ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಗುರುಬಸವ ಶ್ರೀಗಳು ಲಿಂಗೈಕ್ಯರಾದ ನಂತರ ಆ ಮಠದ ಭಕ್ತರ ಅಪೇಕ್ಷೆಯೆಂತೆ ಮಠದ ಉಸ್ತುವಾರಿ ವಹಿಸಿಕೊಂಡರು. ನಂತರ ಶ್ರೀಮಠದ ಎಲ್ಲ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ರೊಟ್ಟಿ ಜಾತ್ರೆ ಪ್ರಮುಖವಾಗಿದೆ.
ಎಸ್.ಜಿ. ತೆಗ್ಗಿನಮನಿ
ನರಗುಂದ: ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಮಠದಲ್ಲಿ ಕೋಮು ಸೌಹಾರ್ದದ ಪ್ರತೀಕವಾಗಿರುವ ರೊಟ್ಟಿ ಜಾತ್ರೆ ಜ. 9ರಂದು ಜರುಗಲಿದ್ದು, ಸಾವಿರಾರು ಜನರು ಸೌಹಾರ್ದತೆಗೆ ಸಾಕ್ಷಿಯಾಗಲಿದ್ದಾರೆ.ಹಿಂದು- ಮುಸ್ಲಿಮರು ಕೂಡಿಕೊಂಡು ಜೋಳದ ರೊಟ್ಟಿ ಸಂಗ್ರಹಿಸಿ ಶ್ರೀ ಮಠದಲ್ಲಿ ಪ್ರಸಾದ ಮಾಡುವುದೇ ರೊಟ್ಟಿ ಜಾತ್ರೆಯ ವೈಶಿಷ್ಟ್ಯ.
ಲಿಂ. ಡಾ. ತೋಂಟದ ಸಿದ್ದಲಿಂಗ ಶ್ರೀಗಳು ಡಂಬಳ ಮಠದಲ್ಲಿ ಈ ಪರಂಪರೆ ಪ್ರಾರಂಭಿಸಿದರು. ನಂತರ ಅವರ ಶಿಷ್ಯರು ಶಿರೋಳ ಗ್ರಾಮದ ತೋಂಟದಾರ್ಯ ಮಠದಲ್ಲಿ ಪ್ರಾರಂಭಿಸಲು ಮನವಿ ಮಾಡಿದರು. ಆಗ ಶಿರೋಳ ಮಠದ ಗುರುಬಸವ ಶ್ರೀಗಳು ರೊಟ್ಟಿ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದರು. ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಗುರುಬಸವ ಶ್ರೀಗಳು ಲಿಂಗೈಕ್ಯರಾದ ನಂತರ ಆ ಮಠದ ಭಕ್ತರ ಅಪೇಕ್ಷೆಯೆಂತೆ ಮಠದ ಉಸ್ತುವಾರಿ ವಹಿಸಿಕೊಂಡರು. ನಂತರ ಶ್ರೀಮಠದ ಎಲ್ಲ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ರೊಟ್ಟಿ ಜಾತ್ರೆ ಪ್ರಮುಖವಾಗಿದೆ.ಅದೇ ರೀತಿ ಜಾತ್ರೆಯಲ್ಲಿ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ, ರೈತಪರ ಚಿಂತನಗೋಷ್ಠಿ, ಯೋಗ, ವ್ಯಾಯಾಮ, ಮೂಢನಂಬಿಕೆ ನಿವಾರಣೆ, ಮಹಿಳಾ ಸಬಲೀಕರಣದಂಥ ವಿಚಾರಗಳ ಕುರಿತು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ.
ಮಠದಲ್ಲಿ ರೊಟ್ಟಿ ಜಾತ್ರೆಯನ್ನು ಪ್ರಾರಂಭಿಸಿದಾಗ 2 ಕ್ವಿಂಟಲ್‌ನ ಜೋಳದ ರೊಟ್ಟಿಗಳು ಭಕ್ತರು ತಯಾರಿಸುತ್ತಿದ್ದರು. ಜಾತ್ರೆ ವರ್ಷದಿಂದ ವರ್ಷಕ್ಕೆ ಪ್ರಸಿದ್ಧಿಯನ್ನು ಪಡೆಯುತ್ತಿದೆ. ಇದೀಗ ಸುಮಾರು 25 ಕ್ವಿಂಟಲ್‌ನ ಜೋಳದ ರೊಟ್ಟಿ, 1 ಕ್ವಿಂಟಲ್ ಕರಿಹಿಂಡಿ, ನಾನಾ ತರಕಾರಿ, ಬೇಳೆಕಾಳುಗಳ ಪಲ್ಲೆ ತಯಾರಿಸಿಕೊಂಡು ಬರುವ ಭಕ್ತರು ಒಂದೆಡೆ ಸೇರಿ ಪ್ರಸಾದ ಸೇವಿಸುತ್ತಾರೆ. ಜಾತ್ರೆಯಲ್ಲಿ ಸುಮಾರು 35 ಸಾವಿರ ಭಕ್ತರು ಸೇರಿ ರೊಟ್ಟಿ ಪ್ರಸಾದ ಸ್ವೀಕರಿಸುತ್ತಾರೆ.ಜ. 9ರ ಬೆಳಗ್ಗೆ 10 ಗಂಟೆಗೆ ಆರೋಗ್ಯ ಶಿಬಿರ ನಡೆಯಲಿದೆ. ಸಾಯಂಕಾಲ 5 ಗಂಟಿಗೆ ರೊಟ್ಟಿ ಜಾತ್ರೆ ಮತ್ತು ತೋಂಟದ ಸಿದ್ದಲಿಂಗಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಸಾನ್ನಿಧ್ಯವನ್ನು ಕೊಣ್ಣೂರಿನ ವಿರಕ್ತಮಠದ ಡಾ. ಚನ್ನವೀರ ಶ್ರೀಗಳು, ಚಿಂಚಣಿ ಸಿದ್ಧ ಸಂಸ್ಥಾನ ಮಠದ ನಿಯೋಜಿತ ಉತ್ತರಾಧಿಕಾರಿ ಶಿವಪ್ರಸಾದ ದೇವರು, ಶಾಂತಲಿಂಗ ಶ್ರೀಗಳು ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ, ಸಂಸದ ಪಿ.ಸಿ. ಗದ್ದಿಗೌಡರ, ಶಾಸಕರಾದ ಸಿ.ಸಿ. ಪಾಟೀಲ, ಗಾಲಿ ಜನಾರ್ದನರೆಡ್ಡಿ, ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಬಿ.ಆರ್. ಯಾವಗಲ್ ಇತರರು ಪಾಲ್ಗೊಳ್ಳುವರು.ಸಹಕಾರ: ರೊಟ್ಟಿ ಜಾತ್ರೆ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಇದಕ್ಕೆ ಕಾರಣ ಗದುಗಿನ ಲಿಂ. ತೋಂಟದ ಸಿದ್ದಲಿಂಗ ಶ್ರೀಗಳು, ಲಿಂ. ಗುರುಬಸವ ಶ್ರೀಗಳು ಹಾಗೂ ಶಿರೋಳ ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಸಹಕಾರ ಎಂದು ಶಾಂತಲಿಂಗ ಶ್ರೀಗಳು ತಿಳಿಸಿದರು.ಶ್ರೀಗಳ ಮುನ್ನುಡಿ: ಗದುಗಿನ ತೋಂಟದಾರ್ಯ ಮಠದ ಕೊಮ ಸೌಹಾರ್ದತಾ ಪ್ರಶಸ್ತಿ ಪುರಸ್ಕೃತ ಲಿಂ. ಡಾ. ಸಿದ್ದಲಿಂಗ ಶ್ರೀಗಳು ಈ ಜಾತ್ರೆಯನ್ನು ಎಲ್ಲ ಜಾತಿ, ಧರ್ಮದವರು ಒಗ್ಗೂಡಿಸಿಕೊಂಡು ಆಚರಿಸಲು ಮುನ್ನುಡಿ ಬರೆದರು. ಅದೇ ರೀತಿ ಇವತ್ತಿಗೂ ಮುಂದುವರಿಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಜಾತ್ರೆ ಸಮಿತಿ ಅಧ್ಯಕ್ಷ ಲಾಲಸಾಬ್ ಅರಗಂಜಿ ತಿಳಿಸಿದರು.