2026-27ನೇ ಸಾಲಿನ ಕರಡು ವಾರ್ಷಿಕ ಅಭಿವೃದ್ಧಿ ಯೋಜನೆ ಸಂಬಂಧ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅಧ್ಯಕ್ಷತೆಯಲ್ಲಿ, ಶಾಸಕ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ ಉಪಸ್ಥಿತಿಯಲ್ಲಿ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು.
ಕನ್ನಡಪ್ರಭವಾರ್ತೆ ಮಡಿಕೇರಿ
2026-27ನೇ ಸಾಲಿನ ಕರಡು ವಾರ್ಷಿಕ ಅಭಿವೃದ್ಧಿ ಯೋಜನೆ ಸಂಬಂಧ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅಧ್ಯಕ್ಷತೆಯಲ್ಲಿ, ಶಾಸಕ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ ಉಪಸ್ಥಿತಿಯಲ್ಲಿ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು.ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಥಮ ಸಭೆಯಲ್ಲಿ ಮುಂದಿನ ಆರ್ಥಿಕ ವರ್ಷದ ವಿವಿಧ ಇಲಾಖೆಗಳ ವಾರ್ಷಿಕ ಅಭಿವೃದ್ಧಿ ಕ್ರಿಯಾಯೋಜನೆ ಸಂಬಂಧ ಚರ್ಚೆ ನಡೆಯಿತು. ಸಚಿವ ಎನ್.ಎಸ್.ಭೋಸರಾಜು ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಯೋಜನಾ ಸಮಿತಿ ಸಭೆ ನಡೆಸಿ ಸಲಹೆ ಮತ್ತು ಮಾರ್ಗದರ್ಶನ ಪಡೆಯುವಂತೆ ನಿರ್ದೇಶನ ನೀಡಿದ್ದಾರೆ. ಅದರಂತೆ ಕೊಡಗು ಜಿಲ್ಲೆಯಲ್ಲಿ ಮುಂದಿನ ಆರ್ಥಿಕ ವರ್ಷದಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ರಸ್ತೆ, ಕುಡಿಯುವ ನೀರು, ಶಾಲಾ ಕಾಲೇಜು ಕಟ್ಟಡ, ಸರ್ಕಾರಿ ಕಚೇರಿ ಕಟ್ಟಡಗಳ ಅಭಿವೃದ್ಧಿ ಹಾಗೂ ಸಾರ್ವಜನಿಕ ಆಸ್ಪತ್ರೆ ಹಾಗೂ ಪಶು ಆಸ್ಪತ್ರೆ ನಿರ್ಮಾಣ, ಸಾರಿಗೆ ಸಂಪರ್ಕ, ವಿದ್ಯಾರ್ಥಿ ನಿಲಯಗಳ ಆರಂಭ, ವಸತಿ ಯೋಜನೆ, ಹೀಗೆ ಹಲವು ಅಭಿವೃದ್ಧಿ ಕೆಲಸಗಳ ಸಂಬಂಧ ಕ್ರಿಯಾಯೋಜನೆ ತಯಾರಿಸಿ ನಿಖರ ಮಾಹಿತಿ ಒದಗಿಸುವಂತೆ ಎನ್.ಎಸ್.ಭೋಸರಾಜು ಅವರು ಸೂಚಿಸಿದರು. ಜಿಲ್ಲೆಯ ಅಭಿವೃದ್ಧಿ ಹಾಗೂ ಆಗಬೇಕಿರುವ ಕೆಲಸಗಳ ಸಂಬಂಧ ಕ್ರಿಯಾಯೋಜನೆ ತಯಾರಿಸಿ ಬೆಳಕು ಚೆಲ್ಲುವಂತಾಗಬೇಕು. ಈ ಸಂಬಂಧ ಸರ್ಕಾರದ ಹಂತದಲ್ಲಿ ಅನುದಾನ ಬಿಡುಗಡೆಗೆ ಆಗಲಿದೆ ಎಂದರು.ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ವಿದ್ಯುತ್ ಉಪ ಕೇಂದ್ರಗಳ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಕೊಡಗು ಜಿಲ್ಲೆಗೆ ಉತ್ತಮ ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸುವಂತಾಗಬೇಕು, ಆ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು. ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ, ಮಾತನಾಡಿ ಮುಂದಿನ ಆರ್ಥಿಕ ವರ್ಷದಲ್ಲಿ ಅಭಿವೃದ್ಧಿ ಕಾರ್ಯಗಳ ಸಂಬಂಧ ಯಾವ ರೀತಿ ಯೋಜನೆ ರೂಪಿಸಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಬೇಕು. ರಸ್ತೆ, ಸೇತುವೆ, ಆಸ್ಪತ್ರೆ, ಶಾಲಾ ಕಟ್ಟಡಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳ ಬಗ್ಗೆ ನಿಖರ ಅಂಕಿ ಅಂಶ ಒದಗಿಸಬೇಕು ಎಂದರು.
ಜಿಲ್ಲೆಯಲ್ಲಿ ಪಡಿತರ ಚೀಟಿಗೆ ಸಂಬಂಧಿಸಿದಂತೆ ಬಡ ಕುಟುಂಬಗಳಿಗೆ ಬಿಪಿಎಲ್ ನಿಂದ ಎಪಿಎಲ್‍ಗೆ ಬದಲಾಗಿದ್ದಲ್ಲಿ ಸೇರ್ಪಡೆ ಮಾಡಬಹುದಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅವರಿಗೆ ಮಾಹಿತಿ ಒದಗಿಸಬೇಕು ಎಂದು ಹೇಳಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಮಾತನಾಡಿ ಕ್ರಿಯಾಯೋಜನೆ ತಯಾರಿಸುವ ಸಂಬಂಧ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸುವಂತಾಗಬೇಕು ಎಂದು ಸಲಹೆ ಮಾಡಿದರು. ಸರ್ಕಾರದ ಯೋಜನೆಗಳು ವೈಜ್ಞಾನಿಕವಾಗಿರಬೇಕು. ಸಾರ್ವಜನಿಕವಾಗಿರಬೇಕು. ಎಲ್ಲರಿಗೂ ತಲುಪುವಂತಾಗಬೇಕು. ಆ ನಿಟ್ಟಿನಲ್ಲಿ ವರದಿ ಕ್ರಿಯಾಯೋಜನೆ ರೂಪಿಸಬೇಕು ಎಂದು ಹೇಳಿದರು. ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಾತನಾಡಿ ಪಡಿತರ ಚೀಟಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಬಿಪಿಎಲ್‍ನಿಂದ ಎಪಿಎಲ್‍ಗೆ ಬದಲಾಗಿರುವ ಕಾರ್ಡುಗಳನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ತಾಲೂಕುವಾರು ಮಾಹಿತಿ ನೀಡಬೇಕು. ಆ ನಿಟ್ಟಿನಲ್ಲಿ ಸರಿಪಡಿಸಲು ಕ್ರಮವಹಿಸಲಾಗುವುದು ಎಂದರು. ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಮಾತನಾಡಿ ಪಂಚಾಯತ್ ರಾಜ್ ಅಧಿನಿಯಮದಂತೆ ಜಿಲ್ಲೆಯ ಎಲ್ಲ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಕರಡು ಅಭಿವೃದ್ಧಿ ಯೋಜನೆಗಳನ್ನು ಕ್ರೋಢೀಕರಿಸಲು ಜಿಲ್ಲಾ ಹಂತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಯೋಜನಾ ಸಮಿತಿಯನ್ನು ಸರ್ಕಾರ ರಚಿಸಿದೆ ಎಂದು ತಿಳಿಸಿದರು. ಕೊಡಗು ಜಿಲ್ಲಾ ಯೋಜನಾ ಸಮಿತಿ ಸದಸ್ಯರಾದ ರಾಜೇಶ್ ಯಲ್ಲಪ್ಪ, ಮಾತನಾಡಿ ಚುನಾವಣೆ ಮೂಲಕ ನೂತನ ಸದಸ್ಯರು ಆಯ್ಕೆಯಾಗಿದ್ದು, ಯೋಜನೆ ಸಂಬಂಧ ಅಧ್ಯಯನ ಮಾಡಬೇಕಿದೆ. ಆ ನಿಟ್ಟಿನಲ್ಲಿ ಒಂದು ವಾರಗಳ ಕಾಲಾವಕಾಶ ನೀಡಬೇಕೆಂದು ಕೋರಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಡಾ.ಮಂತರ್ ಗೌಡ, ಈ ಯೋಜನಾ ಸಮಿತಿ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತಾಗಬೇಕು, ಜೊತೆಗೆ ದೂರದೃಷ್ಟಿ ಇರಬೇಕು ಎಂದು ಸಲಹೆ ಮಾಡಿದರು. ಹೊಸ ಕ್ರಿಯಾಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸಬೇಕು. ಇದು ಪ್ರಗತಿ ಪರಿಶೀಲನಾ ಸಭೆಯಲ್ಲ ಎಂದು ತಿಳಿಸಿದರು. ಸಮಿತಿ ಸದಸ್ಯರಾದ ಬಾಲಕೃಷ್ಣ ನಾಯರ್ ಮಾತನಾಡಿ ಕರಿಕೆ ಗ್ರಾಮದಲ್ಲಿ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಆಗಬೇಕು. ಜೊತೆಗೆ ವೈದ್ಯರನ್ನು ನೇಮಿಸುವಂತಾಗಬೇಕು ಎಂದು ಕೋರಿದರು. ಕೆಲವು ಕಡೆ ಸರ್ಕಾರಿ ಕಟ್ಟಡ ಇಲ್ಲದೆ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿಗಳು ನಡೆಯುತ್ತಿದ್ದು. ಅಂತಹ ಕಡೆಗಳಲ್ಲಿ ಹೊಸ ಅಂಗನವಾಡಿ ಕಟ್ಟಡ ನಿರ್ಮಾಣ ಆಗಬೇಕು. ಹಾಗೆಯೇ ಅಗತ್ಯವಿರುವ ಕಡೆ ಹೊಸ ಅಂಗನವಾಡಿ ಆರಂಭಿಸುವಂತಾಗಬೇಕು. ಎಂದು ಸದಸ್ಯರು ಸಲಹೆ ಮಾಡಿದರು. ಹಾಸ್ಟೆಲ್‍ಗೆ ಸ್ವಂತ ಕಟ್ಟಡ ನಿರ್ಮಾಣ ಆಗಬೇಕು ಎಂದು ಸಲಹೆ ಮಾಡಿದರು. ಶಾಸಕರಾದ ಡಾ.ಮಂತರ್ ಗೌಡ, ಮಾತನಾಡಿ ವಿವಿಧ ಕಾಲೋನಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನಿಗದಿ ಮಾಡಬೇಕು ಎಂದು ಸಲಹೆ ಮಾಡಿದರು. ಸದಸ್ಯರಾದ ಮನ್ಸೂರ್ ಅವರು ಮಾತನಾಡಿ ಯಾವುದೇ ಕ್ರಿಯಾಯೋಜನೆ ತಯಾರಿಸುವಾಗ ಹೆಚ್ಚಿನ ಅನುದಾನ ಪ್ರಸ್ತಾವನೆ ಸಲ್ಲಿಸುವಂತಾಗಬೇಕು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಆರ್.ಎನ್. ಮಾತನಾಡಿ ರಾಜಾಸೀಟು ಉದ್ಯಾನವನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, ವಾಹನಗಳ ನಿಲುಗಡೆಗೆ ತೊಂದರೆ ಇದೆ. ಆದ್ದರಿಂದ ಸೂಕ್ತ ಸ್ಥಳ ಕಲ್ಪಿಸುವಂತಾಗಬೇಕು ಎಂದು ಸಲಹೆ ಮಾಡಿದರು.ಈ ಕುರಿತು ಧ್ವನಿಗೂಡಿಸಿದ ಸಮಿತಿ ಸದಸ್ಯರಾದ ರಾಜೇಶ್ ಯಲ್ಲಪ್ಪ ಅವರು ರಾಜಾಸೀಟು ಉದ್ಯಾನವನದಲ್ಲಿ ಶೌಚಾಲಯ ನಿರ್ಮಾಣ ಆಗಬೇಕು. ಪಾರ್ಕಿಂಗ್ ಸಮಸ್ಯೆ ನಿವಾರಿಸಬೇಕು ಎಂದರು. ಸಮಿತಿ ಸದಸ್ಯರಾದ ಕೊಲ್ಲಿರ ಬೋಪಣ್ಣ ಅವರು ಬಿ.ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ಕುಟ್ಟಂದಿಯಲ್ಲಿ ಪಶುಪಾಲನಾ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದು, ಇಲ್ಲಿ ಕಟ್ಟಡ ನಿರ್ಮಾಣ ಮಾಡಬೇಕು. ಆ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ಸಲಹೆ ಮಾಡಿದರು.
ಬರಪೊಳೆಯಿಂದ ನೀರು ಕೇರಳಕ್ಕೆ ಹೋಗುತ್ತಿದ್ದು, ಈ ನೀರನ್ನು ಕೊಡಗು ಜಿಲ್ಲೆಗೆ ಬಳಸುವಂತಾಗಬೇಕು ಎಂದು ಸಲಹೆ ನೀಡಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ಧರ್ಮಜ ಉತ್ತಪ್ಪ ಅವರು ಮಾತನಾಡಿ ಜಿಲ್ಲೆಯ ಕೆಲವು ಭಾಗದಲ್ಲಿ 9-10 ಅಡಿ ರಸ್ತೆ ಇದ್ದು, ಚರಂಡಿ ನಿರ್ಮಿಸದೆ ರಸ್ತೆಗಳು ಹಾಳಾಗುತ್ತಿವೆ ಎಂದರು. ನಗರಸಭೆ ಅಧ್ಯಕ್ಷ ಪಿ.ಕಲಾವತಿ ಅವರು ಪಡಿತರ ಚೀಟಿ ಸಂಬಂಧ ವಿಷಯ ಪ್ರಸ್ತಾಪಿಸಿದರು.2026-27ನೇ ಸಾಲಿನಲ್ಲಿ ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ಸಂಬಂಧ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸುಮಾರು 1,27,191.24 ಲಕ್ಷ ರು. ಕ್ರಿಯಾಯೋಜನೆಯನ್ನು ಸಭೆಯಲ್ಲಿ ಮಂಡಿಸಿದರು. ಕ್ರಿಯಾ ಯೋಜನೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಸವರಾಜು, ಮಧ್ಯಾಹ್ನ ಉಪಾಹಾರ ಯೋಜನೆಯ ಶಿಕ್ಷಣಾಧಿಕಾರಿ ಹೇಮಂತ್ ರಾಜ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಿಜಯ್, ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಶೈಲಜ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಲೋಕೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಎಸ್.ಹೊನ್ನೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪತ್ರಾಂಕಿತ ಅಧಿಕಾರಿ ಪಿ.ಪಿ.ಕವಿತಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ದಿವಾಕರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್, ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕರಾದ ಲಿಂಗರಾಜು ದೊಡ್ಡಮನಿ, ಮೀನುಗಾರಿಕೆ ಇಲಾಖೆಯ ಸಚಿನ್, ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‍ಒ ಸಂದೀಪ್, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಕುಮಾರಸ್ವಾಮಿ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಮುಖ್ಯ ಯೋಜನಾಧಿಕಾರಿ ಅಬ್ದುಲ್ ನಭಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್ ಜಿ.ಕೆ.ನಾಯಕ್, ಪಿಎಂಜಿಎಸ್‍ವೈ ಎಂಜಿನಿಯರ್ ಪ್ರಭು, ಸಹಕಾರ ಸಂಘಗಳ ಉಪನಿಬಂಧಕ ರವಿಕುಮಾರ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರೇಖಾ, ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ಸೆಸ್ಕ್ ಎಂಜಿನಿಯರ್ ರಾಮಚಂದ್ರ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ನಿತಿನ್ ಚಕ್ಕಿ, ಆಹಾರ ನಿರೀಕ್ಷರಾದ ವೀಣಾ, ಜಿಲ್ಲಾ ಯೋಜನಾ ಸಮಿತಿ ಸದಸ್ಯರಾದ ಅರುಣ್ ಶೆಟ್ಟಿ, ಅಶೋಕ್ ಪಿ.ಕೆ. ಇಂದು, ಪಿ.ಎ.ದಿನೇಶ್, ಸವಿತಾ ಎ.ಕೆ., ಚಂದ್ರಶೇಖರ, ಕೆ.ಎ.ರಶಿಕಾ, ಚಿತ್ರಾವತಿ, ಮೂಕಳೆರ ಜಿ.ಸುಮಿತ, ಇತರರು ತಮ್ಮ ಇಲಾಖೆ ಕ್ರಿಯಾ ಯೋಜನೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಜಿ.ಪಂ. ಉಪಕಾರ್ಯದರ್ಶಿ ಚಂದ್ರಶೇಖರ, ತಹಶೀಲ್ದಾರರು, ತಾ.ಪಂ.ಇಒಗಳು, ಅಧಿಕಾರಿಗಳು ಇದ್ದರು. ಮತ್ತಷ್ಟು ಮಾಹಿತಿ: ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಗಳನ್ನು ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಭೆ ನಡೆಯಲಿದೆ. ಅಭಿವೃದ್ಧಿ ಯೋಜನೆ
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಪ್ರತೀ ವಾರ್ಡ್‍ಗಳಲ್ಲಿ ಸ್ಥಳೀಯ ಅವಶ್ಯಕತೆಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನಸಂಪರ್ಕ ಮುಖಾಂತರ ಸಿದ್ಧಪಡಿಸಿ ಗ್ರಾಮ ಸಭೆಗಳಲ್ಲಿ ಚರ್ಚಿಸಿ ಅಭಿವೃದ್ಧಿ ಯೋಜನೆಯನ್ನು ಪ್ರತೀ ಗ್ರಾ.ಪಂ. ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಹಂತದಲ್ಲಿ ಸಿದ್ಧಪಡಿಸಬೇಕಿದೆ.ಕರಡು ಜಿಲ್ಲಾ ಸಮಿತಿಗೆ
ಅಭಿವೃದ್ಧಿಗೆ ಸಂಬಂಧಿಸಿ ಸಿದ್ಧಪಡಿಸಲಾದ ಸ್ಥಳೀಯ ಸಂಸ್ಥೆಗಳ ಕರಡು ಅಭಿವೃದ್ಧಿ ಯೋಜನೆಗಳನ್ನು ತಾಲೂಕು ಪಂಚಾಯಿತಿಗೆ ಕಳುಹಿಸಬೇಕು. ಶಾಸಕರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ತಾಲೂಕು ಯೋಜನೆ ಹಾಗೂ ಅಭಿವೃದ್ಧಿ ಸಮಿತಿಯಲ್ಲಿ ಮಂಡಿಸಿ ಜಿಲ್ಲಾ ಯೋಜನಾ ಸಮಿತಿಗೆ ಸಲ್ಲಿಸಬೇಕಿದೆ.ಜಿಲ್ಲಾ ಯೋಜನಾ ಸಮಿತಿಯು ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಯಿಂದ ಸ್ವೀಕೃತವಾಗುವ ಯೋಜನಾ ವರದಿಯನ್ನು ಕ್ರೋಢೀಕರಿಸಿ ಸ್ಥಳೀಯ ಸಂಪನ್ಮೂಲ ಮತ್ತು ಸರ್ಕಾರದ ಅನುದಾನವನ್ನು ಗಮನದಲ್ಲಿರಿಸಿಕೊಂಡು ಇಡೀ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಾರ್ಷಿಕ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಲಾಗುತ್ತದೆ.
ಯೋಜನೆಯನ್ನು ಸಿದ್ಧಪಡಿಸುವಾಗ ಗ್ರಾ.ಪಂ.ಹಂತದಿಂದ ಜಿಲ್ಲಾ ಪಂಚಾಯಿತಿ ಹಂತದವರೆಗೆ ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ಸಿದ್ಧಪಡಿಸಬೇಕು. ಗ್ರಾಮಸ್ಥರ ನೈಜ ಆಶೋತ್ತರಗಳನ್ನು ಒಳಗೊಂಡಿರುವ ಯೋಜನೆಯು ವಾರ್ಡ್ ಸಭೆ, ಗ್ರಾಮ ಸಭೆಗಳಿಂದ ರೂಪುಗೊಂಡು ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಹಾಗೂ ಜಿಲ್ಲಾ ಯೋಜನಾ ಸಮಿತಿಯಲ್ಲಿ ಮಂಡಿಸಿ ಜಿಲ್ಲಾ ಯೋಜನೆ ತಳಮಟ್ಟದಿಂದ ಮೇಲ್ಪಟ್ಟದ ಮಾದರಿಯಲ್ಲಿ ರಚನೆಯಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.