ಸಂಡೂರು: ಪಟ್ಟಣದ ಅರಣ್ಯ ಇಲಾಖೆಯ ಕಚೇರಿ ಮುಂದಿನ ರಾಜ್ಯ ಹೆದ್ದಾರಿಯ ಇಕ್ಕೆಲದಲ್ಲಿ ಒಂದೆರಡು ಫರ್ಲಾಂಗ್‌ವರೆಗೆ ಯಾರೋ ಪುಣ್ಯಾತ್ಮರು ನೆಟ್ಟು ಬೆಳೆಸಿದ ಸಾಲು ಮರಗಳು ಬಿರು ಬೇಸಿಗೆಯಲ್ಲಿ ತನ್ನಡಿಗೆ ಬರುವ ದಾರಿಹೋಕರಿಗೆ ತಂಪನ್ನೆರೆದು, ಅವರ ಮೈಮನಸ್ಸುಗಳಿಗೆ ಮುದ ನೀಡುತ್ತಿವೆ.ಪಟ್ಟಣದ ಅರಣ್ಯ ಇಲಾಖೆ ಕಚೇರಿ ಮುಂಭಾಗದಿಂದ ತೋಟಗಾರಿಕೆ ಇಲಾಖೆಯ ಧರ್ಮಾಪುರದ ಫಾರಂವರೆಗೆ ರಸ್ತೆಯ ಇಕ್ಕೆಲದಲ್ಲಿ ಬೃಹತಾಗಿ ಬೆಳೆದಿರುವ ಹಲವು ಹುಣಿಸೆ ಮರಗಳು ಚಿಗುರೊಡೆದು ಬಿಸಿಲಿನ ಧಗೆಯಿಂದ ಕಂಗೆಟ್ಟು ತನ್ನಡಿಗೆ ಬರುವವರಿಗೆ ತಣ್ಣನೆಯ ಅನುಭವವನ್ನು ನೀಡುತ್ತಿವೆ.
ಇದೇ ರೀತಿಯ ಬೃಹತ್ತಾದ ಹುಣಿಸೆ, ಆಲ, ಬೇವು ಮುಂತಾದ ಮರಗಳು ಎಪಿಎಂಸಿ ಮಾರುಕಟ್ಟೆಯಿಂದ ನಿರ್ಮಾಣ ಹಂತದಲ್ಲಿರುವ ತಾಲೂಕು ಆಡಳಿತ ಸೌಧದವರೆಗೆ ಇದ್ದು, ಜನತೆಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಹಲವು ರೀತಿಯಲ್ಲಿ ನೆರವಾಗಿದ್ದವು. ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಅವುಗಳು ಕೊಡಲಿ, ಗರಗಸದ ಬಾಯಿಗೆ ತುತ್ತಾದವು ಎಂಬ ವಿಷಯ ಹಿರಿಯರಿಂದ ಕೇಳಿ ಬರುತ್ತಿದೆ.ಕಾಲದ ಹೊಡೆತಕ್ಕೆ ಸಿಕ್ಕರೂ ನಶಿಸದೇ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು, ಜನತೆಗೆ ಹಾಗೂ ಪಕ್ಷಿಗಳಿಗೆ ಹಲವು ರೀತಿಯಲ್ಲಿ ಉಪಕಾರಿಯಾಗಿರುವ ಹುಣಿಸೆ ಮರಗಳನ್ನು ನೆಟ್ಟು, ಬೆಳೆಸಿದವರಿಗೂ ಮತ್ತು ಅವುಗಳನ್ನು ಉಳಿಸಿದವರಿಗೂ ಧನ್ಯವಾದಗಳನ್ನು ಹೇಳಲೇಬೇಕಿದೆ.
ಅರಣ್ಯ ಇಲಾಖೆ ಕಚೇರಿಯ ಬಳಿಯಲ್ಲಿರುವ ಬೃಹತ್ತಾದ ಗಿಡಮರಗಳು ಸಂಡೂರಿನ ರಾಜ್ಯ ಹೆದ್ದಾರಿಯ ಇಕ್ಕೆಲದಲ್ಲಿ ಈ ಹಿಂದೆ ಇದ್ದವು. ರಸ್ತೆ ವಿಸ್ತರಣೆಯಾಗುವಾಗ ಹಲವು ಮರಗಳು ನಾಶವಾದವು ಎನ್ನುತ್ತಾರೆ ಸ್ಥಳೀಯ ನಿವಾಸಿ ಶಂಕರರಾವ್ ಪೋಳ್.