ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳಲು ಅನುದಾನದ ಕೊರತೆಯಿಲ್ಲ. ಹೊಸ ಕೊಳವೆ ಬಾವಿ ಕೊರೆಯಲು ಸರ್ಕಾರದಿಂದ ಎಲ್ಲ ತಾಲೂಕಿಗೂ ತಲಾ 8.5 ಲಕ್ಷ ರು..ನಂತೆ ಒಟ್ಟು 8.5 ಕೋಟಿ ರು. ಅನುದಾನ ಒದಗಿಸಲಾ ಗಿದೆ ಎಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ, ಮೇವಿನ ಕೊರತೆ, ನರೇಗಾ ಪ್ರಗತಿ, ಚುನಾವಣೆ ಕುರಿತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿ ಮಾತನಾಡಿ ದರು. ಕುಡಿಯುವ ನೀರಿನ ಪೂರೈಕೆ ಮಾಡುವುದು ಅಧಿಕಾರಿಗಳ ಕರ್ತವ್ಯವಾಗಿದೆ. ನೀರಿನ ಸಮಸ್ಯೆ ಬಗೆಹರಿಸದೆ ಅಧಿಕಾರಿ ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.ತಾಲೂಕು ಪಂಚಾಯತಿ, ತಾಲೂಕು ಕಚೇರಿ ಅಧಿಕಾರಿ, ಸಿಬ್ಬಂದಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ನೀರಿನ ಸಮಸ್ಯೆ ಬಗ್ಗೆ ದೂರು ಬಂದ 24 ಗಂಟೆಯೊಳಗೆ ತುರ್ತು ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದ ರೈತರ ದೂರವಾಣಿ ಕರೆಗೆ ಸ್ಪಂದಿಸುವ ಮಾನವೀಯ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಬತ್ತಿ ಹೋದ ಕೊಳವೆ ಬಾವಿಗಳನ್ನು ಇನ್ನಷ್ಟು ಆಳ ಕೊರೆಯಲು ಕ್ರಮಕೈಗೊಳ್ಳಬೇಕು. ಮಳೆ ಬಾರದೆ ನೀರಿನ ಸಮಸ್ಯೆ ಹೀಗೆ ಮುಂದುವರೆದಲ್ಲಿ ಅಂತರ್ಜಲ ಮಟ್ಟ ಕುಸಿತವಾದರೆ ಹೊಸ ಕೊಳವೆ ಬಾವಿ ಕೊರೆಸಲು ಮುಂದಾಗಬೇಕು ಎಂದರು.
ಜಿಲ್ಲಾ ಪಂಚಾಯತಿ ಸಿಇಒ ಜಿ.ಪ್ರಭು ಮಾತನಾಡಿ, ಹಳೆ ಕೊಳವೆಬಾವಿ ಇನ್ನಷ್ಟು ಆಳಕ್ಕೆ ಕೊರೆಯುವ ಮುನ್ನ ನೀರಿನ ಲಭ್ಯತೆ ಬಗ್ಗೆ ಭೂವಿಜ್ಞಾನಿಯಿಂದ ತಾಂತ್ರಿಕ ಸಲಹೆ ಪಡೆದ ನಂತರ ಮುಂದಿನ ಕ್ರಮವಹಿಸಬೇಕು. ಹುಣಸೆಕಟ್ಟೆ, ನೇರಳೆ ಗುಡ್ಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ನೀರಿನ ಕೊರತೆಯಾಗಿದೆ. ಆದ್ದರಿಂದ ಹೊಸ ಕೊಳವೆಬಾವಿ ಕೊರೆಯಲು ಜಲ ಬಿಂದುವನ್ನು ಗುರುತಿಸಬೇಕು ಎಂದು ಅಂತರ್ಜಲ ಇಲಾಖೆ ಅಧಿಕಾರಿ ನಾಗವೇಣಿಗೆ ಸೂಚನೆ ನೀಡಿದರು.ರಿಗ್ ಯಂತ್ರ ಮಾಲೀಕರು ಸರ್ಕಾರದಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೊಳವೆ ಬಾವಿಗಳಿಗೆ ಪ್ರಥಮ ಆದ್ಯತೆ ನೀಡಬೇಕು. ತಪ್ಪಿದಲ್ಲಿ 7ಎ ನೋಂದಣಿಯನ್ನು ರದ್ದುಪಡಿಸಲು ಕರ್ನಾಟಕ ಅಂತರ್ಜಲ ಪ್ರಾಧಿಕಾರಕ್ಕೆಶಿಫಾರಸ್ಸು ಮಾಡಿ. ವಿಪತ್ತು ನಿರ್ವಹಣಾ ಕಾಯ್ದೆ-2005ರಡಿ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ ರಿಗ್ ಯಂತ್ರ ಮಾಲೀಕರ ಗಮನಕ್ಕೆ ತರಬೇಕೆಂದು ನಿರ್ದೇಶನ ನೀಡಿದರು.ಹೊಸದಾಗಿ ಕೊರೆದ ಕೊಳವೆ ಬಾವಿಗಳಿಗೆ ವಿದ್ಯುದ್ದೀಕರಣಗೊಳಿಸಿರುವ ಬಗ್ಗೆ ಮಾಹಿತಿ ಪಡೆದರು. ಅಧಿಕಾರಿಗಳು ಕುಡಿವ ನೀರಿನ ಸಮಸ್ಯಾತ್ಮಕ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಆ ಗ್ರಾಮಗಳಲ್ಲಿ ಹೊಸ ಕೊಳವೆ ಬಾವಿ ಕೊರೆಯುವ ಸಂಬಂಧ ತಾಲೂಕು ಕಾರ್ಯಪಡೆ ಸಭೆಯಲ್ಲಿ ಅನಮೋದನೆ ಪಡೆದು ಕ್ರಮವಹಿಸಬೇಕು. ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ, ಮೇವಿನ ಕೊರತೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಗಮನಕ್ಕೆ ತರಬೇಕು ಎಂದು ಸೂಚಿಸಿದರು. 21ರಂದು ನಮ್ಮ ನಡೆ ಮತಗಟ್ಟೆ ಕಡೆ ಅಭಿಯಾನ ಹಮ್ಮಿಕೊಂಡು ಅಭಿಯಾನದಲ್ಲಿ ಎಲ್ಲ ಮತಗಟ್ಟೆಗಳನ್ನು ಸಮಗ್ರವಾಗಿ ಸ್ವಚ್ಛಗೊಳಿಸಬೇಕು. ಮತಗಟ್ಟೆಗಳಲ್ಲಿ ಅಗತ್ಯ ಪೀಠೋಪಕರಣ, ಕುಡಿಯುವ ನೀರು, ಶೌಚಾಲಯ, ರ‍್ಯಾಂಪ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ವ್ಯವಸ್ಥೆಗಳಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಮತದಾನ ದಿನದಂದು ಒಬ್ಬ ಮತದಾರ ನೂ ಮತದಾನ ಮಾಡಲು ಬಿಸಿಲಿನಲ್ಲಿ ನಿಲ್ಲದಂತೆ ನೆರಳಿನ ವ್ಯವಸ್ಥೆ ಮಾಡಬೇಕು. ಕನಿಷ್ಟ 30 ಮತಗಟ್ಟೆಗಳನ್ನು ಜಿಲ್ಲೆಯ ವನ್ಯಸಂಪತ್ತು, ಕಲೆ, ಸಂಸ್ಕೃತಿಯನ್ನು ಬಿಂಬಿಸುವಂತೆ ವರ್ಣರಂಜಿತವಾಗಿ ಮತಗಟ್ಟೆಗಳನ್ನು ಸಜ್ಜುಗೊಳಿಸಬೇಕು ಎಂದರು.
ಶಿರಾ ತಾಲೂಕಿನಲ್ಲಿ ಜಾನುವಾರುಗಳ ಮೇವಿನ ಕೊರತೆ ನೀಗಿಸಲು 23ರಿಂದ ಕುರುಬರಾಮನಹಳ್ಳಿಯಲ್ಲಿ ಮೇವು ಬ್ಯಾಂಕ್ ತೆರೆಯಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ದನ-ಕರುಗಳ ಕುಡಿಯುವ ನೀರಿಗಾಗಿ ನಿರ್ಮಿಸಿರುವ ನೀರಿನ ತೊಟ್ಟಿಗಳಿಗೆ ನೀರು ತುಂಬಿಸಬೇಕು ಎಂದು ನಿರ್ದೇಶಿಸಿದರು. ತಾಲೂಕು ಪಂಚಾಯತಿ ಇಒ ಹನುಮಂತಪ್ಪ ಮಾತನಾಡಿ, ಶಿರಾ ತಾಲೂಕಿನಲ್ಲಿರುವ 42 ಗ್ರಾಮ ಪಂಚಾಯಿತಿಗಳ ಪೈಕಿ 32 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. 3 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗು ತ್ತಿದೆ. 19 ಖಾಸಗಿ ಕೊಳವೆ ಬಾವಿಗಳಿಂದ ಬಾಡಿಗೆ ಆಧಾರದ ಮೇಲೆ ನೀರು ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ದತ್ತಾತ್ರೇಯ, ತಾಲೂಕು ಮಟ್ಟದ ಅಧಿಕಾರಿ, ಪಿಡಿಓಗಳು ಹಾಜರಿದ್ದರು.