ಸಾರಾಂಶ
ಲಕ್ಷ್ಮೇಶ್ವರ: ಆರ್‌ಎಸ್‌ಎಸ್ ಶತಮಾನೋತ್ಸವ ಅಂಗವಾಗಿ ಭಾನುವಾರ ಪಟ್ಟಣದ ಮಹಾಕವಿ ಪಂಪ ವೃತ್ತದಿಂದ ಆರಂಭವಾದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪಥಸಂಚಲನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನೂರಾರು ಸ್ವಯಂಸೇವಕರು ಪಥಸಂಚಲನದಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಪಥಸಂಚಲನದಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಸೇರಿದಂತೆ ಅನೇಕ ಮುಖಂಡರು, ಸ್ವಯಂ ಸೇವಕರ ಜತೆ ಭಾಗಿಯಾದರು.ಪಟ್ಟಣದ ಪಂಪ ವೃತ್ತದ ಬಳಿ ಜಮಾಯಿಸಿದ್ದ ಸ್ವಯಂಸೇವಕರು ಮಧ್ಯಾಹ್ನ ೩.೩೦ರ ಸುಮಾರಿಗೆ ಆರಂಭವಾದ ಪಥಸಂಚಲನಕ್ಕೆ “ನಮಸ್ತೆ ಸದಾ ವತ್ಸಲೇ ಮಾತೃಭೂಮೆ....” ಆರ್‌ಎಸ್‌ಎಸ್ ಗೀತೆಯೊಂದಿಗೆ ಚಾಲನೆ ನೀಡಲಾಯಿತು. ಪಥಸಂಚಲನ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನ ರಸ್ತೆಯ ಎರಡು ಬದಿಗಳಲ್ಲಿ ನಿಂತಿದ್ದು ಗಮನ ಸೆಳೆಯಿತು.ರಸ್ತೆಯುದ್ದಕ್ಕೂ ಹೂವಿನ ಹಾಸಿಗೆ ಹಾಸಲಾಗಿತ್ತು. ಎಲ್ಲೆಡೆ ಮಹಿಳೆಯರು ರಂಗೋಲಿ ಬಿಡಿಸಿ, ಮಕ್ಕಳು ರಾಷ್ಟ್ರನಾಯಕರ ವೇಷಭೂಷಣ ಧರಿಸಿ ಗಮನ ಸೆಳೆದರು. ಪಟ್ಟಣದ ಮುಖ್ಯ ರಸ್ತೆಯಲ್ಲಿ ಪಥ ಸಂಚಲನ ಸಾಗುತ್ತಿದ್ದಾಗ, ಜನರು ಹೂವು ಎರಚಿ ದೇಶಭಕ್ತಿ ಘೋಷಣೆ ಕೂಗಿದರು.ಹಿಂದು ಎನ್ನುವುದು ಬದುಕುವ ವಿಧಾನ
ಲಕ್ಷ್ಮೇಶ್ವರ: ಹಿಂದೂ ಧರ್ಮದ ಮೇಲೆ ವಿದೇಶಿ ಶಕ್ತಿಗಳು ನಿರಂತರವಾಗಿ ದಾಳಿ ನಡೆಸುತ್ತಿವೆ. ಹಿಂದೂ ಧರ್ಮದ ಶ್ರದ್ಧಾ ಕೇಂದ್ರಗಳನ್ನು ಗುರಿಯಾಗಿಸಿ ನಡೆಸುತ್ತಿರುವ ಕುತಂತ್ರಗಳಿಂದ ಎಚ್ಚರವಾಗಿರೇಕು ಎಂದು ಆರ್‌ಎಸ್‌ಎಸ್‌ನ ಬೌದ್ಧಿಕ ಸಂಚಾಲಕ ಗುರುರಾಜ ಕುಲಕರ್ಣಿ ತಿಳಿಸಿದರು.ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಶಾಲೆಯ ಆವರಣದಲ್ಲಿ ಆರ್‌ಎಸ್‌ಎಸ್‌ನ ಶತಮಾನೋತ್ಸವದ ಅಂಗವಾಗಿ ನಡೆದ ಪಥಸಂಚಲಚದ ನಂತರದ ಬೌದ್ಧಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.ಹಿಂದೂ ಎನ್ನುವುದು ಜಾತಿಯಲ್ಲ. ಹಿಂದೂ ಎನ್ನುವುದು ಬದುಕುವ ಒಂದು ವಿಧಾನವಾಗಿದೆ. ಧರ್ಮ ಎನ್ನುವುದು ಎಲ್ಲರಿಗೂ ಬೇಕಾಗಿದೆ. ಮೌಲ್ಯಗಳನ್ನು ಧರ್ಮ ಎಂದು ಕರೆಯುತ್ತಾರೆ. ಮೌಲ್ಯಗಳ ಆಧಾರದ ಮೇಲೆ ಜಗತ್ತು ಸಾಗುತ್ತಿದೆ. ಕರ್ತವ್ಯಗಳನ್ನು ಧರ್ಮ ಎಂದು ಕರೆಯುತ್ತಾರೆ. ಧರ್ಮ ಎನ್ನುವುದು ಎಲ್ಲರಿಗೂ ಬೇಕಾದ ಹಾಗೂ ಭಗವಂತನನ್ನು ಕಾಣುವ ವಿಧಾನವೇ ಧರ್ಮವಾಗಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಗಂಜಿಗಟ್ಟಿಯ ವೈಜನಾಥ ಶಿವಲಿಂಗ ಸ್ವಾಮಿಗಳು ಮಾತನಾಡಿ, ನಮ್ಮ ಸಂಸ್ಕೃತಿ ಉಳಿಸುವ ಕುಟುಂಬ ಮೌಲ್ಯ ಹೆಚ್ಚಿಸುವ ಕಾರ್ಯ ಮಾಡಬೇಕು. ದೇಶದ ಸಮಗ್ರತೆಗೆ ಒತ್ತು ನೀಡುವ ಕಾರ್ಯ ಆರ್‌ಎಸ್‌ಎಸ್ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.ಈ ವೇಳೆ ಜಿಲ್ಲೆಯ ವರ್ತಕರ ಸಂಘ ಕೊಡಮಾಡುವ ಶ್ರೇಷ್ಠ ವಾಣಿಜ್ಯೋದ್ಯಮಿ ಪುರಸ್ಕೃತ ಜೀವಂಧರ ಗೋಗಿ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಗಜಾನನ ಹೆಗಡೆ ಸ್ವಾಗತಿಸಿದರು. ಮಲ್ಲಿಕಾರ್ಜುನ ಹೂಗಾರ ಪ್ರಾರ್ಥಿಸಿದರು. ಚಂದ್ರು ಹಂಪಣ್ಣವರ ವಂದಿಸಿದರು.