ಸಾರಾಂಶ
ಬ್ಯಾಡಗಿ: ರೋಟರಿ ಇದೊಂದು ವಿಶ್ವಮಟ್ಟದ ಸಂಘಟನೆ, ಸಮಾನ ಮನಸ್ಕರೊಂದಿಗೆ ಸ್ಥಳೀಯ ಆರ್ಥಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮೂಲಕ ಪ್ರಪಂಚದಲ್ಲೇ ಅತ್ಯಂತ ವಿಶಿಷ್ಟವಾಗಿ ಸಮಾಜಮುಖಿ ಕೆಲಸಗಳನ್ನು ನಿರ್ವಹಿಸುತ್ತಿದೆ ಎಂದು ಗವರ್ನರ್ ಲೆನ್ನಿ-ಡಿ-ಕೋಸ್ಟಾ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಬಿಇಎಸ್‌ಎಂ ಕಾಲೇಜು ಸಭಾಭವನದಲ್ಲಿ ಇನ್ನರ್‌ವ್ಹೀಲ್ ಮತ್ತು ರೋಟರಿ ಕ್ಲಬ್‌ನ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರೋಟರಿ ಸಂಸ್ಥೆಯ ಸದಸ್ಯರು ಪ್ರಪಂಚದಾದ್ಯಂತ ಅತ್ಯಂತ ನಿರಂತರ ಸಮಸ್ಯೆಗಳ ಮೇಲೆ ಗಮನವನ್ನಿರಿಸಿ ಅವುಗಳಿಗೆ ಪರಿಹಾರ ಹುಡುಕುವ ಜವಾಬ್ದಾರಿಯನ್ನು ಹೊಂದಿದ್ದು ವಿಶ್ವದೆಲ್ಲೆಡೆ 46 ಸಾವಿರಕ್ಕೂ ಹೆಚ್ಚು ಕ್ಲಬ್‌ಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸುತ್ತಿವೆ ಎಂದರು.ಆರೋಗ್ಯ, ಶಿಕ್ಷಣ ಮತ್ತು ಪರಿಸರ:ರೋಟರಿ ಸಂಸ್ಥೆಯ 3 ಮೂಲ ಉದ್ದೇಶಗಳ ಮೇಲೆ ಕೇಂದ್ರೀಕೃತಗೊಂಡು ಕೆಲ ನಿರ್ವಹಿಸುತ್ತಿದೆ, ಮೊದಲನೆಯದಾಗಿ ಸಮಾಜದ ಜನರಿಗೆ ಶೈಕ್ಷಣಿಕ ಸೌಲಭ್ಯಗಳನ್ನು ಕೊಡಿಸುವುದು, ಮಾರಣಾಂತಿಕ ರೋಗಗಳ ವಿರುದ್ಧ ಹೋರಾಟ ಮತ್ತು ಚಿಕಿತ್ಸೆ, ಶುದ್ಧ ಕುಡಿಯುವ ನೀರು, ಪರಿಸರದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವ ಮೂಲಕ ಗಿಡಮರಗಳನ್ನು ಬೆಳೆಸುವ ಮೂಲಕ ಮುಂದಿನ ಪೀಳಿಗೆಯ ಬಗ್ಗೆ ಕಾಳಜಿ ತೋರಲಿದ್ದೇವೆ ಎಂದರು.
ಶಾಶ್ವತ ಬದಲಾವಣೆ ನಮ್ಮ ಪ್ರಯತ್ನ: ಒಂದೊಂದು ದೇಶದಲ್ಲಿ ಒಂದೊದು ರೀತಿ ಸಮಸ್ಯೆಗಳಿವೆ. ಸಾಮೂಹಿಕ ಹೊಣೆಗಾರಿಕೆ (ಯೂನಿವರ್ಸಲ್ ರೆಸ್ಪಾನ್ಸಿಬಿಲಿಟಿ) ತೋರುವ ಮೂಲಕ ಅವೆಲ್ಲವುಗಳಿಗೆ ಶಾಶ್ವತ ಪರಿಹಾರಕ್ಕೆ ಪ್ರಯತ್ನ ಮಾಡುತ್ತೇವೆ. ಈ ನಿಟ್ಟಿನಲ್ಲಿ ಭಾರತದ ಮಟ್ಟಿಗೆ ಸಾಕ್ಷರತೆಯ ಸಂಖ್ಯೆ ಹಾಗೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿದ್ದೇವೆ ಎಂದರು.ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿಯನ್ ಡಾ. ಬಸವರಾಜ ಕೇಲಗಾರ ಮಾತನಾಡಿ, ರೋಟರಿ ಸದಸ್ಯರು ಎಂದರೇ ಜೀವಮಾನದ ಸ್ನೇಹಿತರು ಎಂಬುದರಲ್ಲಿ ಎರಡು ಮಾತಿಲ್ಲ. ನಮ್ಮದೇ ಆದಂತಹ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಹಾಗೂ ನಮ್ಮಲ್ಲಿನ ಬಾಂಧವ್ಯಗಳನ್ನು ಗಟ್ಟಿಗೊಳಿಸಲು ರೋಟರಿ ಉತ್ತಮ ವೇದಿಕೆಯಾಗಿದ್ದು ಮಹಿಳೆಯರನ್ನು ಕ್ರಿಯಾಶೀಲಗೊಳಿಸಲು ಇನ್ನರವೀಲ್ ಕ್ಲಬ್ ಸ್ಥಾಪಿತವಾಗಿದೆ ಎಂದರು.
ನೂತನ ಅಧ್ಯಕ್ಷ ಎಸ್.ಎಂ. ಬೂದಿಹಾಳಮಠ ಮಾತನಾಡಿ, ಹಿಂದಿನ ಎಲ್ಲಾ ಸದಸ್ಯರು ತಮ್ಮ ಅವಧಿಯಲ್ಲಿ ಕೊಟ್ಟಂತಹ ಜವಾಬ್ದಾರಿ ಹಾಗೂ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಅವರೆಲ್ಲರ ಮಾರ್ಗದರ್ಶನ ಹಾಗೂ ಸದಸ್ಯರ ಅಭಿಪ್ರಾಯ ಸಹಾಯ ಸಹಕಾರ ಪಡೆದು ಇನ್ನೂ ಹೆಚ್ಚು ವಿನೂತನ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.ನೂತನ ಪದಾಧಿಕಾರಿಗಳ ಆಯ್ಕೆ: ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಎಸ್.ಎಂ. ಬೂದಿಹಾಮಠ ಕಾರ್ಯದರ್ಶಿಯಾಗಿ ನಿರಂಜನ ಶೆಟ್ಟಿಹಳ್ಳಿ ಹಾಗೂ ಇನ್ನರವೀಲ್ ನೂತನ ಅಧ್ಯಕ್ಷರಾಗಿ ಕವಿತಾ ಸೊಪ್ಪಿನಮಠ, ಕಾರ್ಯದರ್ಶಿಯಾಗಿ ರೂಪಾ ಕಡೇಕೊಪ್ಪ ಆಧಿಕಾರ ವಹಿಸಿಕೊಂಡರು.
ಇದೇ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಗೆ ಹೆಚ್ಚು ಅಂಕಗಳಿಸಿದ ಸತೀಶಗೌಡ ಮಲ್ಲನಗೌಡ್ರ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ‍್ಯಕ್ರಮದಲ್ಲಿ ಡಾ. ಎಸ್.ಜಿ. ವೈದ್ಯ, ಡಾ. ರಾಜೇಶ್ವರಿ ಚನ್ನಗೌಡ್ರ, ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ, ಬಸವರಾಜ ಸುಂಕಾಪುರ, ಸುರೇಶ ಗೌಡರ, ಜೆ.ಎಚ್. ಪಾಟೀಲ, ಅನೀಲಕುಮಾರ ಬೊಡ್ಡಪಾಟಿ, ಮಾಲತೇಶ ಉಪ್ಪಾರ, ದ್ರಾಕ್ಷಾಯಣಿ ಹರಮಗಟ್ಟಿ, ಶೋಭಾ ನೋಟದ ಉಪಸ್ಥಿತರಿದ್ದರು.