ಉನ್ನತ ನೈತಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು, ಜವಾಬ್ದಾರಿಯನ್ನು ನಿರ್ವಹಿಸುವುದು, ನಾಯಕತ್ವವನ್ನು ರೂಪಿಸಿಕೊಳ್ಳುವುದು, ನಮ್ಮ ಕೌಶಲ್ಯ ಪ್ರಭಾವವನ್ನು ಬಳಸಿಕೊಂಡು ಸಮಾಜದಲ್ಲಿ ಸಕಾರಾತ್ಮಕ ಶಾಶ್ವತ ಬದಲಾವಣೆಗಳನ್ನು ತರಬೇಕು.

ಯಲ್ಲಾಪುರ: ನಾವು ಯಾವುದೇ ಊರಿನಲ್ಲಿದ್ದರೂ ಇಡೀ ಜಗತ್ತಿಗೆ ತಲುಪಬಹುದು. ಯಲ್ಲಾಪುರದಲ್ಲಿದ್ದುಕೊಂಡೇ ಮೆಕ್ಸಿಕೋದಂತಹ ಯಾವುದೇ ದೇಶಕ್ಕೂ ಸೇವೆ ಸಲ್ಲಿಸಬಹುದು. ಅದೇ ರೋಟರಿಯ ಶಕ್ತಿ ಎಂದು 3170ರ ಜಿಲ್ಲಾ ಗವರ್ನರ್‌ ರೋ. ಡಾ. ಲೆನ್ನಿ ಡಿ''''ಕೋಸ್ಟಾ ಹೇಳಿದರು.

ಅವರು ಭಾನುವಾರ ಯಲ್ಲಾಪುರದ ಅಡಿಕೆ ಭವನದಲ್ಲಿ ನೂತನವಾಗಿ ಪ್ರಾರಂಭಗೊಂಡ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.

ಉನ್ನತ ನೈತಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು, ಜವಾಬ್ದಾರಿಯನ್ನು ನಿರ್ವಹಿಸುವುದು, ನಾಯಕತ್ವವನ್ನು ರೂಪಿಸಿಕೊಳ್ಳುವುದು, ನಮ್ಮ ಕೌಶಲ್ಯ ಪ್ರಭಾವವನ್ನು ಬಳಸಿಕೊಂಡು ಸಮಾಜದಲ್ಲಿ ಸಕಾರಾತ್ಮಕ ಶಾಶ್ವತ ಬದಲಾವಣೆಗಳನ್ನು ತರಬೇಕು ಎಂದರು.

ರೋಟರಿ ವಿಶ್ವಶಾಂತಿಗಾಗಿ ಕೆಲಸ ಮಾಡುವ ಸಂಘಟನೆ. ಸಮುದಾಯಗಳನ್ನು ಬೆಂಬಲಿಸುವ ಮೂಲಕ ಪರಸ್ಪರ ತಿಳಿವಳಿಕೆಯನ್ನು ಬೆಳೆಸಿ ಶಾಂತಿಯನ್ನು ತರಬಹುದಾಗಿದೆ. ರೋಟರಿಯ ಐದು ಸೇವಾ ಮಾರ್ಗಗಳಾದ ಕ್ಲಬ್, ವೃತ್ತಿ, ಅಂತಾರಾಷ್ಟ್ರೀಯ, ಯುವ, ಸಮುದಾಯ ಸೇವೆ ಹೀಗೆ ಐದು ರೀತಿಯಲ್ಲಿ ರೋಟರಿ ಕೆಲಸ ಮಾಡುತ್ತದೆ. ನಾವು ಮಾಡುವ ಪ್ರತಿಯೊಂದು ಕೆಲಸವೂ ಶಾಶ್ವತ ಪರಿಣಾಮವನ್ನು ಉಂಟು ಮಾಡುವಂತೆ ಕಾರ್ಯ ನಿರ್ವಹಿಸಬೇಕು ಎಂದರು.

ಪ್ರಾಂತಪಾಲರ ವಿಶೇಷ ಪ್ರತಿನಿಧಿ ರೋ. ಡಾ‌. ದಿನೇಶ ಹೆಗಡೆ ಸಿರ್ಸಿ ಮಾತನಾಡಿ, ಯಲ್ಲಾಪುರದಲ್ಲಿ ಹಲವು ವರ್ಷಗಳ ಹಿಂದಿನಿಂದಲೂ ರೋಟರಿ ಸಂಸ್ಥೆ ಉತ್ತಮ ಕಾರ್ಯ ಮಾಡುತ್ತಿತ್ತು. ಕೆಲವು ವರ್ಷಗಳ ಹಿಂದೆ ಬಂದಾಗಿತ್ತು. ಕಳೆದ ೩ ತಿಂಗಳ ಹಿಂದೆ ಶಿರಸಿಯಿಂದ ರೋಟರಿ ಪದಾಧಿಕಾರಿಗಳು ಬಂದು ಪ್ರೇರಣೆ, ಮಾರ್ಗದರ್ಶನ ನೀಡಿದ್ದೆವು. ಇಂದು ಯುವಕರ ತಂಡ ಪದಗ್ರಹಣದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ ಎಂದರು. ಉಪಪ್ರಾಂತಪಾಲರಾದ ಡಾ. ಸುಮನ್ ಹೆಗಡೆ ಗವರ್ನರರನ್ನು ಪರಿಚಯಿಸಿದರು. ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ರಾಘವೇಂದ್ರ ಭಟ್ ಸುಣಜೋಗ ಮಾತನಾಡಿ, ನಾನು ಕೃಷಿ ಕುಟುಂಬದಿಂದ ಬಂದಿದ್ದೇನೆ. ಯಲ್ಲಾಪುರದ ಹೊಸ ಟೀಮಿಗೆ 34 ಸದಸ್ಯರನ್ನು ಸೇರ್ಪಡೆ ಮಾಡಿ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ನಾವೆಲ್ಲ ದಿನೇಶ ಹೆಗಡೆಯವರ ಮಾರ್ಗದರ್ಶನದಲ್ಲಿ ಸಮಾಜಮುಖಿಯಾದ ಕಾರ್ಯವನ್ನು ಮಾಡುತ್ತೇವೆ ಎಂದರು.

ರೋಟರಿ ನೂತನ ಕಾರ್ಯದರ್ಶಿ ಪ್ರಮೋದ್ ಹೆಗಡೆ, ಖಜಾಂಚಿ ಸತೀಶ್ ಹೆಬ್ಬಾರ್ ಅಧ್ಯಕ್ಷರ ಜತೆ ಅಧಿಕಾರ ವಹಿಸಿಕೊಂಡರು. ಜಿ.ವಿ. ಭಟ್ ಕುಮಾರ್ ಹೆಗಡೆ, ಡಾ. ಪಿ.ಎನ್. ನಾಗರಾಜ್ ನೂತನ ಪದಾಧಿಕಾರಿಗಳ ಪರಿಚಯ ಮಾಡಿದರು. ಶಿರಸಿ ರೋಟರಿ ಅಧ್ಯಕ್ಷ ಶ್ರೀಪತಿ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನೂತನ ರೋಟರಿಯನ್ ಡಾ. ವಿಘ್ನೇಶ್ವರ ಭಟ್ ಬಾಗಿನ ಕಟ್ಟ ನಿರ್ವಹಿಸಿದರು. ನೂತನ ಕ್ಲಬ್ ಕಾರ್ಯದರ್ಶಿ ಪ್ರಮೋದ್ ಹೆಗಡೆ ವಂದಿಸಿದರು.