ಸಾರಾಂಶ
- ಹೊನ್ನಾಳಿ ಉಪವಿಭಾಗದ ಎಇಇ ಜಯಪ್ಪ ಹೇಳಿಕೆ । ಬೆಸ್ಕಾಂ ಕಚೇರಿ ಸಭಾಂಗಣದಲ್ಲಿ ಗ್ರಾಹಕರ ಸಂವಾದ ಸಭೆ - - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿ ತಾಲೂಕಿನ 27 ಗ್ರಾಮ ಪಂಚಾಯಿತಿಗಳಿಂದ ಸುಮಾರು ₹20.47 ಕೋಟಿ ವಿದ್ಯುತ್ ಬಿಲ್ ಪಾವತಿ ಬಾಕಿ ಇದೆ. ರೈತರ ಪಂಪ್ ಸೆಟ್‌ಗಳ ಅಕ್ರಮ-ಸಕ್ರಮ ಕಾರ್ಯಕ್ರಮ 2023ರಲ್ಲಿ ಸ್ಥಗಿತಗೊಳಿಸಲಾಗಿದೆ ಎಂದು ಬೆಸ್ಕಾಂ ಹೊನ್ನಾಳಿ ಉಪವಿಭಾಗದ ಎ.ಇ.ಇ. ಜಯಪ್ಪ ಹೇಳಿದರು.ಶನಿವಾರ ಬೆಸ್ಕಾಂ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗ್ರಾಹಕರ ಸಂವಾದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯುತ್ ಸರಬರಾಜು ಸಂಸ್ಥೆಗಳು ತಿಳಿಸುವ ಸುರಕ್ಷತಾ ಕ್ರಮಗಳನ್ನು ಚಾಚೂ ತಪ್ಪದೇ ಬಳಕೆದಾರರು ಪಾಲಿಸಬೇಕು. ಆಗ ಬಹುಪಾಲು ವಿದ್ಯುತ್ ಅವಘಡಗಳನ್ನು ತಡೆಗಟ್ಟಬಹುದು. ರೈತರು, ಸಾರ್ವಜನಿಕರು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದರು.
17902 ಐಪಿ ಸೆಟ್‌ಗಳಿಗೆ ಆಧಾರ್ ಕಾರ್ಡ್ ಜೋಡಣೆ ಕಾರ್ಯ ನಡೆದಿದೆ. ಸುಮಾರು ಶೇ.98ರಷ್ಟು ಆಧಾರ್ ಕಾರ್ಡ್ ಜೋಡಣೆ ಕೆಲಸ ಹೊನ್ನಾಳಿ ಬೆಸ್ಕಾಂ ಉಪವಿಭಾಗದಲ್ಲಿ ನಡೆದಿದೆ. ಆಧಾರ್ ಕಾರ್ಡ್ ನಂಬರ್‌ಗಳನ್ನು ಐ.ಪಿ. ಸೆಟ್‌ಗಳ ಆರ್.ಆರ್. ನಂಬರ್‌ಗಳಿಗೆ ಜೋಡಣೆ ಮಾಡುವ ಪ್ರಮುಖ ಉದ್ದೇಶವೆಂದರೆ, ಸರ್ಕಾರದಿಂದ ವಿದ್ಯುತ್ ಸರಬರಾಜು ಕಂಪನಿಗಳ ಮೂಲಕ ಯಾವುದೇ ಸಬ್ಸಿಡಿ, ಸಹಾಯಧನ ಸೌಲಭ್ಯಗಳನ್ನು ಪಡೆಯಲು ಈ ಕ್ರಮ ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಿದರು.ಬಹುಪಾಲು ಪಂಪ್ ಸೆಟ್ ಮತ್ತು ಕೊಳೆವೆಬಾವಿ ಸ್ಟಾರ್ಟರ್ ಬಾಕ್ಸ್‌ಗಳು ಅಲ್ಯುಮಿನಿಯಂ ಅಥವಾ ಕಬ್ಬಿಣದ ಬಾಕ್ಸ್‌ಗಳಿದ್ದು, ಇವು ತುಂಬಾ ಅಪಾಯಕಾರಿ ಆಗಿರುತ್ತದೆ. ಇಲಿಗಳು ಕಚ್ಚಿ ಅಥವಾ ಯಾವುದೇ ಕಾರಣಕ್ಕೆ ಈ ಬಾಕ್ಸ್‌ಗಳಲ್ಲಿರುವ ವೈರ್ ಸ್ಕಿನ್ಔಟ್ ಆಗಿರುತ್ತದೆ. ರೈತರಿಗೆ ಇದರ ಅರಿವಿಲ್ಲದೇ, ಪಂಪ್ ಸೆಟ್ ಸ್ಟಾರ್ಟ್ ಮಾಡಲು ಬಾಕ್ಸ್‌ಗೆ ಕೈ ಹಾಕಿದಾಗ ವಿದ್ಯುತ್ ಶಾಕ್ ಆಗಿ ಜೀವಹಾನಿಯಾದ ಅನೇಕ ಉದಾಹರಣೆಗಳಿವೆ. ಈ ಸಮಸ್ಯೆಗಳ ತಪ್ಪಿಸಲು ರೈತರು ಮತ್ತು ಸಾರ್ವಜನಿಕರು ಫೈಬರ್‌ಗಳ ಬಾಕ್ಸ್‌ಗಳನ್ನೇ ಉಪಯೋಗಿಸಬೇಕು. ಇದರಿಂದ ವಿದ್ಯುತ್ ಅವಘಡಗಳನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು.
ಇನ್ನು ಕೆಲವು ಇಲಾಖೆಗಳಿಂದ ಅಲ್ಯುಮಿನಿಯಂನ ಅಡಕೆ ಕೊಯ್ಯುವ ದೋಟಿಗಳನ್ನು ನೀಡಲಾಗುತ್ತಿದೆ. ಇದು ಕೂಡ ಅಪಾಯಕಾರಿಯಾಗಿದೆ. ಅಡಕೆ ಕೊಯ್ಯುವಾಗ ಈ ದೋಟಿ ಆಕಸ್ಮಿಕವಾಗಿ ಪಕ್ಕದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳಿಗೆ ತಗುಲಿದರೆ ಅವಘಡ ಸಂಭವಿಸಬಹುದು. ಆದ್ದರಿಂದ ಸುರಕ್ಷತೆ ದೃಷ್ಟಿಯಿಂದ ಫೈಬರ್ ದೋಟಿಗಳನ್ನೇ ಉಪಯೋಗಿಸಬೇಕು ಎಂದು ತಿಳಿಸಿದರು.ಇನ್ನು ಗ್ರಾಪಂ ಹಂತದಲ್ಲಿ ಕುಡಿಯುವ ನೀರಿಗೆ ವಿದ್ಯುತ್ ಸಂಪರ್ಕಕ್ಕಾಗಿ 9 ಅರ್ಜಿಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದರು. ಸಭೆಯಲ್ಲಿ ಐ.ಪಿ. ಸೆಟ್‌ಗಳ ಆರ್.ಆರ್. ನಂಬರ್‌ಗಳ ಹೆಸರು ಬದಲಾವಣೆಗಾಗಿ ಕೆಲವರು ಅರ್ಜಿ ಸಲ್ಲಿಸಿದರು.
ಕುಂದೂರು ಬೆಸ್ಕಾಂ ವಿಭಾಗದ ಶಾಖಾಧಿಕಾರಿ ಸಿ.ಎನ್.ರಾಜು, ಬೆಸ್ಕಾಂ ಸಹಾಯಕ ಎಂಜಿನಿಯರ್ ರವಿಪ್ರಕಾಶ್, ಜೆಇ ಬಿ.ಕೆ.ಶಿವರಾಜ್, ಅನೇಕ ಬೆಸ್ಕಾಂ ಗ್ರಾಹಕ ರೈತರು, ಗುತ್ತಿಗೆದಾರರು, ಬೆಸ್ಕಾಂ ಸಿಬ್ಬಂದಿ ಇದ್ದರು.- - -
ಕೋಟ್ ವಿದ್ಯುತ್ ಸರಬರಾಜು ಮುಂತಾದ ಸಮಸ್ಯೆಗಳ ಬಗ್ಗೆ ಬೆಸ್ಕಾಂ ವತಿಯಿಂದ ಪ್ರತಿ ತಿಂಗಳು 3ನೇ ಶನಿವಾರ ಗ್ರಾಹಕರ ಸಂವಾದ ಸಭೆ ನಡೆಸಲಾಗುತ್ತದೆ. ಆ ಮೂಲಕ ರೈತರ ಮತ್ತು ಸಾರ್ವಜನಿಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಅರ್ಜಿಗಳ ಸ್ವೀಕರಿಸಿ, ಸಮಸ್ಯೆಗಳಿಗೆ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳಲಾಗುವುದು- ಜಯಪ್ಪ, ಎಇಇ, ಹೊನ್ನಾಳಿ ಉಪವಿಭಾಗ, ಬೆಸ್ಕಾಂ
- - - -19ಎಚ್.ಎಲ್.ಐ1:ಹೊನ್ನಾಳಿ ಬೆಸ್ಕಾಂ ಕಚೇರಿಯಲ್ಲಿ ಶನಿವಾರ ಎಇಇ ಜಯಪ್ಪ ಅಧ್ಯಕ್ಷತೆಯಲ್ಲಿ ನಡೆದ ವಿದ್ಯುತ್ ಗ್ರಾಹಕರ ಸಂವಾದ ಸಭೆಯಲ್ಲಿ ರೈತರು ಅಹವಾಲು ಅರ್ಜಿ ಸಲ್ಲಿಸಿದರು.