ಸಾರಾಂಶ
ಹುಬ್ಬಳ್ಳಿ: ಆರ್‌ಎಸ್‌ಎಸ್ ಹಾಗೂ ಬಿಜೆಪಿ ಯಾವಾಗಲೂ ಸಾಮಾಜಿಕ ನ್ಯಾಯ, ಸಂವಿಧಾನದ ಪರವಾಗಿ ಇಲ್ಲವೇ ಇಲ್ಲ ಎಂದು ಗುಡುಗಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲು ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಕಾರಣವೇ ಹೊರತು ರಾಜ್ಯ ಸರ್ಕಾರವಲ್ಲ ಎಂದು ಪ್ರತಿಪಾದಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ಬೆಲೆ ಏರಿಕೆ ಖಂಡಿಸಿ ಹಾಗೂ ಸಂವಿಧಾನ ರಕ್ಷಣೆಗೆ ಒತ್ತಾಯಿಸಿ ನಗರದಲ್ಲಿ ಏರ್ಪಡಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಆರ್‌ಎಸ್‌ಎಸ್ ಹುಟ್ಟಿ 100 ವರ್ಷವಾಗಿದೆ. ಯಾವತ್ತಾದರೂ ಸಂವಿಧಾನದ ಪರವಾಗಿ ಆಗಲಿ, ಸಾಮಾಜಿಕ ನ್ಯಾಯದ ಪರವಾಗಿ ಆಗಲಿ ಮಾತನಾಡಿದೆಯೇ? ಅದು ಎಂದೂ ಮಾತನಾಡುವುದಿಲ್ಲ. ಬಿಜೆಪಿಯಿಂದ ಸಂವಿಧಾನಕ್ಕೆ ಧಕ್ಕೆ ಎಂದು ಆರೋಪಿಸಿದರು.
ಬಿಜೆಪಿ ಜನಾಕ್ರೋಶಕ್ಕೆ ಆಕ್ರೋಶ: ಬೆಲೆ ಏರಿಕೆ ಕುರಿತಾಗಿ ಕೇಂದ್ರದ ಮೇಲೆ ಕಟುಪ್ರಹಾರ ನಡೆಸಿದ ಸಿದ್ದರಾಮಯ್ಯ, ಬಿಜೆಪಿ ಅಧಿಕಾರಕ್ಕೆ ಬಂದರೆ, ಅಚ್ಛೆ ದಿನ್ ಆಯೇಗಾ, ಎಲ್ಲ ಸೌಲಭ್ಯ ಸಿಗಲಿವೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಅಚ್ಛೆ ದಿನ್ ಬಂದಿದೆಯಾ? ಈ ಕುರಿತು ಮೋದಿ ಜನತೆಗೆ ಉತ್ತರಿಸಬೇಕು ಎಂದು ಸವಾಲೆಸೆದರು.ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಎಲ್ಲ ರಾಜ್ಯಗಳಲ್ಲೂ ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ಎಲ್ಲ ಸಬ್ಸಿಡಿಗಳು ನಿಂತಿವೆ. ಪೆಟ್ರೊಲ್, ಡೀಸೆಲ್, ಅಕ್ಕಿ, ಬೇಳೆ, ಸಿಮೆಂಟ್, ಚಿನ್ನ, ಬೆಳ್ಳಿ, ಗೊಬ್ಬರ, ಸಕ್ಕರೆ ಹೀಗೆ ಪ್ರತಿ ವಸ್ತುಗಳ ಪಟ್ಟಿಯೊಂದಿಗೆ 2014ರ ಮುನ್ನ ಹಾಗೂ ಸದ್ಯ ಇರುವ ದರಗಳ ವ್ಯತ್ಯಾಸಗಳ ಪಟ್ಟಿಯನ್ನು ಮುಂದಿಟ್ಟರು.
ಈ ಬೆಲೆಗಳ ನಿಯಂತ್ರಿಸದ ಕೇಂದ್ರದ ಆಡಳಿತ ವೈಫಲ್ಯ ಮತ್ತು ಬೆಲೆ ಏರಿಕೆಯ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಬಿಜೆಪಿಯು ಜನಾಕ್ರೋಶ ಯಾತ್ರೆ ಮಾಡುತ್ತಿದೆ. ನಿಮ್ಮ ವಿರುದ್ಧವೇ ಜನರ ಆಕ್ರೋಶವಿದೆ. ನೀವು ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಬೇಕೆಂದು ಕರೆನೀಡಿದರು.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ದರ ಕಡಿಮೆಯಾಗಿದೆ. ಆದರೂ ದೇಶದಲ್ಲಿ ಮಾತ್ರ ಮೋದಿ ಸರ್ಕಾರ ಕಡಿಮೆ ಮಾಡುವ ಬದಲು ಹೆಚ್ಚಿಸುತ್ತಿದೆ. ಡೀಸೆಲ್ ದರ ಹೆಚ್ಚಳವಾದರೆ ಸಹಜವಾಗಿಯೇ ಎಲ್ಲದರ ಬೆಲೆ ಹೆಚ್ಚಾಗುತ್ತದೆ. ಟ್ರಾನ್ಸ್‌ಪೋರ್ಟ್ ವೆಚ್ಚ ಹೆಚ್ಚಾಗುತ್ತದೆ. ಇದು ಮಾಮೂಲಿ. ಇದು ಬಿಜೆಪಿಗರಿಗೆ ಅರ್ಥವಾಗುತ್ತಿಲ್ಲ. ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುವ ಬದಲು ಕೇಂದ್ರದ ವಿರುದ್ಧ ಯಾತ್ರೆ ಮಾಡಬೇಕು ಎಂದರು.
ಜನತೆ ಕೂಡ ಬೆಲೆ ಏರಿಕೆ ಮೂಲ ಕಾರಣ ನೀವೇ ಎಂಬುದನ್ನು ಬಿಜೆಪಿಗರನ್ನು ಪ್ರಶ್ನಿಸಬೇಕು ಎಂದು ಕರೆ ನೀಡಿದ ಅವರು, ಮೋದಿ ಸರ್ಕಾರದಿಂದ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ ಎಂದರು.ರಾಜ್ಯ ಸರ್ಕಾರ ಪ್ರತಿ ವರ್ಷ ಕೇಂದ್ರಕ್ಕೆ ₹4.68 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹಿಸಿ ಕೊಡುತ್ತಿದ್ದರೆ, ಪ್ರತಿಯಾಗಿ ಕೇವಲ ₹60 ಸಾವಿರ ಕೋಟಿ ಅಂದರೆ, ₹1ಗೆ 3 ಪೈಸೆ ಮಾತ್ರ ಕೊಡುತ್ತಿದೆ. ಇದು ಅನ್ಯಾಯವಲ್ಲವೇ? ಎಂದು ಪ್ರಶ್ನಿಸಿದ ಸಿಎಂ, ಗ್ಯಾರಂಟಿ ಯೋಜನೆಯಿಂದ ಜನರಿಗೆ ಅನುಕೂಲವಾಗಿದೆ. ನೀರಾವರಿಗೆ ₹22 ಸಾವಿರ ಕೋಟಿ ಕೊಟ್ಟಿದ್ದೇವೆ. ಹೊಸ ರಸ್ತೆ ನಿರ್ಮಾಣಕ್ಕೆ ಸಾವಿರಾರು ಕೋಟಿ ರುಪಾಯಿ ಮೀಸಲಿಟ್ಟಿದ್ದೇವೆ ಎಂದರು.
ರೈತರ ವಿರುದ್ಧ ಬಿಜೆಪಿ ಪ್ರತಿಭಟನೆ: ರಾಜ್ಯದಲ್ಲಿ ಹಾಲಿನ ದರ ಏರಿಸಿದ್ದು ನಿಜ. ಇದರಲ್ಲಿ ಸರ್ಕಾರಕ್ಕೆ ನಯಾಪೈಸೆ ಬರುತ್ತಿಲ್ಲ. ಎಲ್ಲವನ್ನೂ ರೈತರಿಗೆ ನೀಡುತ್ತಿದ್ದೇವೆ. ಬಸ್ ಪ್ರಯಾಣ ದರ, ಹಾಲಿನ ದರವು ಇತರ ರಾಜ್ಯಗಳಿಗಿಂತ ಕಡಿಮೆ ಇದೆ. ಆದರೂ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ರೈತರಿಗೆ ಪ್ರೋತ್ಸಾಹ ಧನ ಕೊಡುವುದು ತಪ್ಪಾ? ಹಾಗಾದರೆ ಇವರ ಪ್ರತಿಭಟನೆ ರೈತರ ವಿರುದ್ಧವೇ ಎಂದು ಪ್ರಶ್ನಿಸಿದರು.ಮರುದಿನವೇ ಮಹದಾಯಿಗೆ ಚಾಲನೆ: ಮಹದಾಯಿ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ಕ್ಲಿಯರೆನ್ಸ್ ಮಾಡಿದ ಮರುದಿನವೇ ರಾಜ್ಯ ಸರ್ಕಾರ ಕೆಲಸ ಆರಂಭಿಸುತ್ತದೆ. ಪರಿಸರ ಇಲಾಖೆಯಿಂದ ಕ್ಲಿಯರೆನ್ಸ್ ಕೊಡಲಿಸಲಿದೆಯೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು.
2017ರಲ್ಲಿ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ತಕ್ಷಣವೇ ಮಹದಾಯಿ ಜಾರಿಗೊಳಿಸುವುದಾಗಿ ಹೇಳಿದ್ದರು. ನೋಟಿಫಿಕೇಶನ್ ಆದಾಗ ಸಂಭ್ರಮಿಸಿದ್ದ ಬಿಜೆಪಿಯವರು ಗೋವಾ ಮುಖ್ಯಮಂತ್ರಿ ಒಪ್ಪಿಸಿದ್ದಾಗಿ ಹೇಳಿದ್ದರು. ಈ ವರೆಗೂ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.ಮಹದಾಯಿಗೆ ಸಂಬಂಧಪಟ್ಟಂತೆ ಕೇಂದ್ರದಿಂದ ಅನುಮತಿ ದೊರೆತ ಮರುದಿನವೇ ಕಾಮಗಾರಿಗೆ ಚಾಲನೆ ನೀಡುವುದಾಗಿ ಭರವಸೆ ನೀಡಿದರು.
ಮೇಕೆದಾಟು ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುಮತಿ ನೀಡುತ್ತಿಲ್ಲ. ತುಂಗಭದ್ರಾ ಮೇಲ್ದಂಡೆ ಯೋಜನೆ ₹5 ಸಾವಿರ ಕೋಟಿ ಕೊಡುವುದಾಗಿ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಿಸಿದ್ದರು. ಬೆಂಗಳೂರು ಪೆರಿಪೆರಿಯಲ್ ರಿಂಗ್ ರೋಡ್‌ಗೆ ₹3 ಸಾವಿರ ಕೋಟಿ ಬರಲಿಲ್ಲ. ಹೀಗೆ ಪ್ರತಿಯೊಂದರಲ್ಲೂ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯದ ಮೇಲೆ ಅವ್ಯಾಹತ ಅನ್ಯಾಯ ಮುಂದುವರಿಸಿದೆ ಎಂದು ದೂರಿದರು.