ಸಾರಾಂಶ
- ಉಳುಪಿನಕಟ್ಟೆ ರೈತ ಹುತಾತ್ಮರ ಸ್ಮಾರಕ ಬಳಿ ಭವನಕ್ಕೆ ₹60 ಲಕ್ಷ ಭರವಸೆ
- - - ಕನ್ನಡಪ್ರಭ ವಾರ್ತೆ, ದಾವಣಗೆರೆದಾವಣಗೆರೆ ಜಿಲ್ಲಾಸ್ಪತ್ರೆಗೆ ₹20 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು, ಶೀಘ್ರವೇ ಹೊಸ ಬ್ಲಾಕ್ ಕಟ್ಟುತ್ತೇವೆ. ಆನಗೋಡು ಬಳಿ ಉಳುಪಿನಕಟ್ಟೆ ಕ್ರಾಸ್‌ನ ರೈತ ಹುತಾತ್ಮ ಸ್ಮಾರಕದ ಬಳಿ ಸುಮಾರು ₹1 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲು ಎಪಿಎಂಸಿಯಿಂದ ಅನುದಾನ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಭಾನುವಾರ ತಮ್ಮ 57 ನೇ ಜನ್ಮದಿನ ಹಾಗೂ ಲೋಕಸಭಾ ಚುನಾವಣೆ ಗೆಲುವು ಹಿನ್ನೆಲೆ ಮತದಾರರಿಗೆ ಕೃತಜ್ಞತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರೈತರ ಹುತಾತ್ಮರ ಸ್ಮರಣೋತ್ಸವದಲ್ಲಿ ಸಾಣೇಹಳ್ಳಿ ಶ್ರೀಗಳು ಈಚೆಗೆ ಸಮುದಾಯ ಭವನ ನಿರ್ಮಿಸುವ ವಿಚಾರ ನನೆಗುದಿಗೆ ಬಿದ್ದಿದೆ ಎಂದು ಪ್ರಸ್ತಾಪಿಸಿದ್ದರು. ಸಮಿತಿ ಅಧ್ಯಕ್ಷ ಎನ್.ಟಿ.ಪುಟ್ಟಸ್ವಾಮಿ ₹1 ಕೋಟಿ ಅನುದಾನ ಬೇಕೆಂದಿದ್ದರು. ಈ ಹಿನ್ನೆಲೆ ಎಪಿಎಂಸಿಯಲ್ಲಿ ಅನುದಾನವಿದೆ. ಜಿಲ್ಲಾಧಿಕಾರಿ ಅವರು ಎಪಿಎಂಸಿ ಅಧಿಕಾರ ವಹಿಸಿಕೊಂಡಿದ್ದು, ತಕ್ಷಣ ₹60 ಲಕ್ಷ ಬಿಡುಗಡೆಗೆ ಸೂಚನೆ ನೀಡಿದ್ದೇನೆ ಎಂದು ಸಚಿವರು ಹೇಳಿದರು.
ಪ್ರತಿ ಸಮಾಜಕ್ಕೂ ಅನುದಾನ:ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರಿಗೂ ಸಂಸದರ ಅನುದಾನ ಬರುತ್ತಿದ್ದಂತೆಯೇ ಕುರುಬರು, ಮುಸ್ಲಿಮರಿಗೆ ಮೊದಲು ಅನುದಾನ ಬಿಡುಗಡೆ ಮಾಡಬೇಕು ಅಂತಾ ಹೇಳಿದ್ದೇನೆ. ಕುರುಬರು, ಮುಸ್ಲಿಮರಿಂದಲೇ ಬೋಣಿಗೆ ಆಗಬೇಕೆಂದು ಸಹ ಡಾ.ಪ್ರಭಾ ಅವರಿಗೆ ತಿಳಿಸಿದ್ದೇನೆ. ಪ್ರತಿ ಸಮಾಜಕ್ಕೂ ಅನುದಾನ ತಲುಪಬೇಕು. ಜಿಲ್ಲೆಯಲ್ಲಿ ಯಾವುದೇ ಕೆಲಸ ಕಳಪೆ ಆಗಬಾರದು ಎಂಬುದಾಗಿ ಸ್ಪಷ್ಟವಾಗಿ ಎಚ್ಚರಿಕೆಯನ್ನೂ ನೀಡಿದ್ದೇನೆ. ಈ ಹಿಂದೆ ಕಳಪೆ ಕೆಲಸ, ಕಾಮಗಾರಿ ಮಾಡಿದ್ದಕ್ಕೆ ಬಿಜೆಪಿಯವರು ಮನೆಗೆ ಹೋಗಿದ್ದಾರೆ ಎಂದು ಎಸ್ಸೆಸ್ಸೆಂ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ಗ್ಯಾರಂಟಿ ಯೋಜನೆ ಕೊಟ್ಟರು. ಪ್ರತಿಯೊಬ್ಬರಿಗೂ ಯೋಜನೆ ತಲುಪುತ್ತಿವೆ. ಬಡ, ಮಧ್ಯಮ ವರ್ಗಕ್ಕೆ ಯೋಜನೆಗಳು ಸಾಕಷ್ಟು ಉಪಕಾರಿಯಾಗಿವೆ. ಆದರೆ, ಸಾಹುಕಾರರು, ವಿಪಕ್ಷದವರು ಇಂತಹ ಯೋಜನೆಗಳನ್ನು ಟೀಕಿಸುತ್ತಿದ್ದಾರೆ. ಇಂತಹ ಯೋಜನೆ ಜಿಲ್ಲೆ, ರಾಜ್ಯ, ದೇಶಕ್ಕೆ ಜನರಿಗೆ ಸಿಗಬೇಕು. ಒಳ್ಳೆಯ ವಾತಾವರಣದಲ್ಲಿ ಜನರು ಬಾಳಲು ಅವಕಾಶ ಕಲ್ಪಿಸಬೇಕು. ಅಂತಹ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.- - -
ಬಾಕ್ಸ್-1 * ಡಾ.ಪ್ರಭಾರನ್ನು ಎಲ್ಲರೂ ಗೆಲ್ಲಿಸಿದ್ದಾರೆ: ಎಸ್ಸೆಸ್ಸೆಂ ದಾವಣಗೆರೆ: 25 ವರ್ಷದಿಂದ ಕಾಂಗ್ರೆಸ್ ಕೈ ತಪ್ಪಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನರನ್ನು ಗೆಲ್ಲಿಸಿದ್ದೀರಿ. ಆ ಮೂಲಕ ಪಕ್ಷಕ್ಕೆ ಬಲ ತಂದ್ರುವ ನಮ್ಮೆಲ್ಲಾ ಮತದಾರರು, ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರಿಗೆ ತುಂಬು ಹೃದಯದಿಂದ ಅಭಿನಂದಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ ಹೇಳಿದರು.ಮತದಾರರು, ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಚುನಾವಣೆಗೆ ಮುನ್ನ ಡಾ.ಪ್ರಭಾ ಅವರಿಗೆ ಟಿಕೆಟ್ ಬೇಡ ಅಂತಾ ಹೇಳಿದ್ದೆವು. ಆದರೆ, ಮುಖ್ಯಮಂತ್ರಿ ಅವರು ಸಮೀಕ್ಷೆ ಮಾಡಿಸಿ, ಪ್ರಭಾ ಅವರನ್ನೇ ನಿಲ್ಲಿಸುವಂತೆ ಸೂಚಿಸಿದ್ದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಮಲ್ಲಿಕಾರ್ಜುನ ಖರ್ಗೆ ಒಮ್ಮತದಿಂದ ತೀರ್ಮಾನಿಸಿ, ಡಾ.ಪ್ರಭಾ ಅವರಿಗೆ ಟಿಕೆಟ್ ಅಂತಿಮಗೊಳಿಸಿದರು. ಅದರಂತೆ ನೀವೆಲ್ಲರೂ ಸಾಕಷ್ಟು ಕೆಲಸ ಮಾಡಿ, ಗೆಲ್ಲಿಸಿದ್ದೀರಿ. ಈಗ ಸಂಸದರಾಗಿ ಡಾ.ಪ್ರಭಾ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸಂಸದರು, ನೀವೆಲ್ಲರೂ ಸೇರಿ ಉತ್ಸಾಹದಿಂದ ನನ್ನ ಜನ್ಮದಿನ ಸಹ ಮಾಡುತ್ತಿದ್ದೀರಿ ಎಂದು ಹರ್ಷ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆ ಗೆಲ್ಲಿಸಿದ್ದೇನೋ ಆಯ್ತು, ಇನ್ಮೇಲೆ ಕೆಲಸ ಆಗಬೇಕು. ಪ್ರತಿ ತಾಲೂಕಿಗೂ ಸಂಸದರು ಸ್ಪಂದಿಸಬೇಕು. ಕಾಂಗ್ರೆಸ್ ಮತ್ತಷ್ಟು ಬಲಿಷ್ಠಗೊಳಿಸಬೇಕು. ಜಿಪಂ, ತಾಪಂ, ಪಾಲಿಕೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತಿವೆ. ನೀವಿದ್ದರೆ ನಾವು. ನಿಮ್ಮ ವಿಶ್ವಾಸ ಮಹತ್ವದ್ದು. ನನಗೆ 4 ಸಲ ಆಯ್ಕೆ ಮಾಡಿದ್ದೀರಿ. ಈ ಹಿಂದೆ ಸಚಿವರಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇವೆ. ನಗರ ಅಭಿವೃದ್ಧಿಪಡಿಸಿದ್ದೇವೆ. ಬೇರೆ ಊರಿನ ಪಾಲಿಕೆ ವ್ಯಾಪ್ತಿಗೆ ಹೋದರೆ, ಮೊಣಕಾಲುದ್ದದಷ್ಟು ಗುಂಡಿ ಬಿದ್ದಿರುತ್ತವೆ. ಆದರೆ, ಎಂತಹ ಮಳೆ ಬಂದರೂ ದಾವಣಗೆರೆಯಲ್ಲಿ ಫ್ಲಡ್ ಆಗಿಲ್ಲ, ಹಾನಿಯಾಗಿಲ್ಲ. ಈ ಹಿಂದೆ ನಾವು ಮಾಡಿದ್ದ ಕೆಲಸಗಳೇ ಇದಕ್ಕೆ ಸಾಕ್ಷಿ. ಅಂತಹ ಗುಣಮಟ್ಟದ ಕಾಮಗಾರಿ, ಕೆಲಸ ಮಾಡಿಸಿದ್ದೇವೆ ಎಂದು ಮಲ್ಲಿಕಾರ್ಜುನ ಹೇಳಿದರು.- - -
ಬಾಕ್ಸ್-2 * ರಾಜು ರೆಡ್ಡಿ, ಕರಿಬಸಪ್ಪಗೆ ನೆನಸ್ಕೋಬೇಕು ದಾವಣಗೆರೆಯಲ್ಲಿ ಪ್ರತಿ ಸಿಸಿ ರಸ್ತೆ, ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡಿದ್ದೇವೆ. ಯುವ ಗುತ್ತಿಗೆದಾರ, ನಮ್ಮ ಆತ್ಮೀಯನಾಗಿದ್ದ ಗುತ್ತಿಗೆದಾರ ರಾಜು ರೆಡ್ಡಿ ಅನಾರೋಗ್ಯದಿಂದ ಸಾವನ್ನಪ್ಪಿದ. ಈಚೆಗೆ ಬೇತೂರು ಬಿ. ಕರಿಬಸಪ್ಪ ಸಹ ಸಾವನ್ನಪ್ಪಿದರು. ರಾಜು ರೆಡ್ಡಿ, ಕರಿಬಸಪ್ಪಗೆ ನಾವು ನೆನಸಬೇಕು. ಕಾರ್ಯಾದೇಶವೇ ಇಲ್ಲದೇ, ಸರ್ಕಾರದಿಂದ ಅನುದಾನ ಬಾರದಿದ್ದರೂ ನಾನು ಬರೀ ಕೈ ತೋರಿಸಿದರೆ ಗುಣಮಟ್ಟದಿಂದ ಕೂಡಿದ ಕೆಲಸ ಮಾಡುತ್ತಿದ್ದವನು ರಾಜು ರೆಡ್ಡಿ. ಅಂತಹ ಪ್ರಾಮಾಣಿಕ, ನಿಷ್ಠಾವಂತ ಕಾರ್ಯಕರ್ತರು ಸಾಕಷ್ಟು ಜನರಿದ್ದೀರಿ. ಅದನ್ನು ನಾವೂ ಸಹ ಉಳಿಸಿಕೊಳ್ಳಬೇಕು ಎಂದು ಎಸ್.ಎಸ್.ಎಂ. ಕಾರ್ಯಕ್ರಮದಲ್ಲಿ ಸ್ಮರಿಸಿದರು.- - -
ಟಾಪ್ ಕೋಟ್‌ಪ್ರತಿಯೊಬ್ಬರಿಗೂ ಆರೋಗ್ಯ ತಲುಪಿಸೋಣ. ಗಾಜಿನ ಮನೆ, ರಸ್ತೆ, ನೀರು, ಸೂರು, ಮೂಲ ಸೌಕರ್ಯ ಕಲ್ಪಿಸಿದ್ದೇವೆ. ಆರೋಗ್ಯ, ವಿದ್ಯೆ, ಅನ್ನ ಇವೆಲ್ಲವನ್ನು ಕಲ್ಪಿಸೋಣ. ಜಿಲ್ಲೆ ಅಭಿವೃದ್ಧಿ ಪಥದತ್ತ ಹೋಗಬೇಕಿದೆ. ರೈತರಿಗಾಗಿ ಸಾಕಷ್ಟು ಕೆಲಸ ಮಾಡಬೇಕಾಗಿದೆ. ನನ್ನ ಮೇಲೆ, ಮನೆತನದ ಮೇಲೆ ಪ್ರೀತಿ- ವಿಶ್ವಾಸವಿಟ್ಟು, ಗೆಲ್ಲಿಸಿದ್ದೀರಿ. ಆ ವಿಶ್ವಾಸ ಉಳಿಸಿಕೊಳ್ಳುತ್ತೇನೆ. ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಸಹ ಉಳಿಸಿಕೊಳ್ಳುತ್ತಾರೆ- ಎಸ್.ಎಸ್. ಮಲ್ಲಿಕಾರ್ಜುನ, ಜಿಲ್ಲಾ ಮಂತ್ರಿ
- - - (-ಫೋಟೋ: ಎಸ್ಸೆಸ್ಸೆಂ)