ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವ ನಿಮಿತ್ತ ನಗರದಲ್ಲಿ ಭಾನುವಾರ ನಡೆದ ಪಥಸಂಚಲನ ಗಮನ ಸೆಳೆಯಿತು. ಸಂಘದ ಶತಮಾನೋತ್ಸವ ಹಿನ್ನೆಲೆಯಲ್ಲಿ ನಗರ ಕೇಸರಿಮಯವಾಗಿತ್ತು.ಸಂಜೆ 4 ಗಂಟೆಗೆ ನಗರದ ಬಸವೇಶ್ವರ ಮೈದಾನದಿಂದ ಎರಡು ಪ್ರತ್ಯೇಕ ಮಾರ್ಗದ ಘೋಷ್ ಪಥಸಂಚಲನಗಳು ಹೊರಟವು. ಪ್ರತಿ ಮಾರ್ಗದಲ್ಲಿ ತಲಾ ಮೂರು ಘೋಷ್ ವಾಹಿನಿಗಳಿದ್ದವು. ಪಥಸಂಚಲನ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಊರುಗಳಿಂದ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ನಗರದಾದ್ಯಂತ ಕೇಸರಿ ಕಮಾನುಗಳು, ಬಂಟಿಂಗ್ಸ್, ಫ್ಲೆಕ್ಸ್ ಗಳು ಗಮನ ಸೆಳೆದವು. ಪಥಸಂಚಲನ ಆಗಮಿಸುವ ಮಾರ್ಗದಲ್ಲಿ ಮಹಿಳೆಯರು ರಂಗೋಲಿ ಬಿಡಿಸಿ ಪಥಸಂಚಲನ ಸ್ವಾಗತಿಸಿದರು. ಕ್ರಾಂತಿಕಾರಿಗಳ ವೇಷಭೂಷಣದಲ್ಲಿ ಮಕ್ಕಳು ಮಿಂಚಿದರು.
ಎರಡು ಮಾರ್ಗಗಳ ಪಥಸಂಚಲನ ಸಂಗಮವಾಗುವ ಸನ್ನಿವೇಶ ಕಣ್ತುಂಬಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಜನ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ್ದರು. ವೃತ್ತದ ಸುತ್ತಲಿರುವ ಬೃಹತ್ ಕಟ್ಟಡಗಳುದ್ದಕ್ಕೂ ಜನರ ದಂಡು ಕಂಡು ಬಂತು. ಜನ ಪಥಸಂಚಲನ ಮಧ್ಯೆ ಜನರು ಬಾರದಂತೆ ತಡೆಯಲು ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದರು.ಎರಡು ಮಾರ್ಗಗಳಲ್ಲಿ ಸಂಚರಿಸಿದ ಪಥಸಂಚಲನ: ಮಾರ್ಗ-1ರ ಪಥಸಂಚಲನ ಬಸವೇಶ್ವರ ಮೈದಾನದಿಂದ ಆರಂಭಗೊಂಡು, ಬೀಳೂರಜ್ಜನ ದೇವಸ್ಥಾನ, ಪಶು ಆಸ್ಪತ್ರೆ, ಶ್ರೀಮಹಾಲಕ್ಷ್ಮೀ ದೇವಸ್ಥಾನ, ಶಿರೂರ ಅಗಸಿ, ಟೆಂಗಿನಮಠ, ಚರಂತಿಮಠ ಹಿಂಭಾಗ, ಶ್ರೀಹುಡೇದ ಲಕ್ಷ್ಮೀ ದೇವಸ್ಥಾನ, ಜೈನಭವನ ಮಾರವಾಡಿಗಲ್ಲಿ, ಹಳೇ ಸಂಘದ ಕಾರ್ಯಾಲಯ, ಗಜಾನನ ಚೌಕ, ಕೊಪ್ಪ ಆಸ್ಪತ್ರೆ ಕಿಲ್ಲಾ, ಶ್ರೀಕೊತ್ತಲೇಶ ದೇವಸ್ಥಾನ, ಶ್ರೀವೆಂಕಟೇಶ್ವರ ದೇವಸ್ಥಾನ ವೆಂಕಟಪೇಟೆ, ವಲ್ಲಭಬಾಯ್ ಚೌಕ್, ಶ್ರೀದುರ್ಗಾದೇವಿ ದೇವಸ್ಥಾನ, ಎಂಜಿ ರಸ್ತೆ ಮೂಲಕ ಸಾಗಿಬಂದು ಬಸವೇಶ್ವರ ವೃತ್ತದಲ್ಲಿ ಸಂಗಮವಾಯಿತು.
ಮಾರ್ಗ-2ರ ಪಥಸಂಚಲನ ಬಸವೇಶ್ವರ ಕಾಲೇಜು ಮೈದಾನದಿಂದ ಹೊರಟು, ಸಾಸನೂರ ಪೆಟ್ರೋಲ್ ಬಂಕ್, ಬಸ್ ನಿಲ್ದಾಣ, ದುರ್ಗಾವಿಹಾರ ಸರ್ಕಲ್, ಶಾಂತಿನಗರ ಕ್ರಾಸ್, ಹಳೆ ಐಬಿ ಕ್ರಾಸ್, ಹರಣಶಿಖಾರಿಗಲ್ಲಿ, ವಾಸವಿ ಚಿತ್ರಮಂದಿರ, ದುರ್ಗಾನಗರ ಕ್ರಾಸ್, ಶಾರದಾ ಲಾಡ್ಜ್, ಹೊಳೆ ಆಂಜನೇಯ ದೇವಸ್ಥಾನ, ಬಸವೇಶ್ವರ ಸರ್ಕಲ್ ಮೂಲಕ ಬವಿವ ಸಂಘದ ಮೈದಾನಕ್ಕೆ ಮರಳಿತು.ಗಣ್ಯರಿಂದ ವೀಕ್ಷಣೆ: ನಗರದ ಬಸವೇಶ್ವರ ವೃತ್ತದಲ್ಲಿ ಗಣ್ಯರು ಪಥಸಂಚಲನವನ್ನು ಆರ್‌ಎಸ್ಎಸ್ ಉತ್ತರ ಪ್ರಾಂತ ಬೌದ್ಧಿಕ ಪ್ರಮುಖ ರಾಮಚಂದ್ರ ಏಡಕೆ, ಮುಖ್ಯ ಅತಿಥಿಗಳಾಗಿ ಉದ್ಯಮಿ ವಿಲಾಸ ಬದಾಮಿ, ಸಂಸದರಾದ ಪಿ.ಸಿ.ಗದ್ದಿಗೌಡರ, ನಾರಾಯಣಸಾ ಭಾಂಡಗೆ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ, ವಿಪ ಸದಸ್ಯರಾದ ಪಿ.ಎಚ್.ಪೂಜಾರ, ಹಣಮಂತ ನಿರಾಣಿ ಮತ್ತಿತರರು ಪಥಸಂಚಲನ ವೀಕ್ಷಿಸಿದರು.