ಸಾರಾಂಶ
ಲಕ್ಷ್ಮೇಶ್ವರ: ಆರ್‌ಎಸ್‌ಎಸ್ ನಿಷೇಧ ಮಾಡುವುದು ಪ್ರಿಯಾಂಕ್ ಖರ್ಗೆ ಮತ್ತು ಅವರ ತಂದೆಯವರಿಂದ ಸಾಧ್ಯವಿಲ್ಲ. ಜನರ ಮನಸ್ಸಿನಲ್ಲಿ ಬೇರೂರಿರುವ ಆರ್‌ಎಸ್‌ಎಸ್ ಈಗಾಗಲೆ ೨-೩ ಬಾರಿ ನಿಷೇಧ ವಿಧಿಸಿದ್ದರೂ ಎಲ್ಲ ಕಂಟಕಗಳನ್ನು ದೂರ ಮಾಡಿಕೊಂಡು ಮತ್ತೆ ಎದ್ದು ನಿಂತಿದೆ. ಇದನ್ನು ನಿಷೇಧ ಮಾಡುವ ಹೇಳಿಕೆ ನೀಡುವುದು ಮೂರ್ಖತನ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಹೋಳು ಮತ್ತು ಹಾಳು ಮಾಡಿದ ಕಾಂಗ್ರೆಸ್‌ನಂತೆ ಆರ್‌ಎಸ್‌ಎಸ್ ಸಂಘಟನೆ ಅಲ್ಲ, ೧೩೦ ವರ್ಷದ ಇತಿಹಾಸ ಇರುವ ಕಾಂಗ್ರೆಸ್ ಹೋಳಾಗಿ, ಹಾಳಾಗಿದೆ. ಆದರೆ ಆರ್‌ಎಸ್‌ಎಸ್ ಒಂದು ದೇಶಭಕ್ತ ಸಂಘಟನೆಯಾಗಿದೆ. ಅದರಿಂದಲೆ ಅದು ೧೦೦ ವರ್ಷಗಳಾದರೂ ಇನ್ನೂ ಒಡಕು ಬಂದಿಲ್ಲ. ಲಕ್ಷಾಂತರ ಸ್ವಯಂ ಸೇವಕರ ಶ್ರಮದಿಂದ ಆರ್‌ಎಸ್‌ಎಸ್ ಬಲಿಷ್ಠವಾಗಿದೆ. ನೂರು ವರ್ಷಗಳು ಒಡೆಯದೆ ಒಗ್ಗೂಡಿ ನಿಂತಿದ್ದು, ಇದನ್ನು ಸಚಿವ ಪ್ರಿಯಾಂಕ್ ಖರ್ಗೆ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.ಆರ್‌ಎಸ್‌ಎಸ್ ಚಟುವಟಿಕೆಗೆ ಸರ್ಕಾರಿ ಜಾಗ ಬೇಕೆಂದು ಇಲ್ಲವಲ್ಲ, ದೇಶದಲ್ಲಿ ಸಾಕಷ್ಟು ಜಾಗಗಳಿವೆ. ಅಲ್ಲಿ ಕಾರ್ಯಕ್ರಮ ನಡೆಸುತ್ತೇವೆ. ಯಾರು ತಡೆಯುತ್ತಾರೋ ನೋಡಿಕೊಳ್ಳುತ್ತೇವೆ ಎಂದು ಸವಾಲು ಹಾಕಿದರು. ಆರ್‌ಎಸ್‌ಎಸ್ ಅನ್ನು ಎಷ್ಟು ಕೆಣಕುತ್ತಿರೋ ಅಷ್ಟು ಅದು ಪ್ರಬಲವಾಗಿ ಬೆಳೆಯುತ್ತದೆ. ಇದು ಸೂರ್ಯನ ಕಡೆ ಉಗುಳಿದಂತೆ, ಅದು ನಿಮ್ಮ ಮುಖಕ್ಕೆ ಸಿಡಿಯುತ್ತದೆ. ಆರ್‌ಎಸ್‌ಎಸ್ ಜತೆ ಸಂಘರ್ಷಕ್ಕೆ ಇಳಿದರೆ ನೀವೇ ಹಿಂದೂ ದ್ರೋಹಿಗಳಾಗುತ್ತೀರಿ. ದಲಿತ ಸಂಘಟನೆಗಳು, ಭೀಮ ಆರ್ಮಿ ಎನ್ನುವ ಸಂಘಟನೆಗಳನ್ನು ಸಂಘರ್ಷಕ್ಕೆ ಇಳಿಯುವಂತೆ ಮಾಡುತ್ತಿದ್ದೀರಿ. ಇದನ್ನು ಜನರು ಕ್ಷಮಿಸುವುದಿಲ್ಲ. ಯಾವುದೇ ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮ ಮಾಡಬಾರದು ಎನ್ನುತ್ತೀರಿ, ಇದು ದೇಶದ ಹಿಂದೂಗಳ ಜಾಗ, ಇಲ್ಲಿ ಕಾರ್ಯಕ್ರಮ ಮಾಡಬಾರದು ಎನ್ನಲು ನೀವ್ಯಾರು ಎಂದು ಪ್ರಶ್ನಿಸಿದರು.
ಆರ್‌ಎಸ್‌ಎಸ್ ಬಗ್ಗೆ ಖರ್ಗೆ ಅವರು ನೀಡಿದ ಹೇಳಿಕೆಯನ್ನು ವಾಪಸ್ ಪಡೆದು ಬಹಿರಂಗ ಕ್ಷಮೆಯಾಚಿಸಬೇಕು. ಆರ್‌ಎಸ್‌ಎಸ್ ರಾಜಕೀಯ ಸಂಘಟನೆಯಲ್ಲ, ಇದರಲ್ಲಿ ಎಲ್ಲ ಪಕ್ಷದವರು ಇದ್ದಾರೆ. ಮುಸ್ಲಿಮರು ಈ ಕಾಂಗ್ರೆಸ್‌ನಲ್ಲಿ ಹೊಕ್ಕು ಹಿಂದೂ ಸಂಘಟನೆ, ಒಗ್ಗಟ್ಟು ಒಡೆಯುವ ಕಾರ್ಯ ಮಾಡುತ್ತಿವೆ ಎಂದು ಆರೋಪಿಸಿದರು.ಹಿಂದೂ ಹಬ್ಬಗಳ ಆಚರಣೆಗೆ ಸರ್ಕಾರ ನೂರಾರು ಕರಾರುಗಳನ್ನು ಹಾಕುತ್ತಿದೆ. ಮುಸ್ಲಿಮರ ಪ್ರಾರ್ಥನೆ ವೇಳೆ ಧ್ವನಿವರ್ಧಕ ಬಳಸುವುದುನ್ನು ಮೊದಲು ತಡೆಯಿರಿ, ಇಲ್ಲದಿದ್ದಲ್ಲಿ ನಾವು ಡಿಜೆ ಹಚ್ಚುವುದು ನಿಲ್ಲಿಸುವುದಿಲ್ಲ, ಗಣೇಶನ ಹಬ್ಬಕ್ಕೆ ಅನುಮತಿ ಸಹ ಮುಂದಿನ ವರ್ಷದಿಂದ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.
ಗದಗ ಜಿಲ್ಲಾ ಶ್ರೀರಾಮ ಸೇನೆ ಅಧ್ಯಕ್ಷ ಸೋಮು ಗುಡಿ, ರಾಜ್ಯ ಶಾರೀರಿಕ ಪ್ರಮುಖ ಹುಲಿಗೆಪ್ಪ ವಾಲ್ಮೀಕಿ, ಶಿವರಾಜ ಅಂಬಾರಿ, ಈರಣ್ಣ ಪೂಜಾರ, ಭರತ ಲದ್ದಿ, ಮಂಜು ಕಾಟ್ಕರ್, ಮುತ್ತು ಕರ್ಜೆಕಣ್ಣವರ, ಪ್ರಾಣೇಶ ವ್ಯಾಪಾರಿ, ಬಸವರಾಜ ಚಕ್ರಸಾಲಿ, ಬಸವರಾಜ ಗೌಡರ, ಅಮಿತ ಗುಡಗೇರಿ, ಹನುಮಂತ ರಾಮಗೇರಿ, ಚನ್ನಪ್ಪ ಹಾಳದೋಟದ, ಪವನ ಹಗರದ, ಪ್ರವೀಣ ಬನ್ನಿಕೊಪ್ಪ, ಮನೋಜ ತಂಡಿಗೇರ, ಅಕ್ಷಯ ಕುಮಸಿ ಮುಂತಾದವರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))