ಸಾರಾಂಶ
ಸಮಯ ಪಾಲನೆ ಮಾಡುವ ಮೂಲಕ ವ್ಯಾಸಂಗದಲ್ಲಿ ತೊಡಗಿಕೊಳ್ಳಬೇಕು
ಕನ್ನಡಪ್ರಭ ವಾರ್ತೆ ನಂಜನಗೂಡು
1.50 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕಾಲೇಜು ಕಟ್ಟಡ ಗ್ರಾಮೀಣ ಭಾಗದ ಶಿಕ್ಷಣದ ವಿಕಾಸದ ಹೆಜ್ಜೆಯಾಗಿದ್ದು ಗ್ರಾಮೀಣ ಭಾಗದ ಯುವಕ ಮತ್ತು ಯುವತಿಯರ ಭವಿಷ್ಯದ ದಾರಿಯಾಗಲಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.ತಾಲೂಕಿನ ದೊಡ್ಡ ಕವಲಂದೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಕಾಲೇಜು ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಬೇಕು ಎಂಬ ಹಿತದೃಷ್ಟಿಯಿಂದ ನೂತನವಾಗಿ ಕಾಲೇಜು ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ, ಈ ಕಾಲೇಜು ಕಟ್ಟಡ ಗ್ರಾಮೀಣ ಭಾಗದ ಶಿಕ್ಷಣದ ವಿಕಾಸದ ಹೆಜ್ಜೆಯಾಗಿದ್ದು, ಶಿಕ್ಷಣದ ಬೆಳಕು ಎಲ್ಲ ವಿದ್ಯಾರ್ಥಿಗಳನ್ನು ತಲುಪಲಿ ಎಂದು ಆಶಯ ವ್ಯಕ್ತಪಡಿಸಿದ ಅವರು, ಗುದ್ದಲಿ ಪೂಜೆಯಾಗಿ ಬರೀ ನಾಲ್ಕು ತಿಂಗಳ ಅವಧಿಯಲ್ಲಿ ಕಾಲೇಜು ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿರುವುದು ಲೋಕೋಪಯೋಗಿ ಇಲಾಖೆಯ ಕೆಲಸ ಶ್ಲಾಘನೀಯ ಕಾರ್ಯ ಎಂದರು.ವಿದ್ಯಾರ್ಥಿಗಳು ನಿಮ್ಮ ತಂದೆ ತಾಯಿಯ ಪರಿಶ್ರಮವನ್ನು ಅರಿತು, ಸಮಯ ಪಾಲನೆ ಮಾಡುವ ಮೂಲಕ ವ್ಯಾಸಂಗದಲ್ಲಿ ತೊಡಗಿಕೊಳ್ಳಬೇಕು ಮುಖ್ಯವಾಗಿ ದುಶ್ಚಟಗಳಿಂದ ದೂರವಿದ್ದು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆತಾಲೂಕಿನ ಕೆ.ಆರ್. ಪುರ ಗ್ರಾಮದಲ್ಲಿ ಸಾಮಾನ್ಯ ವರ್ಗದ ಬೀದಿ ಸೇರಿದಂತೆ 2.5 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಮಹೇಶ್, ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಣ್ಣ, ತಾಪಂ ಮಾಜಿ ಸದಸ್ಯ ಮಹೇಂದ್ರ, ಕವಲಂದೆ ಗ್ರಾಪಂ ಅಧ್ಯಕ್ಷೆ ಪರ್ವೀನ್ ಬೇಗಂ, ಉಪಾಧ್ಯಕ್ಷ ಮಂಜುನಾಥ್, ಮುಖಂಡರಾದ ದೊರೆಸ್ವಾಮಿ ನಾಯಕ, ಕುಳ್ಳಯ್ಯ, ನಾಜಿಮ್, ರಾಹುಲ್, ನವೀನ್, ಮಾದಪ್ಪ, ಪ್ರಶಾಂತ್ ಇದ್ದರು.