ಬಾರ್‌ಗೆ ಮದ್ಯ ಸೇವಿಸಲು ಬಂದಿದ್ದ ರೌಡಿಯ ಭೀಕರವಾಗಿ ಕೊಚ್ಚಿ ಹತ್ಯೆ

| Published : Mar 05 2025, 01:30 AM IST

ಬಾರ್‌ಗೆ ಮದ್ಯ ಸೇವಿಸಲು ಬಂದಿದ್ದ ರೌಡಿಯ ಭೀಕರವಾಗಿ ಕೊಚ್ಚಿ ಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಮದ್ಯ ಸೇವಿಸಲು ಬಾರ್‌ಗೆ ಬಂದಿದ್ದ ರೌಡಿ ಶೀಟರ್‌ನನ್ನು ನಾಲ್ಕೈದು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮದ್ಯ ಸೇವಿಸಲು ಬಾರ್‌ಗೆ ಬಂದಿದ್ದ ರೌಡಿ ಶೀಟರ್‌ನನ್ನು ನಾಲ್ಕೈದು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಯಲಹಂಕದ ಕೊಡಗಿ ತಿರುಮಲಪುರ ನಿವಾಸಿ ಜಯರಾಮ್‌ (42) ಹತ್ಯೆಯಾದ ರೌಡಿ ಶೀಟರ್‌. ಮಂಗಳವಾರ ರಾತ್ರಿ ಸುಮಾರು 9.30ಕ್ಕೆ ಹೆಸರಘಟ್ಟ ರಸ್ತೆಯ ತಿರುಮಲಪುರ ವಿಲೇಜ್‌ನ ಸಾಯಿ ಬಾರ್‌ನಲ್ಲಿ ಈ ಘಟನೆ ನಡೆದಿದೆ. ಹತ್ಯೆ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಹತ್ಯೆಯಾದ ಜಯರಾಮ್‌ ಯಲಹಂಕ ಉಪನಗರ ಪೊಲೀಸ್‌ ಠಾಣೆಯ ರೌಡಿ ಶೀಟರ್‌ ಆಗಿದ್ದಾನೆ. ಈತನ ವಿರುದ್ಧ ಕೊಲೆ, ದರೋಡೆ, ಹಲ್ಲೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ಯಲಹಂಕದ ಕೊಡಗಿ ತಿರುಮಲಪುರದಲ್ಲಿ ಪತ್ನಿ ಮತ್ತು ಮಕ್ಕಳ ಜತೆ ನೆಲೆಸಿದ್ದ. ಕೋಳಿ ಅಂಗಡಿ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

ಮಂಗಳವಾರ ರಾತ್ರಿ ಮದ್ಯ ಸೇವಿಸಲು ಹೆಸರಘಟ್ಟ ರಸ್ತೆಯ ತಿರುಮಲಪುರ ವಿಲೇಜ್‌ನ ಸಾಯಿ ಬಾರ್‌ಗೆ ಬಂದಿದ್ದಾನೆ. ಇದೇ ಸಮಯಕ್ಕೆ ನಾಲ್ಕೈದು ಮಂದಿ ದುಷ್ಕರ್ಮಿಗಳು ಬಾರ್‌ಗೆ ಬಂದಿದ್ದು, ಏಕಾಏಕಿ ಜಯರಾಮ್‌ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಶಂಕೆ:

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ದ್ವೇಷದ ಹಿನ್ನೆಲೆಯಲ್ಲಿ ರೌಡಿ ಜಯರಾಮ್‌ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿರುವ ಸೋಲದೇವನಹಳ್ಳಿ ಠಾಣೆ ಪೊಲೀಸರು, ದುಷ್ಕರ್ಮಿಗಳ ಪತ್ತೆಗೆ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.