ಸಾರಾಂಶ
ಸಮಾಜದ ರಕ್ಷಣೆಗೆ ಟೊಂಕಕಟ್ಟಿ ನಿಂತಿರುವ, ಹಗಲಿರುಳು ಶ್ರಮಿಸುವ ಪೊಲೀಸರ ಮೇಲೆ ಒಂದಿಲ್ಲೊಂದು ಕಾರಣ, ಸಂದರ್ಭದಲ್ಲಿ ಹಲ್ಲೆಗಳು ನಡೆಯುತ್ತಲೇ ಇವೆ. ಇಂಥ ಹಲ್ಲೆಗಳಲ್ಲಿ ರೌಡಿಗಳೂ ಸೇರಿದ್ದಾರೆ. ಹೌದು. ಶಿವಮೊಗ್ಗ ಪೊಲೀಸರ ಮೇಲೆ ಬುಧವಾರ ರಾತ್ರಿ ಹಲ್ಲೆ ನಡೆಸಲು ಯತ್ನಿಸಿದ ಹಿನ್ನೆಲೆ ರೌಡಿ ಶೀಟರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ, ಬಂಧಿಸಿದ್ದಾರೆ.
ಶಿವಮೊಗ್ಗ: ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಹಿನ್ನೆಲೆ ರೌಡಿ ಶೀಟರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ, ಬಂಧಿಸಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಮಂಜುನಾಥ ಅಲಿಯಾಸ್ ಓಲಂಗ ಎಂಬಾತ ಗುಂಡೇಟು ತಿಂದ ರೌಡಿಶೀಟರ್. ಮೂರು ದಿನಗಳ ಹಿಂದೆ ಶಶಿ ಎನ್ನುವ ಯುವಕನಿಗೆ ಚಾಕು ಇರಿದಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಮಂಜುನಾಥ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದನು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಬುಧವಾರ ಸಂಜೆ ಜಯನಗರ ಠಾಣೆಗೆ ಬಂದು ಪೊಲೀಸರಿಗೆ ಮಂಜು ಓಲಂಗ ಶರಣಾಗಿದ್ದ. ರಾತ್ರಿ ಹಲ್ಲೆ ನಡೆಸಿದ್ದ ಪ್ರದೇಶಕ್ಕೆ ಮಹಜರಿಗೆ ಕರೆದುಕೊಂಡು ಹೋದ ವೇಳೆ ರೌಡಿಶೀಟರ್ ಮಂಜು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗೆ ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಆರೋಪಿ ಮಂಜುನಾಥ ಅಲಿಯಾಸ್ ಓಲಂಗನನ್ನು ಬಂಧಿಸಿದರು. ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
- - -(ಸಾಂದರ್ಭಿಕ ಚಿತ್ರ)