ದೇಶ, ಧರ್ಮ ರಕ್ಷಣೆ ಮಾಡುವುದೇ ಆರ್‌ಎಸ್‌ಎಸ್‌ ಧ್ಯೇಯ: ಲೋಹಿತಾಶ್ವ ಕೇದಿಗೆರೆ

| Published : Oct 28 2025, 12:03 AM IST

ದೇಶ, ಧರ್ಮ ರಕ್ಷಣೆ ಮಾಡುವುದೇ ಆರ್‌ಎಸ್‌ಎಸ್‌ ಧ್ಯೇಯ: ಲೋಹಿತಾಶ್ವ ಕೇದಿಗೆರೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ರಕ್ಷಣೆ ಮತ್ತು ಧರ್ಮ ಸಂರಕ್ಷಣೆ ಆರ್‌ಎಸ್‌ಎಸ್ ಮೂಲ ಧ್ಯೇಯವಾಗಿದೆ. ದೇಶ ಮತ್ತು ಭಾರತಾಂಭೆಯನ್ನು ಪೂಜಿಸುವ ಹಾಗೂ ಗೌರವಿಸುವ ಪ್ರತಿಯೊಬ್ಬರೂ ಹಿಂದೂಗಳೇ ಆಗಿದ್ದಾರೆ ಎಂದು ಆರ್‌ಎಸ್‌ಎಸ್ ಶಿವಮೊಗ್ಗ ವಿಭಾಗ ವ್ಯವಸ್ಥೆ ಪ್ರಮುಖ ಲೋಹಿತಾಶ್ವ ಕೇದಿಗೆರೆ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ದೇಶದ ರಕ್ಷಣೆ ಮತ್ತು ಧರ್ಮ ಸಂರಕ್ಷಣೆ ಆರ್‌ಎಸ್‌ಎಸ್ ಮೂಲ ಧ್ಯೇಯವಾಗಿದೆ. ದೇಶ ಮತ್ತು ಭಾರತಾಂಭೆಯನ್ನು ಪೂಜಿಸುವ ಹಾಗೂ ಗೌರವಿಸುವ ಪ್ರತಿಯೊಬ್ಬರೂ ಹಿಂದೂಗಳೇ ಆಗಿದ್ದಾರೆ ಎಂದು ಆರ್‌ಎಸ್‌ಎಸ್ ಶಿವಮೊಗ್ಗ ವಿಭಾಗ ವ್ಯವಸ್ಥೆ ಪ್ರಮುಖ ಲೋಹಿತಾಶ್ವ ಕೇದಿಗೆರೆ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಶತಮಾನ ಪೂರೈಸಿದ ಹಾಗೂ ವಿಜಯದಶಮಿಯ ಹಿನ್ನೆಲೆಯಲ್ಲಿ ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಪಥಸಂಚಲನ ನಂತರ ಸಿದ್ದಾಪುರ ರಸ್ತೆಯ ಶ್ರೀ ಗಿರಿಜಾಶಂಕರ ಸಭಾ ಭವನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ದೇಶ ಭಕ್ತ ಸಂಘಟನೆಯ ಮೇಲೆ ಅನೇಕ ತೊಡಕುಗಳನ್ನು ತಂದರೂ ಸಂಘಕ್ಕೆ ಯಾವುದೇ ಹಿನ್ನೆಡೆಯಾಗಿಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಸಂಘದ ಕಾರ್ಯಚಟುವಟಿಗಳು ನಡೆದುಕೊಂಡು ಬಂದಿದೆ. ಕೆಲವರು ಸ್ವಾತಂತ್ರ÷್ಯಕ್ಕಾಗಿ ಆರ್‌ಎಸ್‌ಎಸ್ ಕೊಡುಗೆ ಏನು ಎಂದು ಪ್ರಶ್ನಿಸುತ್ತಾರೆ. ಅವರಿಗೆ ನೈಜ ಇತಿಹಾಸವನ್ನು ಹಾಗೂ ಸಂಘದ ಕಾರ್ಯಕರ್ತರು ಅನುಭವಿಸಿದ ಸೆರೆಮನೆ ವಾಸ ಮತ್ತು ತ್ಯಾಗ ಬಲಿದಾನದ ಬಗ್ಗೆ ಅರಿಯಬೇಕಿದೆ ಎಂದರು.

ದೇಶದಲ್ಲಿ ಕೋವಿಡ್ ವ್ಯಾಪಿಸಿದ ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನು ಲೆಕ್ಕಿಸದೇ ಸಂಘದ ಸ್ವಯಂ ಸೇವಕರು ಕಾರ್ಯನಿರ್ವಹಿಸಿದ್ದಾರೆ. ಮಾತ್ರವಲ್ಲದೇ, ಬರಗಾಲ, ಅತಿವೃಷ್ಟಿ ಮತ್ತು ಅನಾವೃಷ್ಟಿಗಳಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಂಘದ ಸ್ವಯಂಸೇವಕರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹವಾಮಾನದ ವೈಪರಿತ್ಯಕ್ಕೆ ನಮ್ಮಗಳ ಜೀವನ ಶೈಲಿಯ ಬದಲಾವಣೆಗಳು ಕಾರಣವಾಗಿದ್ದು, ಪರಿಸರ ರಕ್ಷಣೆಗೆ ಒತ್ತು ನೀಡುವ ಮೂಲಕ ಪರಿಸರ ಸ್ನೇಹಿಯಾಗಿ ಬದುಕುವುದನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು.

ಪಟ್ಟಣದ ಹೊಸಪೇಟೆ ಬಡಾವಣೆಯ ಸಿದ್ದಾಪುರ ರಸ್ತೆಯ ಶ್ರೀ ಗಿರಿಜಾಶಂಕರ ಸಭಾ ಭವನದಿಂದ ಆರಂಭವಾದ ಪಥಸಂಚಲನ ಶ್ರೀ ಬ್ರಹ್ಮರ್ಷಿ ನಾರಾಯಣಗುರು ವೃತ್ತ, ಶ್ರೀ ಸ್ವಾಮಿ ವಿವೇಕಾನಂದ ವೃತ್ತ, ಹೊಸಬಾಳೆ ರಸ್ತೆ, ಸಂಜೀವ ನಗರದ ಮೂಲಕ ಪುನಃ ಗಿರಿಜಾಶಂಕರ ಸಭಾಭವನ ತಲುಪಿತು. ಪ್ರಮುಖ ವೃತ್ತಗಳಲ್ಲಿ ಆರ್‌ಎಸ್‌ಎಸ್ ಬ್ಯಾನರ್, ಕೇಸರಿ ಧ್ವಜಗಳು ಹಾಗೂ ಬೃಹತ್ ಪ್ಲೆಕ್ಸ್‌ಗಳು ಆಕರ್ಷಣೆಯಾಗಿತ್ತು.

ಹೊಸಪೇಟೆ ಬಡಾವಣೆಯ ಮುಖ್ಯ ರಸ್ತೆಗಳು ಕೇಸರಿಮಯವಾಗಿದ್ದವು. ಸುಮಾರು ಒಂದು ಸಾವಿರಕ್ಕೂ ಅಧಿಕ ಗಣವೇಷಧಾರಿಗಳು ಪಾಲ್ಗೊಂಡಿದ್ದರು. ಪಥಸಂಚಲನ ಸಾಗುವ ಮಾರ್ಗದ ರಸ್ತೆಗಳಲ್ಲಿ ಮಹಿಳೆಯರು ರಂಗೋಲಿ ಬಿಡಿಸಿ, ಭಗವಾಧ್ವಜಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಮಳೆಯನ್ನೂ ಲೆಕ್ಕಿಸದೇ ಗಣವೇಷಧಾರಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆಯಿತು.

ಆರ್‌ಎಸ್‌ಎಸ್ ಜಿಲ್ಲಾ ಸಂಘಚಾಲಕ್ ಕೇಶವ ಸಂಪೇಕೈ, ತಾಲೂಕು ಸಂಘಚಾಲಕ್ ನಾಗರಾಜ ಗುತ್ತಿ ವೇದಿಕೆಯಲ್ಲಿದ್ದರು. ಸಂಘದ ಹಿರಿಯರಾದ ರಾಜಾರಾಮ್ ಹೊರಬೈಲುಕೊಪ್ಪ, ಅಚ್ಯುತರಾವ್ ಹರೀಶಿ, ಪ್ರಮುಖರಾದ ಎಚ್.ಎಸ್. ಮಂಜಪ್ಪ, ಪದ್ಮನಾಭ ಭಟ್, ಜಾನಕಪ್ಪ ಒಡೆಯರ್, ಸಿ.ಪಿ. ವೀರೇಶ್‌ಗೌಡ, ಡಾ. ಎಚ್.ಇ. ಜ್ಞಾನೇಶ್, ಈಶ್ವರ ಚನ್ನಪಟ್ಟಣ, ಸುಧಾಕರ ಭಾವೆ, ದೇವೇಂದ್ರಪ್ಪ ಚನ್ನಾಪುರ, ಬೆನವಪ್ಪ, ಸಂಜೀವ ಆಚಾರ್, ಮೋಹನ್ ಹಿರೇಶಕುನ, ವಿಹಿಂಪ, ಬಜರಂಗದಳ, ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಇದ್ದರು. ಸಂಘದ ತಾಲೂಕು ಕಾರ್ಯವಾಹ ಸೋಮಪ್ಪ ಕಾರೇಕೊಪ್ಪ ಸ್ವಾಗತಿಸಿ, ಮಹೇಶ ಗೋಖಲೆ ವಂದಿಸಿದರು.