ಆರ್‌ ಎಸ್ಎಸ್ ಬ್ಯಾನ್ ವಿಚಾರ ಸರಿಯಲ್ಲ: ರಂಭಾಪುರಿ ಶ್ರೀ

| Published : Oct 16 2025, 02:01 AM IST

ಸಾರಾಂಶ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಘದ ಸ್ವಯಂ ಸೇವಕರು ಸಲ್ಲಿಸಿರುವ ಸೇವೆ ಅನನ್ಯ

ಕನಕಗಿರಿ: ರಾಷ್ಟ್ರೀಯತೆ ವಿಚಾರದಲ್ಲಿ ಗಟ್ಟಿ ನಿಲುವು ಹೊಂದಿರುವ ಹಾಗೂ ದೇಶ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಆರ್ ಎಸ್ಎಸ್ ಸಂಘಟನೆ ನಿಷೇಧಿಸುವ ವಿಚಾರ ಸರಿಯಲ್ಲ ಎಂದು ಬಾಳೆ ಹೊನ್ನೂರಿನ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು ಹೇಳಿದ್ದಾರೆ.

ಅವರು ಪಟ್ಟಣದ ರಂಭಾಪುರಿ ಕಲ್ಯಾಣ ಭವನದ ವೀಕ್ಷಿಸಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದರು.

ಸಚಿವ ಪ್ರಿಯಾಂಕ ಖರ್ಗೆ ಅವರು ಆರ್ ಎಸ್ಎಸ್ ಸಂಘಟನೆಯ ಚಟುವಟಿಕೆಗಳು ಸರ್ಕಾರಿ ಜಾಗದಲ್ಲಿ ನಡೆಯದಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಸಮಂಜಸವಲ್ಲ, ದೇಶದ ಐಕ್ಯತೆಗೆ ಆರ್ ಎಸ್ಎಸ್ ಕೊಡುಗೆ ಅಪಾರ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಘದ ಸ್ವಯಂ ಸೇವಕರು ಸಲ್ಲಿಸಿರುವ ಸೇವೆ ಅನನ್ಯ. ಆರ್ ಎಸ್ಎಸ್ ಗೆ ದೇಶದ ಬಗ್ಗೆ ಕಾಳಜಿ ಹೊಂದಿರುವುದರಿಂದಲೇ ನೂರು ವರ್ಷದವರೆಗೆ ಸಾಗಿದೆ. ಸಂಘದ ಸ್ವಯಂ ಸೇವಕರು ಎಲ್ಲ ಕ್ಷೇತ್ರಗಳಿಲ್ಲಿದ್ದು, ಪ್ರತಿ ಹಳ್ಳಿಯಲ್ಲೂ ಸಮಾಜದ ಕಾರ್ಯ ವಿಸ್ತಾರಗೊಂಡಿದೆ. ಇಂತಹ ದೇಶಭಕ್ತ ಸಂಘಟನೆ ಬ್ಯಾನ್ ಮಾಡುತ್ತೇವೆ ಎನ್ನುವ ವಿಚಾರ ಸರ್ಕಾರ ವಾಪಸ್ ಪಡೆಯಬೇಕು ಎಂದರು.

ಇನ್ನೂ ಕೇಂದ್ರದಲ್ಲಿ ಲಿಂಗಾಯತ ಧರ್ಮ ಅನುಮೋದನೆ ನೀಡದೆ ಇರುವುದರಿಂದ ಪ್ರಸ್ತುತ ರಾಜ್ಯ ಸರ್ಕಾರ ನಡೆಸಿದ ಜಾತಿ ಗಣತಿಯಲ್ಲಿ ಲಿಂಗಾಯತರೆಲ್ಲರೂ ಧರ್ಮ ಕಾಲಂ ನಲ್ಲಿ ಹಿಂದೂ ಹಾಗೂ ಜಾತಿ ಕಾಲಂ ನಲ್ಲಿ ವೀರಶೈವ ಲಿಂಗಾಯತ ಎಂದು ನಮೂದಿಸಿದ್ದಾರೆ. ಲಿಂಗಾಯತರನ್ನು ತುಂಡು ಮಾಡುವ ಹುನ್ನಾರ ನಡೆಯುತ್ತಿದೆ. ಸಮುದಾಯದಲ್ಲಿ ಉತ್ತಮ ನಾಯಕತ್ವ ಇದ್ದು, ಸಮಾಜವೂ ಒಗ್ಗಟ್ಟಾಗಿದೆ. ಮಠ, ಮಾನ್ಯಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಪಂ ಸದಸ್ಯ ಸಂಗಪ್ಪ ಸಜ್ಜನ್, ನಿವೃತ್ತ ಶಿಕ್ಷಕ ಬಸವರಾಜ ಸಜ್ಜನ್, ಅಮರೇಶಪ್ಪ ಸಜ್ಜನ್, ವಿಶ್ವನಾಥ, ನವೀನ್ ಸೇರಿದಂತೆ ಇತರರಿದ್ದರು.