ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಹಾಗೂ ವಿಜಯ ದಶಮಿ ಹಬ್ಬದ ನಿಮಿತ್ತ ಭಾನುವಾರ ಆರ್‌ಎಸ್‌ಎಸ್ ಸ್ವಯಂಸೇವಕರ ಆಕರ್ಷಕ ಪಥ ಸಂಚಲನ ಕುಂದಾನಗರಿಯಲ್ಲಿ ಭಾನುವಾರ ಜರುಗಿತು.ನಗರದ ಸರ್ದಾರ ಮೈದಾನದಲ್ಲಿ ಸೇರಿದ್ದ ದಂಡಸಹಿತ ಗಣವೇಷದಲ್ಲಿರುವ ಸ್ವಯಂಸೇವಕರು ಪ್ರಾರ್ಥನಾ ಗೀತೆಯ ನಂತರ ಪಥಸಂಚಲನ ಆರಂಭಿಸಿದರು. ಎರಡು ಮಾರ್ಗದಲ್ಲಿ ಪಥಸಂಚಲನ ನಡೆದಿದ್ದು, ಮೊದಲ ಸಂಚಲನದ ಮಾರ್ಗವು ಕಾಲೇಜು ರಸ್ತೆ ಮಾರ್ಗವಾಗಿ ಗಣಪತಿ ಮಂದಿರ, ರಾಣಿಚನ್ನಮ್ಮ ವೃತ್ತ, ಜಿಲ್ಲಾಧಿಕಾರಿ ಕಚೇರಿ ಆವರಣ, ಚವಾಟ್ ಗಲ್ಲಿ, ನಾನಾ ಪಾಟೀಲ ಚೌಕ್, ಬಡಕಲ್ ಗಲ್ಲಿ, ಖಡಕ ಗಲ್ಲಿ ಕಾರ್ನರ್, ಕಚೇರಿ ರಸ್ತೆ, ಶನಿವಾರ ಕೂಟ(ಮದನಮೋಹನ ಮಾಳವೀಯಾ ವೃತ್ತ), ಗಣಪತಿ ಗಲ್ಲಿ, ನರಗುಂದಕರ ಭಾವೆ ಚೌಕ್, ಶನಿಮಂದಿರ ಮಾರ್ಗ ಹಾಗೂ ಕುಲಕರ್ಣಿ ಗಲ್ಲಿಗೆ ಬಂದು ತಿಲಕ ಚೌಕ್ ಸಂಗಮವಾಯಿತು.
ಹಾಗೆಯೇ ಎರಡನೇ ಮಾರ್ಗದ ಸಂಚಲನವು ಲಿಂಗರಾಜ ದೇಸಾಯಿ ವೃತ್ತ (ಅತುಲ್ ಪುರೋಹಿತ ಸ್ವೀಟ್ಸ್ ಅಂಗಡಿ) ಕಂಗ್ರಾಳಗಲ್ಲಿ, ಕಾಕತಿ ವೇಸ್, ರಿಸಲ್ದಾರಗಲ್ಲಿ( ಸ್ವಾಮಿ ವಿವೇಕಾನಂದ ಮಾರ್ಗ), ಗವಳಿಗಲ್ಲಿ, ಸ್ವಾಮಿ ವಿವೇಕಾನಂದ ಚೌಕ್, ಸಮಾದೇವಿ ಗಲ್ಲಿ, ಖಡೇಬಜಾರ, ಹಂಸ ಟಾಕೀಸ್ ರಸ್ತೆ, ಕಡೋಲಕರಗಲ್ಲಿ ಹುತಾತ್ಮ ಚೌಕ್, ಮಾರುತಿಗಲ್ಲಿ-ಮಾರುತಿಮಂದಿರ, ಬಸವನಗಲ್ಲಿಗೆ ಬಂದು ಮೊದಲನೇ ತಂಡದೊಂದಿಗೆ ತಿಲಕ ಚೌಕ್‌ನಲ್ಲಿ ಸಂಗಮವಾಗಿ ಮುಂದೆ ಎರಡು ಸಂಚಲನಗಳು ರಾಮಲಿಂಗ ಖಂಡಗಲ್ಲಿ, ಧರ್ಮವೀರ ಸಂಭಾಜಿ ವೃತ್ತ ಮೂಲಕ ಕೆಎಲ್‌ಇ ಲಿಂಗರಾಜ ಮೈದಾನದಲ್ಲಿ ಸಮಾರೋಪಗೊಂಡಿತು.ಆಕರ್ಷಕ ಪಥಸಂಚಲನ
ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಪಥಸಂಚಲನದಲ್ಲಿ ರಸ್ತೆಯುದ್ದಕ್ಕೂ ನಿಂತಿದ್ದ ಮಹಿಳೆಯರು, ಸಾರ್ವಜನಿಕರು, ಯುವಕರು, ಮಕ್ಕಳು ಗಣವೇಷಧಾರಿ ಸ್ವಯಂಸೇವಕರ ಮೇಲೆ ಹೂಗಳ ಮಳೆಗೆರೆದರು. ಭಾರತ ಮಾತಾ ಕೀ ಜೈ, ವಂದೇ ಮಾತರಂ, ಜೈ ಶ್ರೀರಾಮ, ಜೈ ಶಿವಾಜಿ, ಜೈ ಭವಾನಿ ಎಂದು ಘೋಷಣೆಗಳು ನೆರೆದ ಜನರ ಉತ್ಸಾಹ ಹಾಗೂ ದೇಶಪ್ರೇಮ ಇಮ್ಮಡಿಗೊಳಿಸಿತು.ನಗರದುದ್ದಕ್ಕೂ ರಸ್ತೆಗಳಲ್ಲಿ ಕೇಸರಿ ತೋರಣ, ಮಹಾಪುರುಷರ ಮೂರ್ತಿ ಮತ್ತು ಭಾವಚಿತ್ರಗಳು ರಾರಾಜಿಸುತ್ತಿದ್ದವು. ಸ್ವಾಗತದ ಫಲಕಗಳು ಸೇರಿದಂತೆ ರಸ್ತೆಯ ಇಕ್ಕೆಲಗಳಲ್ಲಿ ಪ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ರಸ್ತೆಗಳ ಮೇಲೆ ಬಣ್ಣ ಬಣ್ಣದ ಆಕರ್ಷಕ ರಂಗೋಲಿ ಚಿತ್ತಾರ ಬಿಡಿಸಿ, ಪುಷ್ಪಗಳಿಂದ ಸಿಂಗರಿಸಿ ಪಥಸಂಚಲನಕ್ಕೆ ಅದ್ಧೂರಿಯಾಗಿ ಸಾರ್ವಜನಿಕರು ಸ್ವಾಗತಿಸಿದರು. ರಸ್ತೆಯುದ್ದಕ್ಕೂ ಸಾವಿರಾರೂ ಜನರು ನೆರೆದಿದ್ದರು.
ಛದ್ಮವೇಷದಲ್ಲಿ ಮಿಂಚಿದ ಮಕ್ಕಳು:ಅಲ್ಲಲ್ಲಿ ವೇದಿಕೆ ನಿರ್ಮಿಸಿ ಮಕ್ಕಳಿಗೆ ಭಾರತ ಮಾತೆ, ಕಿತ್ತೂರು ಚನ್ನಮ್ಮ, ಶಿವಾಜಿ ಮಹಾರಾಜ ಸೇರಿದಂತೆ ಮಹಾನ ಪುರುಷರ ಛದ್ಮವೇಷ ಧರಿಸಿದ್ದಲ್ಲದೇ ಅಲ್ಲಲ್ಲಿ ಧ್ವನಿವರ್ದಕಗಳಲ್ಲಿ ಆರ್‌ಎಸ್‌ಎಸ್‌ನ ಪ್ರಾರ್ಥನಾ ಗೀತೆಯಾದ ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಗೀತೆಯು ದೇಶಭಕ್ತಿ, ಭಾವ ಮೂಡಿಸುವಂತೆ ಮಾಡಿತು.
ಪಥ ಸಂಚಲನ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಳಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಪ್ರೀ ಮಾಡಿ ಪಥಸಂಚಲಕ್ಕೆ ಅವಕಾಶ ಮಾಡಿಕೊಟ್ಟಿದ್ದಲ್ಲದೇ ಭಾರಿ ಬಿಗಿ ಬಂದೊಬಸ್ತ್‌ನ್ನು ಪೊಲೀಸ್ ಇಲಾಖೆ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಹಿರೇಮಠದ ಶ್ರೀಗಳಿಂದ ಪುಷ್ಪವೃಷ್ಠಿಎರಡು ವಾಹಿಗಳ ಸಂಗಮ ಕೇಂದ್ರವಾದ ತಿಲಕ ಚೌಕ್‌ನಲ್ಲಿ ನಗರ ಸೇವಕರಾದ ಜಯತೀರ್ಥರು ವ್ಯವಸ್ಥೆ ಮಾಡಿದ್ದ ಕ್ರೇನ್‌ನಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಗಣವೇಷಧಾರಿಗಳಿಗೆ ಪುಷ್ಪ ಎರಚಿ ಸ್ವಾಗತಿಸಿದರು.
ಗಣ್ಯರು ಭಾಗಿ:ಸುಮಾರು 5000ಕ್ಕೂ ಹೆಚ್ಚು ಗಣವೇಷಧಾರಿಗಳು ಭಾಗವಹಿಸಿದ್ದಲ್ಲದೇ ಬೆಳಗಾವಿ ಸಂಸದರು ಜಗದೀಶ ಶೆಟ್ಟರು, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ಮಾಜಿ ಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ, ಮಾಜಿ ಎಂಎಲ್ಸಿಮಹಾಂತೇಶ ಕವಟಗಿಮಠ, ಬಿಜೆಪಿ ಮುಖಂಡರಾದ ಕಿರಣ ಜಾಧವ, ಡಾ.ರವಿ ಪಾಟೀಲ ಹಾಗೂ 1.5 ವರ್ಷದ ಪುಟ್ಟ ಬಾಲಕನಿಂದ ಹಿಡಿದು 90 ವರ್ಷದ ವೃದ್ಧರು, ಗಣ್ಯ ಮುಖಂಡರು ಭಾಗವಹಿಸಿದ್ದರು.