ದೇಶಿಯ ಆಹಾರ ಪದ್ಧತಿಯ ರೊಟ್ಟಿ ಜಾತ್ರೆ

| Published : Jan 16 2025, 12:48 AM IST

ಸಾರಾಂಶ

ಪುಂಡಿಪಲ್ಯೆ, ಅಗಸಿ ಚಟ್ನಿ, ಜೋಳದ ರೊಟ್ಟಿ ಜನರ ದೈಹಿಕ ಶಕ್ತಿ ಗಟ್ಟಿಗೊಳಿಸುತ್ತಿದೆ. ಅದಕ್ಕಾಗಿಯೇ ಅದೇ ಆಹಾರ ಜಾತ್ರೆಯ ಮುಖ್ಯ ಆಹಾರವಾಗಿಸಲಾಗಿದೆ.

ನರಗುಂದ: ಗ್ರಾಮೀಣ ಆಹಾರ ಪದ್ಧತಿಯಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎನ್ನುವುದು ತಲೆ ತಲಾಂತರಗಳಿಂದ ಸಾಬೀತಾಗಿದ್ದು, ಅದನ್ನು ಜಾತ್ರೆಯಲ್ಲಿ ಅನುಸರಿಸುವ ಮೂಲಕ ಜನರಲ್ಲಿ ಆರೋಗ್ಯಕರ ಜೀವನ ಪದ್ಧತಿ ರೂಪಿಸುವುದು ಹಿಂದಿನ ಪೂಜ್ಯರ ಉದ್ದೇಶವಾಗಿತ್ತು. ಅದನ್ನು ಅವರು ಸಾಕಾರಗೊಳಿಸಿದ್ದಾರೆ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಹಾಗೂ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಹೇಳಿದರು. ಅವರು ಬುಧವಾರ ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಮಠದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪುಂಡಿಪಲ್ಯೆ, ಅಗಸಿ ಚಟ್ನಿ, ಜೋಳದ ರೊಟ್ಟಿ ಜನರ ದೈಹಿಕ ಶಕ್ತಿ ಗಟ್ಟಿಗೊಳಿಸುತ್ತಿದೆ. ಅದಕ್ಕಾಗಿಯೇ ಅದೇ ಆಹಾರ ಜಾತ್ರೆಯ ಮುಖ್ಯ ಆಹಾರವಾಗಿಸಲಾಗಿದೆ. ಈ ದೇಶಿಯ ಆಹಾರ ಪದ್ಧತಿ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದು. ಈ ಕಾರಣಕ್ಕಾಗಿಯೇ ಇದು ರೊಟ್ಟಿ ಜಾತ್ರೆ ಎಂದೇ ಪ್ರಖ್ಯಾತಿ ಪಡೆದಿದೆ. ಜ. 18 ರಿಂದ 20ರವರೆಗೆ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಜರುಗಲಿದೆ.

ಈ ಮೊದಲು ಡಂಬಳ ಗ್ರಾಮದ ತೋಂಟದಾರ್ಯ ಮಠದಲ್ಲಿ ರೊಟ್ಟಿ ಜಾತ್ರೆ ನಡೆಯುತ್ತಿತ್ತು, ಅದನ್ನು ಶಿರೋಳ ಗ್ರಾಮಕ್ಕೆ ವಿಸ್ತರಿಸಿದಾಗಿನಿಂದ ಹೆಚ್ಚು ಪ್ರಸಿದ್ಧಿ ಪಡೆದಿದೆ. 20 ಕ್ವಿಂಟಲ್ ಜೋಳದ ಹಿಟ್ಟಿನಿಂದ ತಯಾರಿಸಿದ ಲಕ್ಷಕ್ಕೂ ಹೆಚ್ಚು ರೊಟ್ಟಿ ಗ್ರಾಮದ ತಾಯಂದಿರು ಸಿದ್ಧಪಡಿಸಿದ್ದಾರೆ.ಇದರ ಜತೆಗೆ ಕರಿಂಡಿ, ಬಾನಾ, ಕಾಳುಪಲ್ಲೆ, ತರಕಾರಿ ಪಲ್ಯೆ ತಯಾರಿ ಮಾಡಲಾಗುತ್ತದೆ. ಜಾತಿಭೇದವಿಲ್ಲದೇ ಸರ್ವಜನಾಂಗದ ಜನರು ಮನೆ ಮನೆಗಳಿಂದ ರೊಟ್ಟಿ ಮಾಡಿಕೊಂಡು ಬರುತ್ತಾರೆ, ಎಲ್ಲ ಮನೆಗಳ ಆಹಾರವು ಮಠಕ್ಕೆ ಬಂದ ಕೂಡಲೇ ಅದು ಉತ್ತಮ ಆಹಾರವಾಗುತ್ತದೆ ಮತ್ತು ಮಹಾ ಪ್ರಸಾದವಾಗುತ್ತದೆ ಎಂದರು.

ಜಾತ್ರಾಮಹೋತ್ಸವದ ಅಧ್ಯಕ್ಷ ಶಿವಾನಂದ ಯಲಬಳ್ಳಿ ಮಾತನಾಡಿ, ಜ.18 ನೇ ಶನಿವಾರ ಪ್ರಾರಂಭವಾಗುವ ಜಾತ್ರೆಯಲ್ಲಿ ಬೆಳಗ್ಗೆ 11 ಕ್ಕೆ ಕೃಷಿ ಪ್ರಾತ್ಯಕ್ಷಿಕೆ ಹಾಗೂ ಜಾನುವಾರು ಪ್ರದರ್ಶನ ಜರುಗುವುದು. ಸಂಜೆ 5 ಕ್ಕೆ ಶ್ರೀ ತೋಂಟದಾರ್ಯ ತೇರು ಸಾಗುವುದು. ನಂತರ ನಡೆಯುವ ಸಭೆಯಲ್ಲಿ ಡಿ. 31 ರಿಂದ ಸಾಗಿಬಂದ ಶಿವಸ್ವರೂಪಿ ಅಥಣಿ ಮುರುಘೇಂದ್ರ ಶಿವಯೋಗಿಗಳ ಪ್ರವಚನ ಮಂಗಲೋತ್ಸವ ನಡೆಯುತ್ತದೆ.

ಜ. 19 ಭಾನುವಾರ ಮಹಾಪೂಜೆ ಹಾಗೂ ರೊಟ್ಟಿ ಜಾತ್ರೆ ಬೆಳಗ್ಗೆ 10.30 ರಿಂದ ಪ್ರಾರಂಭ. ಮಠದ ಆಂಗ್ಲ ಮಾಧ್ಯಮ ಶಾಲೆಯ ಕಟ್ಟಡ ಭೂಮಿಪೂಜೆ ಹಾಗೂ ಕೇಂದ್ರ ಸರ್ಕಾರದಿಂದ ಮಂಜೂರಾದ ಅಟಲ್ ಟಿಂಕರಿಂಗ್ ಲ್ಯಾಬ್‌ ಉದ್ಘಾಟಿನೆಗೊಳ್ಳಲಿದೆ. ಬೆಳಗ್ಗೆ 11ಕ್ಕೆ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಜರುಗುವುದು. ಸಂಜೆ 5 ಕ್ಕೆ ಜಂಗಮೋತ್ಸವ, ಸಂಜೆ 7 ಕ್ಕೆ ಕನ್ನಡ ಜಂಗಮ ಗ್ರಂಥ ಲೋಕಾರ್ಪಣೆ ಸಮಾರಂಭ ನಡೆಯುವುದು. ಜ.20 ಸೋಮವಾರ ಬೆಳಗ್ಗೆ 10-30ಕ್ಕೆ ವಚನ ಓದು ಸ್ಪರ್ಧೆ ಜರುಗುವುದು. 12 ಕ್ಕೆ ಸಂಗ್ರಾಣಿ ಕಲ್ಲು ಸಿಡಿ ಹೊಡೆಯುವ ಮತ್ತು ಪುರುಷರ ಹಾಗೂ ಮಹಿಳಾ ಕುಸ್ತಿ ಸ್ಪರ್ಧೆ, ಸಂಜೆ 4 ಕ್ಕೆ ಲಘುರಥೋತ್ಸವ ನಡೆದ ನಂತರ ಸಂಜೆ 7 ಕ್ಕೆ ರಸಮಂಜರಿ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀಧರ ಶಿಪ್ರಿ, ಬಸವರಾಜ ಕುರಿ, ಪರಶುರಾಮ ಮಡಿವಾಳರ, ನಾಗನಗೌಡ ತಿಮ್ಮನಗೌಡ್ರ, ಸಂಗಣ್ಣ ಕಿತ್ತಲಿ, ಶಿವನಗೌಡ ತಿರಕನಗೌಡ್ರ, ಬಸಣ್ಣ ಕುಪ್ಪಸ್ತ, ಬಾಪು ಮರಿಗುದ್ದಿ, ಗುರುಬಸಯ್ಯ ನಾಗಲೋಟಿಮಠ, ಹನುಮಂತ ಕಾಡಪ್ಪನವರ, ವೀರುಪಾಕ್ಷಿ ಶೆಲ್ಲಿಕೇರಿ, ವೀರಯ್ಯ ದೊಡಮನಿ, ದ್ಯಾಮಣ್ಣ ಶಾಂತಗೇರಿ, ಗಂಗಯ್ಯ ವಸ್ತ್ರದ, ಬಿ ಎಸ್ ಸಾಲಿಮಠ, ಶ್ರೀಶೈಲ ಗಟ್ಟಿ, ಮಂಜುನಾಥ ಕವಡಿಮಟ್ಟಿ, ಕುಮಾರ‌ ಮರಿಗುದ್ದಿ ಸೇರಿದಂತೆ ಮುಂತಾದವರು ಇದ್ದರು.