ಸಾರಾಂಶ
ಬೆಂಗಳೂರು : ಭಾರತಿನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂಬ ಮಾತುಗಳು ಕೇಳಿ ಬಂದಿವೆ.
ಈ ಹತ್ಯೆ ಪ್ರಕರಣದಲ್ಲಿ ಪೊಲೀಸರು ತನ್ನ ಬೆನ್ನತ್ತಿರುವ ಮಾಹಿತಿ ತಿಳಿದ ಕೂಡಲೇ ಆತಂಕಗೊಂಡ ಜಗ್ಗ, ರಾತ್ರೋರಾತ್ರಿ ಚೆನ್ನೈ ಮೂಲಕ ದುಬೈಗೆ ಹಾರಿದ್ದಾನೆ. ಆತನ ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಭೂ ವಿವಾದ ಹಿನ್ನೆಲೆಯಲ್ಲಿ ತನ್ನ ಸಹಚರರ ಮೂಲಕ ರೌಡಿ ಬಿಕ್ಲು ಶಿವನನ್ನು ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿದ ಆರೋಪಕ್ಕೆ ಜಗ್ಗ ತುತ್ತಾಗಿದ್ದಾನೆ. ಈತನ ಜತೆ ಸ್ನೇಹ ಹೊಂದಿದ್ದ ಆರೋಪದ ಮೇರೆಗೆ ಕೆ.ಆರ್.ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜು ಅವರಿಗೆ ಪೊಲೀಸರ ತನಿಖೆ ಸಂಕಷ್ಟ ಎದುರಾಗಿದೆ. ಈ ಬೆಳವಣಿಗೆಯಿಂದ ಭೀತಿಗೊಂಡಿರುವ ಜಗ್ಗ, ಚೆನ್ನೈಗೆ ತೆರಳಿ ಅಲ್ಲಿಂದ ದುಬೈಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಮತ್ತೆ ಮೂವರ ಸೆರೆ
ರೌಡಿ ಬಿಕ್ಲು ಶಿವ ಹತ್ಯೆ ಸಂಬಂಧ ಮತ್ತೆ ಮೂವರನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಶಿವ, ಮನೋಜ್ ಹಾಗೂ ಪ್ರಸಾದ್ ಬಂಧಿತರಾಗಿದ್ದು, ಈ ಪ್ರಕರಣದಲ್ಲಿ ಬಂಧಿತ ಸಂಖ್ಯೆ 17ಕ್ಕೆ ಏರಿದಂತಾಗಿದೆ. ರೌಡಿ ಬಿಕ್ಲು ಶಿವನ ಹತ್ಯೆಯಲ್ಲಿ ಈ ಮೂವರ ಸಹ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.