ಆರ್‌ಎಸ್‌ಎಸ್ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತಿದೆ: ವಿಜಯಕುಮಾರ್
KannadaprabhaNewsNetwork | Published : Oct 30 2023, 12:31 AM IST
ಆರ್‌ಎಸ್‌ಎಸ್ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತಿದೆ: ವಿಜಯಕುಮಾರ್
ಸಾರಾಂಶ
ಆರ್‌ಎಸ್‌ಎಸ್ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತಿದೆ: ವಿಜಯಕುಮಾರ್
ಚಿಕ್ಕಮಗಳೂರಿನಲ್ಲಿ ಆರ್‌ಎಸ್‌ಎಸ್ ವಿಜಯದಶಮಿ ಪಥ ಸಂಚಲನ, ಕೋಟೆ ಬಡಾವಣೆಯಲ್ಲಿ ಕಾರ್ಯಕ್ರಮ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನ ಶಾಖೆಗಳ ಮೂಲಕ ಎಲ್ಲರನ್ನೂ ಒಂದುಗೂಡಿಸಿ ಭಾರತವನ್ನು ಜಗದ್ಗುರುವಿನ ಕಡೆಗೆ ಕರೆದುಕೊಂಡು ಹೋಗುತ್ತಿದೆ ಎಂದು ಆರ್‌ಎಸ್‌ಎಸ್‌ನ ಹಾಸನ ವಿಭಾಗ ಕಾರ್ಯವಾಹ ವಿಜಯ್ ಕುಮಾರ್ ಹೇಳಿದರು. ಭಾನುವಾರ ನಗರದಲ್ಲಿ ಆರ್‌ಎಸ್‌ಎಸ್ ವಿಜಯದಶಮಿ ಪಥ ಸಂಚಲನದ ಅಂಗವಾಗಿ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದರು. ಹಿಂದೂ ಸಮಾಜದಲ್ಲಿ ವಿಜಯ ದಶಮಿ ದಿನ ಹಲವು ಪೌರಾಣಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಅದೇ ರೀತಿ ರಾಷ್ಟ್ರೀಯ ಸ್ವಯಂಸೇವಕ ಸಂಘವೂ ಇದೇ ದಿನ ಸ್ಥಾಪನೆ ಆಗಿದೆ. ಈ ಕಾರಣಕ್ಕೆ ಇದು ಸಂಘದ ಸ್ವಯಂಸೇವಕರಿಗೆ ಅತ್ಯಂತ ಮಹತ್ವದ ದಿನ ಎಂದರು. ಆರ್‌ಎಸ್‌ಎಸ್ ಇಂದು ಸಮಾಜದ ಎಲ್ಲೆಡೆ ವ್ಯಾಪಿಸಿದೆ. ಜನ ಸ್ವೀಕಾರ ಮಾಡಿದ್ದಾರೆ. ಮನೆ ಮನೆಗಳಲ್ಲಿ ಸ್ವಾಗತ ಸಿಗುತ್ತಿದೆ. ನಮ್ಮೂರಿಗೆ ಸಂಘ ಬೇಕು ಎಂದು ಅಪೇಕ್ಷೆ ಪಡುತ್ತಿದ್ದಾರೆ. ಹಿಂದುತ್ವದ ರಕ್ಷಣೆ ಮಾಡುವುದು ಆರ್‌ಎಸ್‌ಎಸ್ ಮಾತ್ರ ಎನ್ನುವುದು ಸಮಾಜಕ್ಕೆ ಗೊತ್ತಾಗಿದೆ ಎಂದು ಹೇಳಿದರು. ಇಲ್ಲಿರುವ ಕುಟುಂಬ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ ಹಾಗೂ ಧಾರ್ಮಿಕ ನಂಬಿಕೆ ಕಾರಣದಿಂದ ನಮ್ಮ ಪರಂಪರೆ ಕಳೆದ ನೂರಾರು ವರ್ಷಗಳ ದಾಳಿ ಎದುರಿಸಿ ನಿಂತಿದೆ. ಆದರೆ, ಮೆಕಾಲೆ ಶಿಕ್ಷಣದ ಕಾರಣದಿಂದಾಗಿ ಈ ಮೂರು ನಮ್ಮಿಂದ ದೂರವಾಗುತ್ತಿದೆ. ಹಾಗಾಗಿ ನಾವು ಕುಟುಂಬ ವ್ಯವಸ್ಥೆಯನ್ನು ಭದ್ರ ಮಾಡಬೇಕು. ದೇವಸ್ಥಾನ, ಸ್ಮಶಾನ ಹಾಗೂ ನೀರು ಈ ಮೂರು ಎಲ್ಲರಿಗೂ ಸಮಾನವಾಗಿ ಸಿಗುವಂತಾಗಬೇಕು. ಸಾಮರಸ್ಯದ ವಾತಾವರಣ ನಿರ್ಮಾಣ ಮಾಡಬೇಕು. ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಅತ್ಯಂತ ಕ್ರಿಯಾಶೀಲವಾಗಿ ಯೋಚನೆ ಮಾಡಬೇಕಿದೆ ಎಂದರು. ಸಂಘ ಕೇವಲ ಭಾಷಣ ಮಾಡಿಲ್ಲ, ಬದಲಾಗಿ ಕಾರ್ಯದ ಮೂಲಕ ಸಮಾಜವನ್ನು ಒಂದು ಮಾಡುವ ಕೆಲಸ ಮಾಡುತ್ತಿದೆ. ಹಿಂದೂ ಸಮಾಜದಲ್ಲಿ ಜಾತಿಯತೆ ದೂರ ಮಾಡುವ ಕೆಲಸವನ್ನು ಯಶಸ್ವಿಯಾಗಿ ಮಾಡಿದೆ ಎಂದು ಹೇಳಿದರು. ಬರುವ 2025ಕ್ಕೆ ಸಂಘಕ್ಕೆ 100 ವರ್ಷ ತುಂಬಲಿದೆ. ಈ ವೇಳೆ ಸಂಘದ ಶಾಖೆ ಎಲ್ಲಾ ಗ್ರಾಮಗಳಿಗೂ, ನಗರದ ಎಲ್ಲಾ ಕಡೆಗಳಿಗೂ ಶಾಖೆ ತಲುಪಬೇಕು ಎಂಬ ಗುರಿ ನಮ್ಮದು ಎಂದರು. ಇದೆಲ್ಲದರ ಜೊತೆಗೆ ವೈಚಾರಿಕವಾಗಿಯೂ ನಾವು ಜಾಗೃತ ಆಗಬೇಕು. ಮೊನ್ನೆ ನಡೆದ ಮಹಿಷ ದಸರಾ ನಮ್ಮ ಸಂಸ್ಕೃತಿಯ ಭಾಗವೇ ? ಎನ್ನುವುದನ್ನು ನಾವು ಯೋಚನೆ ಮಾಡಬೇಕಿದೆ. ರಾಷ್ಟ್ರೀಯ ಚಿಂತನೆ, ಹಿಂದೂ ಸಮಾಜದ ವಿರುದ್ಧ ಇರುವವರು ಈ ರೀತಿಯ ವಿಕೃತ ಮಾನಸಿಕತೆ ಇರುವ ಜನರು ಸಮಾಜವನ್ನು ತುಂಡು ಮಾಡುವ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ಜಾಗೃತಿ ಮೂಡಿಸುವ, ಅಧ್ಯಯನಶೀಲ ಪ್ರವೃತ್ತಿ ಹೆಚ್ಚು ಮಾಡಬೇಕಿದೆ ಎಂದು ಹೇಳಿದರು. ಸುಧೀರ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆರ್‌ಎಸ್‌ಎಸ್ ಜಿಲ್ಲಾ ಕಾರ್ಯಾವಾಹ ಪ್ರಶಾಂತ್ ಶರ್ಮ, ನಗರ ಕಾರ್ಯವಾಹ ಸುನೀಲ್, ಸಹ ಕಾರ್ಯವಾಹ ವಿಕ್ರಮ್ ಉಪಸ್ಥಿತರಿದ್ದರು. --- ಬಾಕ್ಸ್--- ನೂರಾರು ಸ್ವಯಂ ಸೇವಕರು ಭಾಗವಹಿಸಿದ್ದ ಆಕರ್ಷಕ ಪಥಸಂಚಲನ ಆಂಜನೇಯ ದೇವಸ್ಥಾನದಿಂದ ಹೊರಟು ಚನ್ನಾಪುರ ರಸ್ತೆ, ಕಣದಾಳ್ ಸರ್ಕಲ್, ಶೇಷಪ್ಪನ ಬೀದಿ, ಹರೇಶ್ವರ ದೇವಸ್ಥಾನದ ಬೀದಿ, ಕಂಚಿಗಾರ್ ರಸ್ತೆ, ಕಂಡಕ್ಟರ್ ಅಂಗಡಿ, ಸುಗ್ಗಿ ಕಲ್ಲು, ವೀರಭದ್ರೇಶ್ವರ ದೇವಸ್ಥಾನ ರಸೆ, ಸುಬ್ಬನಾಯಕನ ಬೀದಿ, ಕೋಟೆ ಆಟೋ ಸರ್ಕಲ್, ಬೇಲೂರು ರಸ್ತೆಗಳಲ್ಲಿ ಸಾಗಿ ಬಂತು. 29 ಕೆಸಿಕೆಎಂ 1 ಚಿಕ್ಕಮಗಳೂರು ನಗರದಲ್ಲಿ ಭಾನುವಾರ ಆರ್‌ಎಸ್‌ಎಸ್ ಕಾರ್ಯಕರ್ತರು ಪಥ ಸಂಚಲನ ನಡೆಸಿದರು.