ಸಾರಾಂಶ
ಉಡುಪಿ: ಆರ್‌ಎಸ್‌ಎಸ್ ಶಾಲಾ ಮಕ್ಕಳ ಮನಸ್ಸಿನಲ್ಲಿ ವರ್ಣ ವ್ಯವಸ್ಥೆ, ಜಾತೀಯತೆ, ಅಸಮಾನತೆ, ಸನಾನತನ ಧರ್ಮದ ವಿ ಬೀಜವನ್ನು ಬಿತ್ತುತ್ತಿದೆ. ಆದ್ದರಿಂದ ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ನ್ನು ನಿಷೇಧಿಸಿರುವ ಕರ್ನಾಟಕ ಸರ್ಕಾರದ ದಿಟ್ಟ ಕ್ರಮ ಸ್ವಾಗತಾರ್ಹ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಹೇಳಿದ್ದಾರೆ. ನೊಂದಣಿಯೇ ಆಗದಂತಹ ಆರ್‌ಎಸ್‌ಎಸ್ ಇಡೀ ದೇಶದಲ್ಲಿ ಗುಂಪುಕಟ್ಟಿಕೊಂಡು ರಾಜಾರೋಷವಾಗಿ ಲಾಠಿ ಹಿಡಿದು ರಸ್ತೆರಸ್ತೆಗಳಲ್ಲಿ ಪಥಸಂಚಲನ ನಡೆಸಿ ಸಾರ್ವಜನಿಕರಲ್ಲಿ ಭಯೋತ್ಪಾದನೆ ಮಾಡುತ್ತಿದೆ. ಸನಾತನ ಧರ್ಮವನ್ನು ಒಪ್ಪಿಕೊಳ್ಳದ, ಟೀಕಿಸುವವರನ್ನು ಕೊಲ್ಲುವ ಮಟ್ಟದ ಮನಃಸ್ಥಿತಿಯನ್ನು ಈ ಆರ್‌ಎಸ್‌ಎಸ್ ಬೆಳೆಸುತ್ತಿದೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಧಾಭೋಲ್ಕರ್, ಎಂ,ಎಂ. ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಗೆ ಈ ಮನಸ್ಥಿತಿಯೇ ಕಾರಣ ಎಂದವರು ಆರೋಪಿಸಿದ್ದಾರೆ.
ಆರ್‌ಎಸ್‌ಎಸ್‌ನ್ನು ನಿಷೇಧಿಸಬೇಕು ಎಂದಿರುವ ಸಚಿವ ಪ್ರಿಯಾಂಕ ಖರ್ಗೆಯವರಿಗೂ ಈಗ ಬೆದರಿಕೆ ಕರೆಗಳು ಬರುತ್ತಿದೆ. ಇದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಉಗ್ರವಾಗಿ ಖಂಡಿಸುತ್ತದೆ. ದಲಿತರ ತಾಳ್ಮೆ ಮತ್ತು ಸಹನೆಯನ್ನು ಕೆಣಕಬೇಡಿ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ. ಈ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗೆ ನಾವು ಬಧ್ದರಾಗಿದ್ದೇವೆ ಎಂದವರು ಹೇಳಿದ್ದಾರೆ.ಈ ಧರ್ಮಾಧಾರಿತ ಸಂಘಟನೆಗಳಿಂದ ಬುದ್ಧ, ಗಾಂಧೀಜಿ ಹುಟ್ಟಿದ ನಾಡಿನಲ್ಲಿ ಸಹನೆ, ಶಾಂತಿ, ಸಹಬಾಳ್ವೆ ಮಾಯವಾಗಿ ದೇಶಾದ್ಯಂತ ಆತಂಕ, ಅಸಹಿಷ್ಣುತೆ, ದ್ವೇಷ ಭಾವನೆ ಹೆಚ್ಚುತ್ತಿದೆ. ಈ ಎಲ್ಲಾ ಕೆಡುಕುಗಳಿಂದ ನಾಡು ಮುಕ್ತವಾಗಲು ಆರ್‌ಎಸ್‌ಎಸ್‌ನ ಚಟುವಟಿಕೆಗಳನ್ನು ಸರಕಾರಿ, ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸುವುದು ಸ್ವಾಗತಾರ್ಹ ಎಂದು ಸುಂದರ ಮಾಸ್ತರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.