ಸಾರಾಂಶ
ಕನಕಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಾಗೂ ವಿಜಯದಶಮಿ ಅಂಗವಾಗಿ ನಗರದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ನಗರದ ಕೇಸರಿ ಶಾಖೆ ಹಾಗೂ ವಿವೇಕಾನಂದ ಶಾಖೆ ಸೇರಿದಂತೆ ನಗರ ಮತ್ತು ಗ್ರಾಮಾಂತರ ಶಾಖೆಗಳಿಂದ ಆಗಮಿಸಿದ್ದ ಸಾವಿರಾರು ಗಣವೇಷಧಾರಿ ತರುಣರು ಘೋಷ್ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದು ಸಾರ್ವಜನಿಕರ ಗಮನ ಸೆಳೆಯಿತು. ಭಾಗ್ವಾಧ್ವಜ ಹಿಡಿದು ಒಂದು ತಂಡ ನಗರದ ಮಾನಸ ಶಾಲೆ ರಸ್ತೆ ಮೂಲಕ ಪೈಪ್ ಲೈನ್ ರಸ್ತೆಯಲ್ಲಿ ಸಾಗಿ ಧರ್ಮರಾಯ ಆರ್ಯನ್ ವರ್ಕ್ ಷಾಪ್ ಮೂಲಕ ಹಲಸಿನ ಮರದ ದೊಡ್ಡಿ ಮುಖಾಂತರ ಕೋಟೆ ಭಾಗದ ಮೂಲಕ ಚನ್ನಬಸಪ್ಪ ವೃತ್ತಕ್ಕೆ ಸಾಗಿತು.ಮತ್ತೊಂದು ತಂಡ ವಿವೇಕಾನಂದ ಬಡಾವಣೆ ಮೂಲಕ ಹೊರಟುಮೇಗಳ ಬೀದಿ, ಬಾಣಂತಮಾರಮ್ಮ ದೇವಾಲಯ ರಸ್ತೆ ಮೂಲಕ ಎಂ.ಜಿ ರಸ್ತೆಯಲ್ಲಿ ಸಾಗಿ ಚನ್ನಬಸಪ್ಪ ವೃತ್ತದಲ್ಲಿ ಎರಡು ತಂಡಗಳು ಒಂದೇ ಸಮಯಕ್ಕೆ ಬಂದು ಸಂಗಮವಾಗಿದ್ದು ಸಾರ್ವಜನಿಕರ ಗಮನ ಸೆಳೆಯಿತು. ಈ ವೇಳೆ ತಾಲೂಕಿನ ಪ್ರಮುಖ ಮಠಗಳ ಸ್ವಾಮೀಜಿಗಳು ಹಾಜರಿದ್ದು ಭಾಗ್ವಾಧ್ವಜಕ್ಕೆ ಪುಷ್ಪವೃಷ್ಟಿ ಸುರಿಸಿ ನಮನ ಸಲ್ಲಿಸಿದರು.
ಪಥಸಂಚಲನ ಸಾಗಿದ ರಸ್ತೆಯುದ್ದಕ್ಕೂ ಸಾರ್ವಜನಿಕರು ರಂಗೋಲಿ ಹಾಕಿ ತಾಯಿ ಭಾರತಾಂಬೆಯ ಪೋಟೋ ಗಳನ್ನು ಇಟ್ಟು ಪುಷ್ಪವೃಷ್ಟಿ ಗೈದು ಸ್ವಯಂ ಸೇವಕರನ್ನು ಸ್ವಾಗತಿಸಿ ಭಾಗ್ವಾಧ್ವಜಕ್ಕೆ ನಮಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪಥಸಂಚಲನ ಸಾಗುವ ದಾರಿಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.