ರಾತ್ರಿ ವೇಳೆ ಸಾಲು ಸಾಲು ಶವಸಂಸ್ಕಾರ..!

| Published : Jan 09 2024, 02:00 AM IST

ಸಾರಾಂಶ

ಕಳೆದ ಏಳೆಂಟು ತಿಂಗಳಿಂದ ರಾತ್ರಿ ವೇಳೆಯಲ್ಲಿ ಜೆಸಿಬಿ ಮುಖಾಂತರ ಸಾಲು ಸಾಲಾಗಿ ಮೃತ ದೇಹಗಳನ್ನ ಹೂಳುತ್ತಿರುವುದು ಅನುಮಾನಾಸ್ಪದ. ಮಂಡ್ಯದ ಕುವೆಂಪುನಗರ ರುದ್ರಭೂಮಿಯಲ್ಲಿ ಕುತೂಹಲಕಾರಿ ಘಟನೆ, ಶವಗಳ ಮೂಲದ ಬಗ್ಗೆ ತನಿಖೆಗೆ ತುಳಸೀಧರ್‌ ಒತ್ತಾಯ

ಕನ್ನಡಪ್ರಭ ವಾರ್ತೆ ಮಂಡ್ಯ

ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಸ್ಮಶಾನದಲ್ಲಿ ಶವಗಳನ್ನು ಹೂಳುವುದನ್ನು ನೋಡಿದ್ದೇವೆ. ಆದರೆ, ನಗರದ ೧೪ನೇ ವಾರ್ಡ್‌ನ ಕುವೆಂಪುನಗರ ಸ್ಮಶಾನದಲ್ಲಿ ಕಳೆದ ಏಳೆಂಟು ತಿಂಗಳಿಂದ ರಾತ್ರಿ ವೇಳೆಯಲ್ಲಿ ಜೆಸಿಬಿ ಮುಖಾಂತರ ಸಾಲು ಸಾಲಾಗಿ ಮೃತ ದೇಹಗಳನ್ನ ಹೂಳುತ್ತಿರುವುದು ಅನುಮಾನಾಸ್ಪದವಾಗಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಲ್. ತುಳಸಿಧರ್ ಕಳವಳ ವ್ಯಕ್ತಪಡಿಸಿದ್ದಾರೆ,

ಈ ಸ್ಮಶಾನದಲ್ಲಿ ರಾತ್ರಿ ವೇಳೆ ಶವಸಂಸ್ಕಾರ ಮಾಡಲು ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ನಾನು ಈ ಹಿಂದಿದ್ದ ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು ಅವರಿಗೆ ಮನವಿ ಮಾಡಿ ನಗರಸಭೆಯಿಂದ ಸುಮಾರು ೯ ವಿದ್ಯುತ್ ಕಂಬಗಳನ್ನು ಅಳವಡಿಸಿ ವಿದ್ಯುತ್ ದೀಪದ ವ್ಯವಸ್ಥೆ ಮಾಡಿಸಿದ್ದೆ. ಇದಾದ ಬಳಿಕ ಸುಮಾರು ೩೦ ಮೃತ ದೇಹಗಳನ್ನು ಸಾಲುಸಾಲಾಗಿ ಹೂಳಿರುವುದು ಕಂಡು ಬರುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮೃಹ ದೇಹಗಳೇನಾದರೂ ಮಂಡ್ಯ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್‌ಗಾಗಿ ನೀಡಿದ್ದಂತಹ ದೇಹಗಳಾಗಿರಬಹುದಾ ಅಥವಾ ಅನಾಥ ಮೃತ ದೇಹಗಳಾಗಿರಬಹುದಾ ಎಂಬ ಕುರಿತು ಸ್ಪಷ್ಟನೆ ಇಲ್ಲ. ಒಂದು ವೇಳೆ ಈ ರೀತಿ ಮೃತ ದೇಹಗಳಾಗಿದ್ದರೂ ಸಹ ರಾತ್ರಿ ವೇಳೆಯಲ್ಲಿ ಹೂಳುವಂತ ಪ್ರಮೇಯವೇನು ಎಂಬ ಪ್ರಶ್ನೆ ಕಾಡುತ್ತಿದೆ ಎಂದಿದ್ದಾರೆ.

ನಗರಸಭೆ ಆಯುಕ್ತ ಆರ್‌.ಮಂಜುನಾಥ್ ಮತ್ತು ಆರೋಗ್ಯ ಪರಿವೀಕ್ಷಕ ಶಿವಶಂಕರ್ ಅವರಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಉತ್ತರಿಸಿದ್ದಾರೆ. ಆದರೂ ಇಂತಹ ಘಟನೆಯಿಂದಾಗಿ ಸಾರ್ವಜನಿಕರು ಆತಂಕ ಪಡುವಂತಾಗಿದೆ.

ಕುವೆಂಪು ನಗರದ ಸ್ಮಶಾನದಲ್ಲಿ ಮಾತ್ರ ಈ ರೀತಿಯಲ್ಲಿ ರಾತ್ರಿ ವೇಳೆ ಸಮಾಧಿಗಳನ್ನು ಮಾಡಲಾಗುತ್ತಿದೆಯೇ ಅಥವಾ ಬೇರೆ ಸ್ಮಶಾನಗಳಲ್ಲೂ ಇಂತಹ ಘಟನೆಗಳು ನಡೆಯುತ್ತಿವೆಯೇ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲವಾದರೂ, ಕುವೆಂಪುನಗರದ ರುದ್ರಭೂಮಿಯಲ್ಲಿ ಶವಗಳನ್ನು ರಾತ್ರೋ ರಾತ್ರಿ ಹೂಳುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ರಾತ್ರಿ ವೇಳೆಯಲ್ಲಿ ಶವಗಳನ್ನು ಹೂಳ್ಳುತ್ತಿರುವ ಬಗ್ಗೆ ಸಂಬಂಧಪಟ್ಟ ಅಕಾರಿಗಳು ನಿಗಾ ವಹಿಸಬೇಕು. ಯಾವ ಶವಗಳನ್ನು ಹೂಳಲಾಗುತ್ತಿದೆ, ಅನಾಥ ಶವಗಳೋ ಅಥವಾ ಮಿಮ್ಸ್ ಇಲ್ಲವೇ ಸರ್ಕಾರಿ ಆಸ್ಪತ್ರೆಗಳಲ್ಲಿ ಅನಾಥವಾಗಿ ಸಿಕ್ಕ ಶವಗಳೋ, ರೈಲಿಗೆ ಸಿಲುಕಿ ಸಾವನ್ನಪ್ಪಿದವರೋ ಇಲ್ಲವೇ ಅಪರಾಧ ಪ್ರಕರಣಗಳನ್ನು ಕಾನೂನಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಇಂತಹ ಕೃತ್ಯಗಳನ್ನು ಮಾಡಲಾಗುತ್ತಿದೆಯೋ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಲ್.ತುಳಸೀಧರ್ ಒತ್ತಾಯಿಸಿದ್ದಾರೆ.

ಗಂಡನ ಜೊತೆ ಜಗಳವಾಡಿಕೊಂಡು ಮಗಳೇ ತಾಯಿಯನ್ನು ಕೊಂದು ಹೂತಿದ್ದಂತಹ ಘಟನೆಗಳಂತಹವು ನಡೆಯಬಾರದು ಎಂಬ ಕಾರಣಕ್ಕೆ ಪೊಲೀಸರು ಅಥವಾ ಸಂಬಂಧಿಸಿದ ಅಕಾರಿಗಳು ನಿಗಾ ವಹಿಸುವುದು ಅತ್ಯಂತ ಅಗತ್ಯ ಎಂದು ಅವರು ಆಗ್ರಹಿಸಿದ್ದಾರೆ.