ಸಾರಾಂಶ
ರಾಮನಗರ: ಮಾಹಿತಿ ಹಕ್ಕು ಕಾಯ್ದೆಯಲ್ಲಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ ಅರ್ಜಿಗಳನ್ನು ಅಧಿಕಾರಿಗಳು ಉಪೇಕ್ಷಿಸಿದರೆ ದಂಡ ಮತ್ತು ಶಿಸ್ತು ಕ್ರಮದ ಜೊತೆಗೆ ಒಂದು ಲಕ್ಷ ರು.ಗಳವರೆಗೆ ಪರಿಹಾರ ನೀಡಬೇಕಾಗುತ್ತದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಬದ್ರುದ್ಧೀನ್ ಕೆ.ಮಾಣಿ ಎಚ್ಚರಿಕೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗ ಆಯೋಜಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಕುರಿತು ಜಾಗೃತಿ ಕಾರ್ಯಾಗಾರ ಹಾಗೂ ಸಂವಾದದಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಸಾರ್ವಜನಿಕ ಮಾಹಿತಿ ಅಧಿಕಾರಿ ಮೊದಲು ಅರ್ಜಿಯ ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಹಾಗೊಂದು ವೇಳೆ ಅರ್ಜಿ ನಿರ್ಲಕ್ಷಿಸಿದರೆ 1 ಲಕ್ಷದವರೆಗೆ ಪರಿಹಾರ ಕೊಡಬೇಕಾಗುತ್ತದೆ ಎಂದರು.ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಆರ್‌ಟಿಐ ಅರ್ಜಿದಾರರಿಗೆ ಸಮರ್ಪಕವಾಗಿ ಮಾಹಿತಿ ಕೊಡುತ್ತಿಲ್ಲ. ಪ್ರಥಮ ಮೇಲ್ಮನವಿ ಪ್ರಾಧಿಕಾರಗಳೂ ಸ್ಪಂದಿಸದೆ ವಿಳಂಬ ಮಾಡುತ್ತಿದ್ದಾರೆ. ಮಾಹಿತಿ ಲಭ್ಯವಿಲ್ಲದಿದ್ದರೆ ಎಲ್ಲಿ ಸಿಗುತ್ತದೆ ಎಂಬ ಸ್ಪಷ್ಟ ಹಿಂಬರಹ ನೀಡದೆ ಅರ್ಜಿದಾರರನ್ನು ಅಲೆಡಾಡಿಸುತ್ತಾರೆ. ಇದರಿಂದಾಗಿ ಆಯೋಗಕ್ಕೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿವೆ.
ಕಾಯ್ದೆ ದುರ್ಬಳಕೆ ಮಾಡಿಕೊಳ್ಳುವಂತಿಲ್ಲ. ಸಾರ್ವಜನಿಕ ಹಿತಾಸಕ್ತಿ ಇಲ್ಲದೆ ದುರುದ್ದೇಶದಿಂದ ಪದೇ ಪದೇ ಅರ್ಜಿ ಸಲ್ಲಿಸುವವರನ್ನು ಕಪ್ಪು ಪಟ್ಟಿಗೆ ಸೇರಿಸುತ್ತದೆ. ಅಧಿಕಾರಿಗಳು ಅರ್ಜಿಗಳನ್ನು ಉಪೇಕ್ಷೆ ಮಾಡಬಾರದು. ಮೊದಲು ಆರ್ ಟಿಐ ಕಾಯ್ದೆಯನ್ನು ಸಮರ್ಪಕವಾಗಿ ಓದಿ ಅರ್ಥೈಸಿಕೊಕೊಳ್ಳಿ. ಅರ್ಜಿಗಳನ್ನು ವಿಲೇವಾರಿ ಮಾಡದ ಅಧಿಕಾರಿಗಳಿಗೆ ಸಮನ್ಸ್ ಬರಲಿದೆ. ನಿರ್ಲಕ್ಷ್ಯ ಮಾಡಿದರೆ ದಂಡ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಸಿದರು.ಅಧಿಕಾರಿಗಳು ಭಯಪಡಬೇಕಿಲ್ಲ:
ಮಾಹಿತಿ ಹಕ್ಕು ಕಾಯ್ದೆ ಮೂಲ ಉದ್ದೇಶ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವುದಾಗಿದೆ. ಅಧಿಕಾರಿಗಳಲ್ಲಿ ಕರ್ತವ್ಯ ನಿಷ್ಠೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೂ ಈ ಕಾಯ್ದೆ ಸಹಕಾರಿಯಾಗಿದೆ. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಅಧಿಕಾರಿಗಳು ಭಯಪಡುವ ಅಗತ್ಯವಿಲ್ಲ. ಇದು ಅತ್ಯಂತ ಬಲಶಾಲಿ ಕಾಯ್ದೆ. ಇದರ ಪರಿಣಾಮಗಳು ಹಾಗೂ ಬದಲಾವಣೆಗಳು ಸಮಾಜದಲ್ಲಿ ಕಂಡುಬಂದಿವೆ. ಜಿಲ್ಲೆಯ ನಿವೃತ್ತ ಅಧಿಕಾರಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದ್ದರಿಂದ ಕಾಯ್ದೆಯನ್ನು ನಿರ್ಲಕ್ಷ್ಯ ಮಾಡಿದರೆ ಸಹಿಸುವುದಿಲ್ಲ ಎಂದರು.ಸರ್ಕಾರಿ ಅಧಿಕಾರಿಗಳ ಹುದ್ದೆ ಎಲ್ಲರಿಗೂ ಸಿಗುವುದಿಲ್ಲ. ಆ ಸ್ಥಾನದಲ್ಲಿರುವವರು ತಾಯಿ ಹೃದಯ ಇಟ್ಟುಕೊಂಡು ಕೆಲಸ ಮಾಡಬೇಕು. ಎಲ್ಲ ಅರ್ಜಿದಾರರನ್ನು ಒಂದೇ ತಕ್ಕಡಿಯಲ್ಲಿ ತೂಗಬಾರದು. ಇಲ್ಲದಿದ್ದರೆ ನಿಮ್ಮದಲ್ಲದ ತಪ್ಪಿಗೆ ನೀವೇ ಹೊಣೆಗಾರರಾಗುತ್ತೀರಿ. ಅತ್ಯಂತ ಕಠಿಣ ಸವಾಲುಗಳನ್ನು ಎದುರಿಸುವ ನಿಮಗೆ (ಅಧಿಕಾರಿ) ಜನ ಸ್ನೇಹಿಯಾಗಿರುವ ಕಾಯಿದೆ ನಿಭಾಯಿಸಲು ಕಷ್ಟವಾಗುವುದಿಲ್ಲ ಎಂದು ಬದ್ರುದ್ದೀನ್ ಕೆ.ಮಾಣಿ ಹೇಳಿದರು.
ಹಕ್ಕನ್ನು ಕೇಳಲಿರುವ ಪ್ರಬಲ ಅಸ್ತ್ರ:ಮತ್ತೋರ್ವ ಆಯುಕ್ತ ಡಾ.ಹರೀಶ್ ಕುಮಾರ್ ಮಾತನಾಡಿ, ಆರ್ ಡಿಪಿಆರ್ ಮತ್ತು ಕಂದಾಯ ಇಲಾಖೆಗಳಿಗೆ ಸಂಬಂಧಿಸಿದಂತೆ ಆಯೋಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮೇಲ್ಮನವಿಗಳು ಬರುತ್ತವೆ. ವೆಬ್ ಸೈಟ್‌ನಲ್ಲಿ ಮಾಹಿತಿಯನ್ನು ಪಾರದರ್ಶಕವಾಗಿ ಅನಾವರಣ ಮಾಡಿದರೆ ಬಹಳಷ್ಟು ಅರ್ಜಿಗಳು ಮೂಲ ಹಂತದಲ್ಲಿಯೇ ವಿಲೇವಾರಿಯಾಗುತ್ತದೆ. ಆಯೋಗಕ್ಕೆ ಬಂದಿರುವ 45 ಸಾವಿರ ಮೇಲ್ಮನವಿಗಳಲ್ಲಿ 25 ಸಾವಿರ ಅರ್ಜಿಗಳು ಕಂದಾಯ ಇಲಾಖೆ ವ್ಯಾಪ್ತಿಗೆ ಸೇರಿರುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬರಿಗೂ ತಮ್ಮ ಹಕ್ಕನ್ನು ಕೇಳಲು ಈ ಕಾಯಿದೆ ಅಸ್ತ್ರವಾಗಿದೆ. ಜನರು ವ್ಯವಸ್ಥೆಯನ್ನು ಪ್ರಶ್ನಿಸುವ ಹಕ್ಕಾಗಿದೆ. ಇಷ್ಟೇ ಅಲ್ಲದೆ, ಅಧಿಕಾರಿ ಶಾಹಿಯನ್ನು ನಿಯಂತ್ರಿಸಿ, ಉತ್ತರದಾಯಿಯನ್ನಾಗಿ ಮಾಡಲು ಕಾಯಿದೆ ಅವಕಾಶ ಮಾಡಿಕೊಟ್ಟಿದೆ. ಅಧಿಕಾರಿಗಳು ಮುಕ್ತವಾಗಿದ್ದರೆ ಭಯ ಪಡಬಾರದು ಎಂದರು.ಕಾಯ್ದೆ ಸದ್ಬಳಕೆ ಜೊತೆಗೆ ದುರ್ಬಳಕೆ ಆಗುತ್ತಿರುವ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ. ಇದು ಅರ್ಜಿದಾರರ ನೈತಿಕತೆ ತೋರಿಸುತ್ತದೆ. ಇದರಿಂದ ಕೆಲವೊಮ್ಮೆ ಅಧಿಕಾರಿಗಳು ಜನ ಸ್ನೇಹಿಯಾಗಲು ಸಾಧ್ಯವಾಗುವುದಿಲ್ಲ. ಕಾನೂನು ಪ್ರಕಾರ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಅರ್ಜಿದಾರರ ಹಿತಾಸಕ್ತಿ ಗಮನದಲ್ಲಿಟ್ಟು ಮಾಹಿತಿ ನೀಡಲೇಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ, ಎಎಸ್ಪಿ ರಾಮಚಂದ್ರಯ್ಯ, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಜಯಂತ್, ಜಿಪಂ ಉಪ ಕಾರ್ಯದರ್ಶಿ ಧನರಾಜ್ ಉಪಸ್ಥಿತರಿದ್ದರು.ಕೋಟ್ ..........
ಬೆಂಗಳೂರು ದಕ್ಷಿಣ ಜಿಲ್ಲೆಗೆ ಸಂಬಂಧಿಸಿದಂತೆ ಆಯೋಗದಲ್ಲಿ 707 ಮೇಲ್ಮನವಿ ಅರ್ಜಿಗಳು ಬಾಕಿ ಇವೆ.ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ 274, ಕಂದಾಯ ಇಲಾಖೆ - 194, ನಗರಾಭಿವೃದ್ಧಿ ಇಲಾಖೆ - 64, ಪೊಲೀಸ್ ಇಲಾಖೆ - 40 ಅರ್ಜಿಗಳು ದ್ವಿತೀಯ ಮೇಲ್ಮನವಿ ಪ್ರಾಧಿಕಾರದ ಮಾಹಿತಿ ಆಯೋಗದಲ್ಲಿ ಬಾಕಿ ಉಳಿದಿವೆ. ಮೇಲ್ಮನವಿ ವಿಚಾರಣೆಗೆ ಸ್ವೀಕೃತವಾಗುವ ಕ್ರಮಾಂಕದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ 21ನೇ ಸ್ಥಾನದಲ್ಲಿದ್ದು ಶೇ.1.67ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಬೇಕಿದೆ. ಅವುಗಳನ್ನು ಶೂನ್ಯ ಸ್ಥಾನಕ್ಕೆ ತರಲು ಜಿಲ್ಲೆಯ ಎಲ್ಲಾ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಶ್ರಮಿಸಬೇಕು.
-ಬದ್ರುದ್ದೀನ್ ಕೆ.ಮಾಣಿ, ಆಯುಕ್ತರು, ಕರ್ನಾಟಕ ಮಾಹಿತಿ ಆಯೋಗ(ಈ ಕೋಟ್‌ನ್ನು ಪ್ಯಾನಲ್‌ನಲ್ಲಿ ಬಳಸಿ)
ಕೋಟ್ .....................ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 4(1)ಎ ಮತ್ತು 4(1)ಬಿ ಯಲ್ಲಿ ಲಭ್ಯವಿರುವ ಮಾಹಿತಿಯನ್ನು ಡಿಜಿಟಲೀಕರಣ ಮಾಡಿ ಕಡ್ಡಾಯವಾಗಿ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಬೇಕು. ಸಾರ್ವಜನಿಕ ಮಾಹಿತಿಗೂ ಮಿತಿ ಇದೆ, ನಿರಾಕರಿಸುವ ಅವಕಾಶವೂ ಇದೆ. ಯಾವ ಹಂತದಲ್ಲಿ ಯಾವ ಮಾಹಿತಿಯನ್ನು ಒದಗಿಸಬೇಕು ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ. ಕಾಯ್ದೆಯೊಂದಿಗೆ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನೀತಿ ನಿಯಮಗಳನ್ನು ಓದಿಕೊಳ್ಳಬೇಕು. ಅವುಗಳ ಕಾಲಕಾಲಕ್ಕೆ ಹೊರಡಿಸುವ ತೀರ್ಪುಗಳನ್ನು ತಿಳಿದುಕೊಂಡರೆ ಅತ್ಯಂತ ಉಪಯುಕ್ತ.
-ಡಾ.ಹರೀಶ್ ಕುಮಾರ್, ಆಯುಕ್ತರು, ಕರ್ನಾಟಕ ಮಾಹಿತಿ ಆಯೋಗ6ಕೆಆರ್ ಎಂಎನ್ 2,3.ಜೆಪಿಜಿ
ರಾಮನಗರದ ಜಿಪಂ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗ ಆಯೋಜಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಕುರಿತು ಜಾಗೃತಿ ಕಾರ್ಯಾಗಾರ ಹಾಗೂ ಸಂವಾದವನ್ನು ಆಯುಕ್ತ ಬದ್ರುದ್ದೀನ್ ಕೆ.ಮಾಣಿ ಮತ್ತು ಡಾ.ಹರೀಶ್ ಕುಮಾರ್ ಉದ್ಘಾಟಿಸಿದರು.