ಸಾರಾಂಶ
ಬೆಂಗಳೂರು : ನಗರದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ 1.20 ಲಕ್ಷ ಕೋಟಿ ರು. ವೆಚ್ಚದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಮುಂದಿನ ದಿನಗಳಲ್ಲಿ ನಗರದ ಚಿತ್ರಣವೇ ಬದಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಬೆಂಗಳೂರು ಕೇಂದ್ರ ನಗರ ಪಾಲಿಕೆ ಹಾಗೂ ಬಿ-ಸ್ಮೈಲ್ ವತಿಯಿಂದ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 58.44 ಕೋಟಿ ರು. ವೆಚ್ಚದಲ್ಲಿ ವೈಟ್ ಟಾಪಿಂಗ್ ಮತ್ತು ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ದೊಡ್ಡ ಪ್ರಮಾಣದಲ್ಲಿ ಅನುದಾನ ಒದಗಿಸಿ ಅಭಿವೃದ್ಧಿ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ನಯಾ ಪೈಸೆ ನೀಡಿಲ್ಲ. ಹಿಂದಿನ ಬಿಜೆಪಿ ಸರ್ಕಾರ ರಸ್ತೆಗೆ ಒಂದು ಹಿಡಿ ಮಣ್ಣು ಕೂಡ ಹಾಕಿಲ್ಲ. ಆದರೆ ನಾವು ಬಿಜೆಪಿ ಶಾಸಕರ ಕ್ಷೇತ್ರಕ್ಕೂ ಅನುದಾನ ನೀಡುತ್ತೇವೆ ಎಂದರು.
ಈ ವರ್ಷ ಹೆಚ್ಚು ಮಳೆಯಾಗಿದೆ. ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ನಿಗದಿತ ಸಮಯದಲ್ಲಿ ರಸ್ತೆಗಳ ಗುಂಡಿ ಮುಚ್ಚಲು ಸಮಸ್ಯೆ ಆಗುತ್ತಿದೆ. ಆದರೆ, ಮುಂದಿನ ಒಂದು ವಾರದಲ್ಲಿ ರಸ್ತೆ ಗುಂಡಿಗಳನ್ನೆಲ್ಲಾ ಮುಚ್ಚಬೇಕು. ರಸ್ತೆಗಳಿಗೆ ಒಂದು ಪದರ ಹೊಸ ಟಾರು ಹಾಕಬೇಕು ಎಂದು ಜಿಬಿಎ ಆಯುಕ್ತರಿಗೆ ಮುಖ್ಯಮಂತ್ರಿಯವರು ನಿರ್ದೇಶನ ನೀಡಿದರು.
ಕೇಂದ್ರದಿಂದ 15,000 ಕೋಟಿ ನಷ್ಟ: 8 ವರ್ಷಗಳ ಹಿಂದೆ ಜಿಎಸ್ಟಿ ಜಾರಿಗೆ ತಂದು, ತೆರಿಗೆ ಸಂಗ್ರಹಿಸಲಾಗಿದೆ. ಈಗ ಪರಿಷ್ಕರಿಸಿ ಅದನ್ನೇ ದೀಪಾವಳಿ ಗಿಫ್ಟ್ ಎಂದು ಸಾಧನೆ ಎನ್ನುವಂತೆ ಬಿಜೆಪಿಯವರು ಫೋಟೋ ಹಾಕಿಸಿಕೊಳ್ಳುತ್ತಿದ್ದಾರೆ. ಆದರೆ, ಇದರಿಂದ ನಮ್ಮ ರಾಜ್ಯಕ್ಕೆ 15,000 ಕೋಟಿ ರು. ಜಿಎಸ್ಟಿ ನಷ್ಟವಾಗುತ್ತಿದೆ. ಅದನ್ನು ಯಾರಲ್ಲಿ ಕೇಳಬೇಕು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಮೆಟ್ರೋ ಯೋಜನೆಗೆ ಶೇ.87ರಷ್ಟು ಹಣ ರಾಜ್ಯ ಸರ್ಕಾರ ಕೊಡುತ್ತದೆ. ಆದರೆ, ಬಿಜೆಪಿಯವರು ಕೇಂದ್ರದ ಯೋಜನೆ ಎಂದು ಸುಳ್ಳು ಹೇಳುತ್ತಾರೆ. ಒಂದು ರಸ್ತೆಯನ್ನೂ ನಿರ್ಮಿಸದ ಬಿಜೆಪಿಯವರು ಬೆಂಗಳೂರಿಗೆ ಏನು ಕೊಡುಗೆ ನೀಡಿದ್ದಾರೆ? ನಮ್ಮ ಅವಧಿಯಲ್ಲೇ ಬೆಂಗಳೂರಿನಲ್ಲಿ ಅಭಿವೃದ್ಧಿ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಆರ್‌ಎಸ್‌ಎಸ್ ನವರು ಬರೆದುಕೊಟ್ಟಿದ್ದನ್ನು ಹೇಳುವುದಷ್ಟೇ ಬಿಜೆಪಿಯವರ ಕೆಲಸ. ಆರ್‌ಎಸ್‌ಎಸ್‌ನವರು ಹೇಳಿದ್ದನ್ನು ನಾವು ಮಾಡಬೇಕು. ಇಲ್ಲದಿದ್ದರೆ ನಮ್ಮನ್ನು ಬಿಡುವುದಿಲ್ಲ ಎಂದು ಶಾಸಕ ಆರ್.ಅಶೋಕ್ ಅವರೇ ನನ್ನ ಬಳಿ ಒಮ್ಮೆ ಹೇಳಿಕೊಂಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಮೌರ್ಯ ಜಂಕ್ಷನ್‌ನಿಂದ ಹರೇ ಕೃಷ್ಣ ಜಂಕ್ಷನ್‌ವರೆಗೆ, ಬಿ.ಟಿ ರಸ್ತೆ, ರಂಗಸ್ವಾಮಿ ದೇವಸ್ಥಾನದ ರಸ್ತೆ, ಸುಲ್ತಾನ ಪೇಟೆ ಮುಖ್ಯರಸ್ತೆ, ಕಿಲಾರಿ ರಸ್ತೆ, ಆಸ್ಪತ್ರೆ ರಸ್ತೆ, ಧನವಂತ್ರಿ ರಸ್ತೆಯಿಂದ ಗುಬ್ಬಿ ತೋಟದಪ್ಪ ರಸ್ತೆ, ಟ್ಯಾಂಕ್ ಬಂಡ್ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲಾಗುತ್ತದೆ. ರಸ್ತೆ ಬದಿ ವಿದ್ಯುತ್ ವೈರ್, ಒಎಫ್‌ಸಿ ಡಕ್ಟ್, ನೀರು ಮತ್ತು ಒಳಚರಂಡಿ ಪೈಪ್ ಇರುತ್ತವೆ. ಜೊತೆಗೆ ಅಗ್ನಿ ನಿಯಂತ್ರಣಕ್ಕೆ ಫೈರ್ ಹೈಡ್ರೆಂಟ್ ಪೈಪ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕ ವೆಂಕಟೇಶ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ನಗರದ ಜನ ಬಿಜೆಪಿಯಿಂದ ಐವರು ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದೀರಿ. ಹಣಕಾಸು ಸಚಿವರೂ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ಆದರೆ, ಇಲ್ಲಿನ ಸಮಸ್ಯೆಗಳು, ಅಭಿವೃದ್ಧಿಗಾಗಿ ಯಾವೊಬ್ಬ ಸಂಸದ ಕೂಡ ಧ್ವನಿ ಎತ್ತುತ್ತಿಲ್ಲ. ಇಂತಹ ಸಂಸದರನ್ನು ಜನರು ಚುನಾವಣೆಯಲ್ಲಿ ಸೋಲಿಸಬೇಕು.
- ಸಿದ್ದರಾಮಯ್ಯ, ಮುಖ್ಯಮಂತ್ರಿ
10 ವರ್ಷಗಳಲ್ಲಿ ನಗರದ ಚಿತ್ರಣವೇ ಬದಲು : ಡಿಸಿಎಂ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಮುಂದಿನ 10 ವರ್ಷಗಳಲ್ಲಿ ನಗರದ ಚಿತ್ರಣ ಬದಲಾಗಲಿದೆ. ಹೊಸ ರೂಪ ನೀಡುತ್ತಿದ್ದೇವೆ. ನಗರದಲ್ಲಿ 4,000 ಕೋಟಿ ರು. ವೆಚ್ಚದಲ್ಲಿ 500 ಕಿ.ಮೀ. ಉದ್ದದ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಡಿಪಿಆರ್ ಸಿದ್ಧಪಡಿಸುತ್ತಿದ್ದೇವೆ. 1,650 ಕಿ.ಮೀ ಉದ್ದದ ಪ್ರಮುಖ ರಸ್ತೆಗಳಿದ್ದು, ಹೊಸದಾಗಿ 104 ಕಿಮೀ ರಸ್ತೆಗೆ ವೈಟ್ ಟಾಪಿಂಗ್ ಮಾಡಲಾಗುತ್ತಿದೆ. ವೈಟ್ ಟಾಪಿಂಗ್ ರಸ್ತೆಗಳು ಸುಮಾರು 25-30 ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಈಗಾಗಲೇ 148 ಕಿ.ಮೀ ಉದ್ದದ ರಸ್ತೆಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಒಟ್ಟು 83 ರಸ್ತೆಗಳ ಅಭಿವೃದ್ದಿಗೆ 1,800 ಕೋಟಿ ಹಣ ವ್ಯಯಿಸಲಾಗುತ್ತಿದೆ. 350 ಕಿಲೋ ಮೀಟರ್ ಉದ್ದದ 182 ರಸ್ತೆಗಳಲ್ಲಿ ಬ್ಲಾಕ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಇದಕ್ಕೆ 695 ಕೋಟಿ ರು. ವ್ಯಯಿಸಲಾಗುತ್ತಿದೆ. ಮುಖ್ಯಮಂತ್ರಿಯವರು ಹೊಸದಾಗಿ 1,100 ಕೋಟಿ ರು. ಅನುದಾನ ನೀಡಿದ್ದು, ಇದರಿಂದ 550 ಕಿ.ಮೀ. ಉದ್ದದ ರಸ್ತೆಗಳ ಡಾಂಬರೀಕರಣ ಕೈಗೆತ್ತಿಕೊಂಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.
ಪ್ರಧಾನಿ ಮೋದಿಯವರು ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಬಂದಿದ್ದಾಗ, ನಗರದ ಅಭಿವೃದ್ದಿಗೆ 1.5 ಲಕ್ಷ ಕೋಟಿ ರು. ಮೊತ್ತದ ಯೋಜನೆಗಳಿಗೆ ಅನುದಾನ ನೀಡಬೇಕು. ಮಹಾರಾಷ್ಟ್ರ, ಮುಂಬೈ ನಂತರ ಬೆಂಗಳೂರು ಅತಿ ಹೆಚ್ಚು ತೆರಿಗೆ ನೀಡುತ್ತಿದೆ ಎಂದು ಮನವಿ ಮಾಡಿದ್ದೆ. ಆದರೆ, ಅವರಿಂದ ಇದುವರೆಗೂ ಉತ್ತರ ಬಂದಿಲ್ಲ. ಆದರೂ, ನಗರದ ಖಾಲಿ ಡಬ್ಬ ಸಂಸದ ಬರೀ ಟ್ವೀಟ್ ಮಾಡಿ ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದಾನೆ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದರು.