ಭಾರತ ವಿಕಸಿತ ದೇಶವಾಗಿಸಲು ಆರ್ಎಸ್ಎಸ್ ಪ್ರೇರಣೆಯಾಗಿದೆ ಆರ್ಎಸ್ಎಸ್ ಹಿರಿಯ ಪ್ರಚಾರಕ ಸು. ರಾಮಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಭಾರತ ವಿಕಸಿತ ದೇಶವಾಗಿಸಲು ಆರ್​ಎಸ್​ಎಸ್​ ಪ್ರಮುಖ ಪ್ರೇರಣೆಯಾಗಿದೆ ಎಂಬುದನ್ನು ಎಲ್ಲರೂ ನೆನಪಿಟ್ಟುಕೊಳ್ಳಿ ಎಂದು ಆರ್​ಎಸ್​ಎಸ್​ ಹಿರಿಯ ಪ್ರಚಾರಕ ಸು. ರಾಮಣ್ಣ ಹೇಳಿದರು.

ಭಾನುವಾರ ಇಲ್ಲಿಯ ವಿಜಯನಗರದ ಅನಂತ ಪ್ರೇರಣಾ ಕೇಂದ್ರದಲ್ಲಿ ಏರ್ಪಡಿಸಿದ್ದ ಕೇಂದ್ರದ ವಾಷಿರ್ಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಜನಪ್ರಿಯತೆಗೂ ಶ್ರೇಷ್ಠತೆಗೂ ವ್ಯತ್ಯಾಸವಿದೆ. ಹೆಡಗೆವಾರ ಅವರು ಆರ್​ಎಸ್​ಎಸ್​ ಮೂಲಕ ಈ ದೇಶದ ಸಂಸತಿ, ಪರಂಪರೆಯನ್ನು ಜತನದಿಂದ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಮಾಡಿದರು. ಅವರು ಇಂತಹ ಶ್ರೇಷ್ಠ ಕೆಲಸದ ಮೂಲಕ ಭಾರತಮಾತೆಯನ್ನು ಜನಪ್ರಿಯಗೊಳಿಸಲು ಪ್ರಯತ್ನ ಮಾಡಿದರು. ಇದೀಗ ಭಾರತ ವಿಕಸಿತ ದೇಶವಾಗಿಸಲು ಆರ್​ಎಸ್​ಎಸ್​ ಪ್ರೇರಣೆಯಾಗಿದೆ ಎಂದರು.

ತುತ್ತು ಅನ್ನ, ಹಾಲಿಗಾಗಿ ಅನ್ಯ ದೇಶಗಳನ್ನು ಬೇಡಿಕೊಳ್ಳುತ್ತಿದ್ದ ಭಾರತ ಇಂದು ತನ್ನ ಶಕ್ತಿಯನ್ನು ಜಾಗೃತಗೊಳಿಸಿಕೊಂಡು ವಿಕಸಿತ ದೇಶವಾಗುತ್ತಿದೆ. ಇದಕ್ಕೆ ಬೇಕಾದ ರಾಜಕೀಯ ಶಕ್ತಿಗೆ ಪ್ರೇರಣೆ ನೀಡಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಭಗವದ್ಗೀತೆಯ ಸಾರವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ವಾರಸುದಾರಿಕೆಯನ್ನು ಸಂಘ ಪರಿವಾರ ಮಾಡುತ್ತಿದೆ. ವಟವೃಕ್ಷದ ಒಂದೊಂದು ಬೇರುಗಳಾಗಿ ನಾವೆಲ್ಲರೂ ಕೆಲಸ ಮಾಡಬೇಕು. ಅಂದಾಗ ಭಾರತವೆಂಬ ವೃಕ್ಷ ಗಟ್ಟಿಯಾಗಿ ನೆಲೆಯೂರಲು ಸಾಧ್ಯ ಎಂದರು.

ಬಿಜೆಪಿಗೆ ಶಕ್ತಿ ತುಂಬಿದ್ದ ಅನಂತಕುಮಾರ:

ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಎಚ್​.ಎನ್​. ಅನಂತಕುಮಾರ ಅವರು ನನಗೆ ಅಪ್ತರು, ಒಡನಾಡಿ, ಮಾರ್ಗದರ್ಶಕರಾಗಿದ್ದರು. ಬಿಜೆಪಿಗೆ ಶಕ್ತಿ ತುಂಬಿದ್ದ ಅವರ ಹೋರಾಟ, ರಾಜಕೀಯ ಜೀವನ ನಮಗೆ ಪ್ರೇರಣೆಯಾಗಿದೆ. ಸಾಮಾನ್ಯ ಕುಟುಂಬದಿಂದ ಬಂದು ರಾಜಕೀಯದಲ್ಲಿ ಎತ್ತರಕ್ಕೆ ಬೆಳೆದರು. ಅವರ ರಾಜಕೀಯ ಜೀವನ ಎಲ್ಲರಿಗೂ ಪ್ರೇರಣಾದಾಯಕವಾಗಿದೆ ಎಂದರು.

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನದಿಂದಲೂ ನಿತ್ಯ ಅನ್ನಪ್ರಸಾದ ವ್ಯವಸ್ಥೆ ಮಾಡುವ ಮೂಲಕ ಅದಮ್ಯ ಚೇತನ ಸಂಸ್ಥೆ ಮಾದರಿ ಕೆಲಸ ಮಾಡುತ್ತಿದೆ ಎಂದರು.

ಗದಗ ಪಂಚಾಯತರಾಜ್ ವಿವಿ ಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ ಮಾತನಾಡಿದರು. ವೀಣಾ ಅಠವಲೆ ಕೇಂದ್ರದ ವಾಷಿರ್ಕ ವರದಿ ವಾಚನ ಮಾಡಿದರು. ಅನಂತ ಚೇತನ ಕೃತಿ ಹಾಗೂ ಅನಂತಪಥ ಮಾಸಪತ್ರಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಅದಮ್ಯ ಚೇತನದ ತೇಜಸ್ವಿನಿ ಅನಂತಕುಮಾರ, ನಂದಕುಮಾರ್​, ಮಾಜಿ ಶಾಸಕ ಅಶೋಕ ಕಾಟವೆ, ರಂಗಾ ಬದ್ದಿ, ರೂಪಾ ಶೆಟ್ಟಿ, ಮೀನಾ ಒಂಟಮುರಿ, ಸುಭಾಸಸಿಂಗ್​ ಜಮಾದಾರ ಸೇರಿದಂತೆ ಹಲವರಿದ್ದರು.