾಯಕ್ ಇದ್ದರು.