ಹಳೆ ಆಚರಣೆಗಳು, ಸಂಪ್ರದಾಯಗಳು ಕೂಡ ಹಳೆ ತಲೆಮಾರಿನ ಜನರಂತೆ ಆಧುನಿಕ ಸಮಾಜದಲ್ಲಿ ನಿರ್ಲಕ್ಷಿಸಲ್ಪಡುತ್ತಿದೆ. ಈ ನಿಟ್ಟಿನಲ್ಲಿ ಹಿರಿಯ ಜೀವಿಗಳ ಪ್ರಾಮುಖ್ಯತೆ ಬಗ್ಗೆ ಕಿರಿಯರಲ್ಲಿ ತಿಳುವಳಿಕೆ ಮೂಡಿಸುವ ಪ್ರಯತ್ನಗಳು ಆಗಬೇಕೆಂದು ಹಿರಿಯ ಸಾಹಿತಿ ಬಿ. ಆರ್. ಜೋಯಪ್ಪ ಕರೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಹಳೆ ಆಚರಣೆಗಳು, ಸಂಪ್ರದಾಯಗಳು ಕೂಡ ಹಳೆ ತಲೆಮಾರಿನ ಜನರಂತೆ ಆಧುನಿಕ ಸಮಾಜದಲ್ಲಿ ನಿರ್ಲಕ್ಷಿಸಲ್ಪಡುತ್ತಿದೆ. ಈ ನಿಟ್ಟಿನಲ್ಲಿ ಹಿರಿಯ ಜೀವಿಗಳ ಪ್ರಾಮುಖ್ಯತೆ ಬಗ್ಗೆ ಕಿರಿಯರಲ್ಲಿ ತಿಳುವಳಿಕೆ ಮೂಡಿಸುವ ಪ್ರಯತ್ನಗಳು ಆಗಬೇಕೆಂದು ಹಿರಿಯ ಸಾಹಿತಿ ಬಿ. ಆರ್. ಜೋಯಪ್ಪ ಕರೆ ನೀಡಿದ್ದಾರೆ.ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಕಕ್ಕಡ ಹಬ್ಬದ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಆಟಿ ಸಡಗರ ಕಾರ್ಯಕ್ರಮದಲ್ಲಿ ಕಕ್ಕಡದ ಮಹತ್ವ ವಿಚಾರವಾಗಿ ಮಾತನಾಡಿದರು.
ಪ್ರತೀ ಹಬ್ಬ ಮತ್ತು ಆಚರಣೆಗೂ ಮಹತ್ವವಿದೆ. ಹಿರಿಯರು ಅಂದಿನ ಕಾಲದಲ್ಲಿ ಸುಮ್ಮನೆ ಇಂಥ ಆಚರಣೆಗಳನ್ನು ಜಾರಿಗೆ ತರಲಿಲ್ಲ. ಬದಲಿಗೆ, ಆರೋಗ್ಯವರ್ಧಕವಾದ ಅಂಶಗಳನ್ನೂ ಆಚರಣೆಗಳಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿತ್ತು ಎಂದರು. ಕಕ್ಕಡ ತಿಂಗಳಿನಲ್ಲಿ ಯಾವುದೇ ಸಮಾರಂಭಗಳು ನಡೆಯುವುದಿಲ್ಲ. ಕಕ್ಕಡ ಮಾಸವು ಅಶುಭ ಎಂಬ ನಂಬಿಕೆಯಿದೆ. ಆದರೆ, ಕಕ್ಕಡ ಮಾಸವು ಮಳೆ ತೀವ್ರ ಹೆಚ್ಚಾಗಿರುವ ದಿನಗಳಲ್ಲಿಯೇ ಬರುವ ಕಾರಣ, ಹಿಂದಿನ ಕಾಲದಲ್ಲಿ ಇಂಥ ದಿನಗಳಲ್ಲಿ ಸಮಾರಂಭಗಳನ್ನು ಆಯೋಜಿಸಲು ಕಷ್ಟ ಎಂಬ ಕಾರಣದಿಂದ ಮಾತ್ರವೇ ಕಕ್ಕಡ ಮಾಸದಲ್ಲಿ ಸಮಾರಂಭಗಳನ್ನು ಮಾಡುತ್ತಿರಲಿಲ್ಲ. ವೈಜ್ಞಾನಿಕ ಕಾರಣವೂ ಇದರ ಹಿಂದಿತ್ತು ಎಂದೂ ಜೋಯಪ್ಪ ವಿಶ್ಲೇಷಿಸಿದರು.ರೋಟರಿ ಜಿಲ್ಲೆ 3181 ನ ಗವರ್ನರ್ ಸತೀಶ್ ಬೊಳಾರ್ ಆಟಿ ಸಡಗರಕ್ಕೆ ಆಟಿ ಸೊಪ್ಪಿನ ಪಾಸ ಸೇವಿಸಿ ಚಾಲನೆ ನೀಡಿ ಮಾತನಾಡಿದ ಸತೀಶ್ ಬೊಳಾರ್, ಪ್ರಾಚೀನ ದಿನಗಳ ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಕಾರಣಗಳಿದ್ದವು. ಈಗ ನಗರೀಕರಣ ಹೆಚ್ಚಾಗುತ್ತಿರುವಂತೆಯೇ ಹಲವಷ್ಟು ಆಚರಣೆಗಳನ್ನು ಮರೆಯುತ್ತಿದ್ದೇವೆ. ಹಳೇ ಕಾಲದ ಊಟ, ಖಾದ್ಯಗಳು ಕೂಡ ಮರೆಯಾಗುತ್ತಿದೆ ಎಂದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್. ರಾಜೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಜಿ. ಡಿ. ಚೇತನ್ ವಂದಿಸಿದರು. ವಲಯ 6 ರ ಸಹಯಕ ಗವರ್ನರ್ ಹೆಚ್.ಎಸ್. ವಸಂತ್ ಕುಮಾರ್, ವಲಯ ಸೇನಾನಿಗಳಾದ ಪೊನ್ನಚ್ಚನ ಮಧುಸೂದನ್, ವಸಂತ್ ಕುಮಾರ್, ರೋಟರಿ ಜಿಲ್ಲೆಯ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ರಿತೇಶ್ ಬಾಳಿಗ ಉಪಸ್ಥಿತರಿದ್ದರು. ಮಂಗಳೂರಿನ ಗಾಯಕಿ ಅನುಷ ಬೊಳಾರ್ ಅವರಿಂದ ಜಾನಪದ ಹಾಡು ಕೇಳುಗರ ಮನಸೆಳೆಯಿತು. ರೋಟರಿ ಜಿಲ್ಲೆಯ ಕ್ಲಬ್ ವಿಸ್ತರಣಾ ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ. ನಿರೂಪಿಸಿದರು. ಕಟ್ಟೆಮನೆ ಸೋನಜಿತ್ ಅತಿಥಿ ಪರಿಚಯ ಮಾಡಿದರು.