ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ 3.3 ಕೋಟಿ ರು. ಲಾಭ: ಅಧ್ಯಕ್ಷ ಚಿತ್ತರಂಜನ್‌ ಬೋಳಾರ್‌

| Published : Apr 07 2024, 01:50 AM IST

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ 3.3 ಕೋಟಿ ರು. ಲಾಭ: ಅಧ್ಯಕ್ಷ ಚಿತ್ತರಂಜನ್‌ ಬೋಳಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಂಘದ ದಶಮಾನೋತ್ಸವದ ಸಂದರ್ಭದಲ್ಲಿ ಸುಮಾರು ೧೪,೦೦೦ ಚದರಡಿಯ ಸ್ವಂತ ಕಟ್ಟಡವನ್ನು ಹೊಂದಿದ ದಕ್ಷಿಣ ಕನ್ನಡ ಜಿಲ್ಲೆಯ ಏಕಮಾತ್ರ ವಿವಿಧೋದ್ದೇಶ ಸಹಕಾರಿ ಸಂಘವಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ೨೦೨೩-೨೪ನೇ ಸಾಲಿನಲ್ಲಿ ವಾರ್ಷಿಕ ವಹಿವಾಟು ೨,೦೦೦ ಕೋಟಿ ರು.ಗೂ ಮೀರಿ ವ್ಯವಹಾರ ನಡೆಸಿದೆ. ವರದಿ ಸಾಲಿನಲ್ಲಿ ೨೨೫ ಕೋಟಿ ರು.ಗೂ ಅಧಿಕ ಠೇವಣಿ, ೧೭೮ ಕೋಟಿ ರು.ಗೂ ಮಿಕ್ಕಿ ಸಾಲ, ೧.೪೮ ಕೋಟಿ ರು. ಪಾಲು ಬಂಡವಾಳದೊಂದಿಗೆ ಸಂಘ ೩.೩ ಕೋಟಿ ರು.ಗೂ ಮಿಕ್ಕಿ ಲಾಭ ಗಳಿಸಿರುವುದು ಸಂಘದ ಹೆಗ್ಗಳಿಕೆಯಾಗಿದೆ ಎಂದು ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್‌ ತಿಳಿಸಿದ್ದಾರೆ.

ಸಂಘದ ದಶಮಾನೋತ್ಸವದ ಸಂದರ್ಭದಲ್ಲಿ ಸುಮಾರು ೧೪,೦೦೦ ಚದರಡಿಯ ಸ್ವಂತ ಕಟ್ಟಡವನ್ನು ಹೊಂದಿದ ದಕ್ಷಿಣ ಕನ್ನಡ ಜಿಲ್ಲೆಯ ಏಕಮಾತ್ರ ವಿವಿಧೋದ್ದೇಶ ಸಹಕಾರಿ ಸಂಘವಾಗಿದೆ. ಅಲ್ಪಾವಧಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೩೦ ಶಾಖೆಗಳು ಆರಂಭವಾಗಿ ನುರಿತ ಸಿಬ್ಬಂದಿ ವರ್ಗದ ಅತ್ಯುತ್ತಮ ಗುಣಮಟ್ಟದ ಸೇವೆಗಾಗಿ ಈಗಾಗಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ಪ್ರಶಸ್ತಿಗಳ ಗರಿಗಳನ್ನು ಮುಡುಗೇರಿಸಿಕೊಂಡಿದೆ.

ಆತ್ಮಶಕ್ತಿ ಸಹಕಾರಿ ಸಂಘ ಮಹಿಳಾ ಸಬಲೀಕರಣದೊಂದಿಗೆ ಶೇ. ೯೫ ಮಹಿಳಾ ಸಿಬ್ಬಂದಿಗಳಿಂದ ಗ್ರಾಹಕರಿಗೆ ಅತ್ಯುತ್ತಮ ಸೇವೆಯೊಂದಿಗೆ ನಿರಂತರವಾಗಿ ಲಾಭಗಳಿಸುತ್ತಾ ಬಂದಿದೆ. ಸಂಘ ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಮಾತ್ರವಲ್ಲದೆ, ಕೊಡಗು, ಚಿಕ್ಕಮಗಳೂರು ಹಾಗೂ ಮೈಸೂರು ಜಿಲ್ಲೆಗಳ ವ್ಯಾಪ್ತಿಗಳಿಗೆ ತನ್ನ ಶಾಖೆಗಳನ್ನು ವಿಸ್ತರಿಸುವ ಯೋಜನೆಯನ್ನು ಹಮ್ಮಿಕೊಂಡಿದೆ ಎಂದರು.ಸಂಘದ ಸದಸ್ಯರಿಗೆ ನಿರಂತರ ಡಿವಿಡೆಂಡ್ ನೀಡಿದ ಕೀರ್ತಿಯನ್ನು ಈ ಸಂಘವು ಹೊಂದಿದೆ. ಸಂಘವು ಪ್ರಾರಂಭದಿಂದಲೂ ಆಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿಯನ್ನು ಗಳಿಸಿದೆ. ಪ್ರತೀ ಶಾಖೆಗಳ ವಾರ್ಷಿಕೋತ್ಸವ ಸಮಾರಂಭದಂದು ಮಂಗಳೂರಿನ ಪ್ರಮುಖ ಆಸ್ಪತ್ರೆಗಳ ಸಹಯೋಗದೊಂದಿಗೆ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಉಚಿತ ಕಣ್ಣಿನ ತಪಾಸಣೆ, ಉಚಿತ ಕನ್ನಡಕ ವಿತರಣೆ ಮತ್ತು ಉಚಿತ ದಂತ ತಪಾಸಣಾ ಶಿಬಿರ, ಉಚಿತ ಆರೋಗ್ಯ ಕಾರ್ಡ್ ವಿತರಣೆ ಮುಂತಾದ ಶಿಬಿರಗಳನ್ನು ಆಯೋಜಿಸಿದೆ. ವಿಶೇಷವಾಗಿ ಉಚಿತ ಕಣ್ಣಿನ ತಪಾಸಣೆಯನ್ನು ನಡೆಸಿ ೧೪,೫೦೦ ಸಾವಿರಕ್ಕೂ ಹೆಚ್ಚು ಕನ್ನಡಕ ವಿತರಣೆ ಮಾಡಿರುವುದಲ್ಲದೆ, ೫೦೦ಕ್ಕೂ ಹೆಚ್ಚು ಜನರಿಗೆ ಕಣ್ಣಿನ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಇದುವರೆಗೆ ಒಟ್ಟು ೬೪ಕ್ಕೂ ಮಿಕ್ಕಿ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಿದೆ ಎಂದರು.

ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸರ್ಕಾರಿ ಆದೇಶದಂತೆ ಬಡ್ತಿ ಹೊಂದಲು ಸಹಕಾರಿ ನಿರ್ವಹಣೆಯಲ್ಲಿ ಉನ್ನತ ಶಿಕ್ಷಣದ ಅಗತ್ಯವಿದೆ. ಇದಕ್ಕಾಗಿ ಈ ಸಂಘ ಬೆಂಗಳೂರಿನ ಪ್ರಾದೇಶಿಕ ಸಹಕಾರ ತರಬೇತಿ ಕೇಂದ್ರದ ಸಹಯೋಗದಲ್ಲಿ ಮಂಗಳೂರು ಕೇಂದ್ರವಾಗಿ ಉನ್ನತ ಡಿಪ್ಲೋಮಾ ತರಬೇತಿ ನೀಡುವ ವ್ಯವಸ್ಥೆಯನ್ನು ಮಾಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.