ಬಾರ್‌ನಲ್ಲಿ ನಡೆದಿದ್ದ ರೌಡಿ ಶೀಟರ್‌ ಜಯರಾಮ್‌ ಕೊಲೆ ಕೇಸ್‌ : ನಾಲ್ವರು ಆರೋಪಿಗಳ ಬಂಧನ

| N/A | Published : Mar 09 2025, 01:48 AM IST / Updated: Mar 09 2025, 08:39 AM IST

ಬಾರ್‌ನಲ್ಲಿ ನಡೆದಿದ್ದ ರೌಡಿ ಶೀಟರ್‌ ಜಯರಾಮ್‌ ಕೊಲೆ ಕೇಸ್‌ : ನಾಲ್ವರು ಆರೋಪಿಗಳ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ಹೆಸರಘಟ್ಟ ಮುಖ್ಯರಸ್ತೆಯ ಕೊಡಗಿ ತಿರುಮಲಪುರದ ಬಾರ್‌ನಲ್ಲಿ ನಡೆದಿದ್ದ ರೌಡಿ ಶೀಟರ್‌ ಜಯರಾಮ್‌ (40) ಬರ್ಬರ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಇತ್ತೀಚೆಗೆ ಹೆಸರಘಟ್ಟ ಮುಖ್ಯರಸ್ತೆಯ ಕೊಡಗಿ ತಿರುಮಲಪುರದ ಬಾರ್‌ನಲ್ಲಿ ನಡೆದಿದ್ದ ರೌಡಿ ಶೀಟರ್‌ ಜಯರಾಮ್‌ (40) ಬರ್ಬರ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯಲಹಂಕದ ಮುನಿರಾಜು, ರಾಜೇಶ್‌ ಅಲಿಯಾಸ್‌ ಬಬ್ಲಿ, ಯತೀಶ್‌ ಗೌಡ ಹಾಗೂ ವಿನಯ್‌ ಬಂಧಿತರು. ಆರೋಪಿಗಳು ಮಾ.4ರಂದು ರಾತ್ರಿ ಸುಮಾರು 8.30ಕ್ಕೆ ಹೆಸರಘಟ್ಟ ಮುಖ್ಯರಸ್ತೆಯ ಕೊಡಗಿ ತಿರುಮಲಪುರದ ಸಾಯಿ ಸ್ಪಿರೀಟ್‌ ಜೋನ್‌ ಬಾರ್‌ನಲ್ಲಿ ಮದ್ಯ ಸೇವಿಸುತ್ತಿದ್ದ ರೌಡಿ ಶೀಟರ್‌ ಜಯರಾಮ್‌ (40) ಮೇಲೆ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಲಹಂಕ ನ್ಯೂ ಟೌನ್‌ ಪೊಲೀಸ್ ಠಾಣೆಯ ರೌಡಿ ಶೀಟರ್‌ ಆಗಿದ್ದ ಜಯರಾಮ್‌, 2018ನೇ ಸಾಲಿನಲ್ಲಿ ನಡೆದಿದ್ದ ಯಲಹಂಕದ ಕಿರಣ್‌ ಎಂಬಾತನ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಬಳಿಕ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ ಜಯರಾಮ್‌, ಯಲಹಂಕದ ಚಿಕ್ಕಬೊಮ್ಮಸಂದ್ರದಲ್ಲಿ ಕೋಳಿ ಅಂಗಡಿ ಇರಿಸಿಕೊಂಡು ವ್ಯಾಪಾರ ಮಾಡಿಕೊಂಡಿದ್ದ. ಈ ವೇಳೆ ಮೃತ ಕಿರಣ್‌ ಕಡೆಯ ಹುಡುಗರ ಜತೆಗೆ ಜಯರಾಮ್‌ ಗಲಾಟೆ ಮಾಡಿಕೊಂಡಿದ್ದ. ಬಳಿಕ ಕುಟುಂಬದ ಜತೆಗೆ ಹುರಳಿಚಿಕ್ಕನಹಳ್ಳಿಗೆ ಬಂದು ನೆಲೆಸಿದ್ದ. ಅಲ್ಲೇ ಕೋಳಿ ಅಂಗಡಿ ಇರಿಸಿಕೊಂಡು ವ್ಯಾಪಾರ ಮಾಡಿಕೊಂಡಿದ್ದ.

ಚಲನವಲನ ಗಮನಿಸಿ ಸಂಚು:

ಕೆಲ ತಿಂಗಳ ಹಿಂದೆ ಆರೋಪಿ ಮುನಿರಾಜ್‌ ಜತೆಗೆ ಜಯರಾಮ್‌ ಕಿರಿಕ್‌ ಮಾಡಿಕೊಂಡಿದ್ದು, ಕಿರಣ್‌ನನ್ನು ಕಳುಹಿಸಿದ ಜಾಗಕ್ಕೆ ನಿನ್ನನ್ನೂ ಕಳುಹಿಸುವುದಾಗಿ ಆವಾಜ್‌ ಹಾಕಿದ್ದ ಎನ್ನಲಾಗಿದೆ. ಮೊದಲೇ ದ್ವೇಷ ಸಾಧಿಸುತ್ತಿದ್ದ ಮುನಿರಾಜ್‌ ಹಾಗೂ ಆತನ ಸಹಚರರು ಈ ಘಟನೆಯಿಂದ ಮತ್ತಷ್ಟು ಕೋಪಗೊಂಡಿದ್ದರು. ಜಯರಾಮ್‌ ಮೇಲೆ ದ್ವೇಷ ತೀರಿಸಿಕೊಳ್ಳಲು ಹತ್ಯೆಗೆ ಸಂಚು ರೂಪಿಸಿದ್ದರು. 

3 ದಿನ ಜಯರಾಮ್‌ನನ್ನು ಹಿಂಬಾಲಿಸಿ ಚಲನವಲನದ ಮೇಲೆ ನಿಗಾವಹಿಸಿದ್ದರು. ಪ್ರತಿ ದಿನ ರಾತ್ರಿ ಬಾರ್‌ಗೆ ಮದ್ಯ ಸೇವಿಸಲು ಬರುವ ವಿಚಾರ ತಿಳಿದುಕೊಂಡಿದ್ದರು. ಅದರಂತೆ ಮಾ.4ರ ರಾತ್ರಿ ಜಯರಾಮ್‌ ಹೆಸರಘಟ್ಟ ಮುಖ್ಯರಸ್ತೆಯ ಕೊಡಗಿ ತಿರುಮಲಪುರದ ಸಾಯಿ ಸ್ಪಿರೀಟ್‌ ಜೋನ್‌ ಬಾರ್‌ನಲ್ಲಿ ಮದ್ಯ ಸೇವಿಸುವಾಗ ಮುನಿರಾಜ್‌ ಹಾಗೂ ಆತನ ಸಚಹರರು ದಾಳಿ ಮಾಡಿದ್ದರು. ಮಾರಕಾಸ್ತ್ರಗಳಿಂದ ಬರ್ಬರವಾಗಿ ಜಯರಾಮ್‌ನನ್ನು ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.