ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ತನ್ನ ಸೇವಾ ಚಟುವಟಿಕೆಯ ದೂರದೃಷ್ಟಿಯ ಫಲವಾಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ ನೂರು ವರ್ಷಗಳನ್ನು ಪೂರೈಸಿದೆ ಎಂದು ಭಾರತೀಯ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಡಾ. ಆರ್ ಅಣ್ಣಪ್ಪಸ್ವಾಮಿ ಹೇಳಿದರು.ಗುರುವಾರ ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಶತಾಬ್ಧಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ನೂರು ವರ್ಷಗಳ ಹಿಂದೆ ಹಿಂದೂ ಧರ್ಮಕ್ಕಿರುವ ಅಪಾಯಗಳನ್ನು ಗುರುತಿಸಿ ಅಂದಿನ ಮಹಾತ್ಮರು ತಮ್ಮ ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿ ಧರ್ಮ ರಕ್ಷಣೆಗಾಗಿ ಸಂಘವನ್ನು ಹುಟ್ಟುಹಾಕಿದ ಪರಿಣಾಮ ನೂರು ವರ್ಷಗಳ ಅವಧಿಯಲ್ಲಿ ಹಿಂದೂ ಧರ್ಮದ ವಿರುದ್ದ ನಡೆದ ಹಲವು ಷಡ್ಯಂತ್ರಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತಿದೆ. ಸಂಘದ ಪ್ರತಿ ಶಾಖೆಗಳಲ್ಲೂ ಸ್ವಯಂ ಸೇವಕರಿಗೆ ದೇಶಭಕ್ತಿಯೊಂದಿಗೆ ದೈಹಿಕ ಚಟುವಟಿಕೆ ತರಬೇತಿ ನೀಡುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡುವ ಕೆಲಸ ನಡೆಯುತ್ತಿದೆ. ಭಾರತೀಯ ಸಂಸ್ಕೃತಿ,ಪರಂಪರೆಯನ್ನು ಜಾಗೃತಿಗೊಳಿಸುವ ಕೆಲಸ ಮಾಡಲಾಗುತ್ತಿದೆ. ದೇಶದಲ್ಲಿ ಮಹಿಳೆಯರೆ ನಿರ್ವಹಿಸುವ ಐದು ಸಾವಿರ ಶಾಖೆಗಳಿದ್ದು ಹಿಂದೆಂದಿಗಿಂತಲೂ ಸಮರ್ಥವಾಗಿ ಸಂಘ ಕೆಲಸ ಮಾಡುತ್ತಿದೆ ಎಂದು ಹೇಳಿದರು.ಸಂಘಕ್ಕೆ ವೃದ್ಧಾಪ್ಯವಿಲ್ಲದಾಗಿದ್ದು ಪ್ರತಿ ಶಾಖೆಯಲ್ಲೂ ನವ ಚೈತನ್ಯ ಪಡೆದುಕೊಳ್ಳುತ್ತಿದೆ. ಸಂಘ ಸಮಾಜದ ಆಂತರ್ಯದಲ್ಲಿ ಕೆಲಸ ಮಾಡುತ್ತಿದ್ದು ದೇಶಕಟ್ಟುವ ಬಗ್ಗೆ ಸಂಘ ತನ್ನದೆ ಕಾರ್ಯಸೂಚಿಯನ್ನು ಹೊಂದಿದೆ. ಪ್ರಪಂಚದಲ್ಲಿ ರಾಷ್ಟ್ರೀಯ ಸ್ವಯಂ ಸಂಘ ಅತ್ಯಂತ ಬಲಿಷ್ಠ ಹಾಗೂ ಬೃಹತ್ ಸಂಘವಾಗಿದ್ದು ತಮ್ಮ ಸಂಘದ ನಿರ್ಧಾರಗಳನ್ನು ಇಡೀ ವಿಶ್ವವೇ ಸೂಕ್ಷ್ಮವಾಗಿ ಗಮನಿಸುತ್ತಿರುವುದು ಸಂಘದ ಬಲಿಷ್ಠತನಕ್ಕೆ ಸಾಕ್ಷಿಯಾಗಿದೆ. ದೇಶ ಇಂದು ಸಾಕಷ್ಟು ಸಕೀರ್ಣ ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ಸಮಸ್ಯೆಗಳನ್ನು ನಿಗ್ರಹಿಸುವ ಶಕ್ತಿಯನ್ನು ಸಂಘ ಹೊಂದಿದೆ. ಸಂಘ ಸಾಮರಸ್ಯ, ಸ್ವದೇಶಿವಸ್ತುಗಳ ಬಳಕೆ, ಪ್ರಕೃತಿ ಸಂರಕ್ಷಣೆ, ಸಮಾಜಸೇವೆ ಹಾಗೂ ನಾಗರಿಕ ಶಿಷ್ಟಾಚಾರದಂತಹ ಪಂಚಶೀಲ ತತ್ವದಡಿ ಕೆಲಸ ಮಾಡುತ್ತಿದೆ. ಸಂಘ ನೂರು ವರ್ಷಗಳನ್ನು ಪೊರೈಸಿರುವುದು ದೇಶದ ನಾಗರಿಕರೆಲ್ಲ ಹೆಮ್ಮಪಡುವ ವಿಚಾರವಾಗಿದೆ ಎಂದರು. ಸದ್ಯ ದೇಶ ವಲಸಿಗರ ಸಮಸ್ಯೆಯನ್ನು ಎದುರಿಸುತ್ತಿದ್ದು ಇವರಿಂದ ಮುಂದಿನದಿನಗಳಲ್ಲಿ ಹಿಂದೂ ಧರ್ಮಕ್ಕೆ ಕುತ್ತು ಬರುವ ಸಾಧ್ಯತೆ ದಟ್ಟವಾಗಿದೆ. ಈ ನಿಟ್ಟಿನಲ್ಲಿ ಸಂಘ ಕೆಲಸ ಮಾಡುತ್ತಿದೆ. ಸಂಘದ ಸ್ವಯಂ ಸೇವಕರ ನಡೆನುಡಿಯನ್ನು ಸಮಾಜ ಸೂಕ್ಷ್ಮವಾಗಿ ಗಮನಿಸುತ್ತಿದೆ. ಆದ್ದರಿಂದ, ಸಂಘದ ಸ್ವಯಂ ಸೇವಕರು ಸಮಾಜಕ್ಕೆ ಮಾದರಿಯಾಗಿರ ಬೇಕು ಎಂದರು. ರಾಮಮಂದಿರ ನಿರ್ಮಾಣದ ವೇಳೆ ವಂತಿಕೆ ಸಂಗ್ರಹವನ್ನು ಸಂಘದ ಸ್ವಯಂ ಸೇವಕರಿಗೆ ನೀಡಿರುವುದು ಸ್ವಯಂ ಸೇವಕರ ನಿಷ್ಠೆಯನ್ನು ಸಾರುತ್ತಿದೆ ಎಂದರು.ಕಾರ್ಯಕ್ರಮದ ಅತಿಥಿಯಾಗಿ ಪ್ರವೀಣ್ ಓಸ್ವಾಲ್ ಭಾಗವಹಿಸಿದ್ದರು. ತಾಲೂಕು ಸಂಚಾಲಕ ನೂತನ್ ಕುಮಾರ್, ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಮುಂತಾದವರಿದ್ದರು.