ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ಸಿಎಂ, ಗೃಹ ಸಚಿವರ ರಾಜೀನಾಮೆಗೆ ಬಿಜೆಪಿ ಯುವ ಮೋರ್ಚಾ ಒತ್ತಾಯ

| Published : Nov 12 2025, 02:30 AM IST

ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ಸಿಎಂ, ಗೃಹ ಸಚಿವರ ರಾಜೀನಾಮೆಗೆ ಬಿಜೆಪಿ ಯುವ ಮೋರ್ಚಾ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ವಿಜಯನಗರ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ನಗರದ ಎಸ್ಪಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಹೊಸಪೇಟೆ: ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ವಿಜಯನಗರ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ನಗರದ ಎಸ್ಪಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್, ರಾಜ್ಯ ಸರ್ಕಾರ ಕ್ರಿಮಿನಲ್‌ಗಳನ್ನು ಪೋಷಿಸುವ ಕೆಲಸ ಮಾಡುತ್ತಿರುವ ಬಗ್ಗೆ ರಾಜ್ಯದ ಜನತೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಪರಾಧಿಕ ಮನಸ್ಸಿನಿಂದ ಹೊರಬರಲು ಶಿಕ್ಷೆಗೆ ಒಳಗಾದ ಕೈದಿಗಳಿಗೆ ಜೈಲುಗಳಲ್ಲೇ ರಾಜಾತಿಥ್ಯ ನೀಡುವ ಮೂಲಕ ರಾಜ್ಯ ಸರ್ಕಾರ ಭಯೋತ್ಪಾದಕರು, ಕ್ರಿಮಿನಲ್‌ಗಳು, ಅತ್ಯಾಚಾರಿಗಳಿಗೆ ಹಾಗೂ ವಂಚಕರಿಗೆ ನಿರ್ಭೀತಿಯಿಂದ ಮೊಬೈಲ್, ಮದ್ಯ, ಗಾಂಜಾ, ಸಿಗರೇಟ್ ಸೇರಿದಂತೆ ಎಲ್ಲ ಸವಲತ್ತುಗಳನ್ನು ದೊರಕಿಸಿಕೊಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ವಿಡಿಯೋಗಳು ಬಿತ್ತರಗೊಂಡಿವೆ. ಇದು ಇಡೀ ರಾಜ್ಯವೇ ನಾಚಿಕೆಪಡುವ ಸಂಗತಿಯಾಗಿದೆ. ಈಗಾಗಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಉಗ್ರ ಚಟುವಟಿಕೆಯಲ್ಲಿ ಭಾಗಿಯಾದ ಭಯೋತ್ಪಾದಕನಿಗೆ ಮೊಬೈಲ್ ನೀಡಿರುವುದು ದೇಶಕ್ಕೆ ಗಂಡಾಂತರ ತರುವ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೀರಿಯಲ್ ರೇಪಿಸ್ಟ್ ಉಮೇಶ್ ರೆಡ್ಡಿಯಂತಹ ಅಪರಾಧಿಗಳಿಗೆ ಐಷಾರಾಮಿ ಸವಲತ್ತುಗಳನ್ನು ನೀಡಿರುವುದು ಕಣ್ಣಿಗೆ ರಾಚುವಂತಿದೆ. ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಜೈಲು ಸೇರಿದ ತರುಣ್ ಎನ್ನುವ ಆರೋಪಿಗೂ ರೆಸಾರ್ಟ್ ಸೌಲಭ್ಯ ನೀಡಿರುವುದನ್ನು ಗಮನಿಸಿದರೆ ಗೃಹ ಸಚಿವರು ನಿದ್ದೆ ಮಾಡುತ್ತಿದ್ದಾರೋ ಅಥವಾ ಎಲ್ಲದನ್ನು ಅವರೇ ವ್ಯವಸ್ಥೆ ಮಾಡಲು ಜೈಲಿನ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದ್ದಾರೋ ಎನ್ನುವ ಅನುಮಾನಗಳು ಕಾಡುತ್ತಿವೆ. ಈ ಕೃತ್ಯವನ್ನು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ. ಇದರ ನೈತಿಕ ಹೊಣೆ ಹೊತ್ತು ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಅಲ್ಲದೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಲು ಎನ್‌ಐಎಗೆ ಪ್ರಕರಣ ನೀಡಬೇಕು ಎಂದು ಆಗ್ರಹಿಸಿದರು.

ನಂತರ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಿದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ನಟರಾಜ್, ಸಚಿನ್ ಕುಮಾರ್, ಸೂರಿ ಬಂಗಾರು, ಸಂಗಮೇಶ್ ಕಡೆಮನಿ, ವ್ಯಾಸರಾಜ್, ಸಂಪತ್ ಮೂರ್ತಿ, ಗಿರೀಶ್, ಹನುಮ ನಾಯ್ಕ, ಗೌಳಿ ಬಸವರಾಜ್, ರುದ್ರಪ್ಪ ಗೌಳಿ, ಹೊನ್ನೂರಪ್ಪ, ಉಮಾದೇವಿ, ಎಚ್.ರಾಘವೇಂದ್ರ, ಮಣಿಕಂಠ ಕೊಟ್ಟೂರು, ವಿಕಾಶ್, ವೆಂಕೋಬಿ ದೇವಲಾಪುರ ಮತ್ತಿತರರಿದ್ದರು.