ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಖಾಸಗಿ ಆಸ್ತಿಯ ಪಟ್ಟಿಯಲ್ಲಿದೆ. ಅದರ ಪ್ರಾಧಿಕಾರ ಮಾಡುವುದು ಕಾನೂನುಬದ್ದವಲ್ಲ. ಪ್ರಾಧಿಕಾರಕ್ಕೆ ನಮ್ಮ ವಿರೋಧವಿದೆ, ಹೀಗಾಗಿ, ನ್ಯಾಯಾಲಯದ ಮೊರೆ ಹೋಗಲಾಗಿದೆ ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.ಮೈಸೂರಿನ ಅರಮನೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನವನ್ನು ಸರ್ಕಾರ ಪ್ರಾಧಿಕಾರದ ಹೆಸರಲ್ಲಿ ರೂಲಿಂಗ್ ಮಾಡಲು ಆಗುವುದಿಲ್ಲ. ದೇವಸ್ಥಾನದಲ್ಲಿ ಸಮಸ್ಯೆ ಆದಾಗ ಮಾತ್ರವೇ ಸರ್ಕಾರ ಪ್ರವೇಶ ಮಾಡಬಹುದು. ಚಾಮುಂಡಿ ದೇಗುಲದ ನಿರ್ವಹಣೆ ನಮಗೆ ನೀಡಿದರೆ ನಾವು ಮಾಡಲು ಸಿದ್ಧ ಎಂದು ಹೇಳಿದರು.
ಚಾಮುಂಡೇಶ್ವರಿ ದೇವಸ್ಥಾನ ನಮ್ಮಆಸ್ತಿ. ಸಂಸ್ಥಾನದ ಖಾಸಗಿ ಆಸ್ತಿಗಳ ಪಟ್ಟಿಯಲ್ಲಿ ಚಾಮುಂಡಿಬೆಟ್ಟದ ಅರಮನೆ, ನಂದಿ, ಚಾಮುಂಡೇಶ್ವರಿ ದೇವಸ್ಥಾನ, ಮಹಾಬಲೇಶ್ವರ ದೇವಸ್ಥಾನ, ದೇವಿಕೆರೆ ಸುತ್ತಮುತ್ತಲಪ್ರದೇಶ ಸೇರಿದೆ. ಕೋರ್ಟ್ ಬರಿ ಸ್ಟೇಟಸ್ ಕೊಟ್ಟಿಲ್ಲ, ಪ್ರಾಧಿಕಾರವೇ ಜಾರಿಯಲ್ಲಿ ಇರುವುದಿಲ್ಲ. 1950ರಲ್ಲೇ ನಮ್ಮ ಸಂಸ್ಥಾನದಿಂದ ಖಾಸಗಿ ಆಸ್ತಿಗಳ ಪಟ್ಟಿ ಕೊಟ್ಟಿರುವುದು. ಕೇಂದ್ರ ಸರ್ಕಾರ 1972ರಲ್ಲಿ ಮಾಡಿರುವ ಆದೇಶದ ಪ್ರಕಾರ ಅವುಗಳನ್ನು ನಾವು ಅನುಭವಿಸಬಹುದು. ನ್ಯಾಯಾಲಯ, ಸರ್ಕಾರ ಈಗಲೂ ಗ್ರೀನ್ ಸಿಗ್ನಲ್ ಕೊಟ್ಟರೆ ಚಾಮುಂಡಿಬೆಟ್ಟವನ್ನ ನಾವೇ ನಿರ್ವಹಣೆ ಮಾಡ್ತೇವೆ ಎಂದು ಅವರು ತಿಳಿಸಿದರು.ಈ ಹಿಂದಿನ ನಮ್ಮ ಪೂರ್ವಜರ ಹಾದಿಯಲ್ಲೇ ನಾವು ಸಾಗುತ್ತಿದ್ದೇವೆ. ಅದನ್ನು ಬಿಟ್ಟು ಬೇರೆ ಮಾರ್ಗದಲ್ಲಿ ಹೋಗಲ್ಲ. ಚಾಮುಂಡಿಬೆಟ್ಟವನ್ನು ನಾವು ಉಳಿಸಿಕೊಳ್ಳಲು ಹೊರಟಿದ್ದೇವೆ. ಬೆಟ್ಟ ಬೆಟ್ಟದ ಹಾಗೆ ಇರಬೇಕು. ವಯನಾಡು, ಕೊಡಗು ರೀತಿ ಆಗದೆ ಇರಲಿ ಎನ್ನುವುದು ನಮ್ಮ ಉದ್ದೇಶ ಎಂದರು.
1950ರಲ್ಲಿ ಖಾಸಗಿ ಪ್ರಾಪರ್ಟಿ ಲಿಸ್ಟ್ ಮಾಡಿದ್ದರು. ಸರ್ಕಾರಿ ಖರಾಬು ಇರಲಿ, ಏನೇ ಇರಲಿ, ಆವಾಗ ಲಿಸ್ಟ್ ನಲ್ಲಿ ಕೊಟ್ಟಿದ್ದು ಬಿಟ್ಟು ಬೇರೇನೂ ನಾವು ಇಟ್ಟುಕೊಂಡಿಲ್ಲ. ಬೇರೆ ಏನನ್ನು ಕೇಳುತಿಲ್ಲ. ಅನೇಕ ಕಾರ್ಖಾನೆಗಳನ್ನು ಬಿಟ್ಟುಕೊಟ್ಟಿದ್ದೇವೆ. ಅದನ್ನು ನಾವು ಕೇಳಿದ್ದೇವಾ? ಸರ್ಕಾರಗಳು ಬದಲಾದಾಗ ಪರಿಸ್ಥಿತಿಗಳು ಕೂಡ ಬದಲಾಗುತ್ತಿದೆ. ಪ್ರಾಧಿಕಾರ ಮಾಡಿರುವುದು ಸರಿಯಿಲ್ಲ. ಸರ್ಕಾರದ ಈ ನಡೆ ಸರಿಯಿಲ್ಲ ಎಂದು ಅವರು ಖಂಡಿಸಿದರು.----
ಕೋಟ್...ಖಾಸಗಿ ಪ್ರಾಪರ್ಟಿ ಯಾವುದು ಅಂತ ಸರ್ಕಾರಕ್ಕೆ ಗೊತ್ತಿದೆ. 2001ರ ಕೇಸ್ ಪೆಂಡಿಗ್ ಇದೆ. ಅದಕ್ಕೂ ಮೊದಲೇ ಸರ್ಕಾರ ಯಾಕೆ ಪ್ರಾಧಿಕಾರ ಮಾಡುತ್ತಿದೆ. ಆ ಕೇಸ್ ಕ್ಲಿಯರ್ ಆಗ್ಲಿ. 1974ರಲ್ಲಿ ನಿರ್ವಹಣೆ ಮಾಡಲು ಕಷ್ಟ ಅಂತ ಪತ್ರ ಬರೆದಿದ್ದು ನಿಜ, ಅಂದು ಬೇರೆ ಬೇರೆ ಕಾರಣ ಇತ್ತು. ಹಾಗಂತ ಮ್ಯಾನೇಜ್ ಮಾಡಿ ಅಂತ ಕೊಟ್ಟಾಗ ಮಾಡಲಿ. ನಾವು ನೀವೇ ಸ್ವಂತ ಮಾಡಿಕೊಳ್ಳಿ ಅಂತ ಕೊಟ್ಟಿಲ್ಲ. 2001ರ ಕೇಸ್ ನಮ್ಮದೆ ಎಂದಾದರೆ ನಾವೇ ದೇವಸ್ಥಾನ ನಿರ್ವಹಣೆ ಮಾಡುತ್ತೇವೆ.
- ಪ್ರಮೋದಾದೇವಿ ಒಡೆಯರ್, ರಾಜವಂಶಸ್ಥರು