ಸಾರಾಂಶ
ಶಿವಮೊಗ್ಗ : ವಿಧಾನಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್(69) ಸರ್ಕಾರದ ವಿರುದ್ಧ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೇಳೆ ಭಾನುವಾರ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು.
ಮೃತರು ಪತ್ನಿ, ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ. ಜಿ.ಪಂ.ಸದಸ್ಯರಾಗಿ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ, ಬಿಜೆಪಿಯ ವಿವಿಧ ಪ್ರಕೋಷ್ಠಗಳ ರಾಜ್ಯ ಸಂಚಾಲಕರಾಗಿ, ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಎಂ.ಬಿ.ಭಾನುಪ್ರಕಾಶ್ ಜಿಲ್ಲೆಯ ಪ್ರಬಲ ಬಿಜೆಪಿ ನಾಯಕರಾಗಿ ಗುರುತಿಸಿಕೊಂಡಿದ್ದರು.
ಶಿವಮೊಗ್ಗ ನಗರಕ್ಕೆ ಸಮೀಪದ ಸಂಸ್ಕೃತ ಗ್ರಾಮ ಎಂದೇ ಹೆಸರಾಗಿರುವ ಮತ್ತೂರು ಗ್ರಾಮದವರಾಗಿದ್ದ ಭಾನುಪ್ರಕಾಶ್ ಸಂಘ ಪರಿವಾರದ ಮೂಲಕ ಬೆಳೆದು ಬಿಜೆಪಿ ಸಂಘಟನೆಯಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದ್ದರು.
ಸರ್ಕಾರದ ವಿರುದ್ಧ ಪ್ರತಿಭಟನೆ: ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಿದ್ದನ್ನು ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಟಿ.ಶೀನಪ್ಪ ಶೆಟ್ಟಿ(ಗೋಪಿ ವೃತ್ತ) ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಶಾಸಕ ಚನ್ನಬಸಪ್ಪ ಸೇರಿ ಜಿಲ್ಲಾಮಟ್ಟದ ಹಿರಿಯ ಬಿಜೆಪಿ ನಾಯಕರು ಮತ್ತು ಮುಖಂಡರು ಪಾಲ್ಗೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಭಾನುಪ್ರಕಾಶ್ ಮಾತನಾಡಿ ರಾಜ್ಯ ಸರ್ಕಾರದ ನೀತಿ ಖಂಡಿಸಿದ್ದರು. ಪ್ರತಿಭಟನೆಯ ಕೊನೆಯಲ್ಲಿ ವಂದನಾರ್ಪಣೆ ಬಳಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಗಾಂಧೀಜಿಯವರಿಗೆ ಅಚ್ಚುಮೆಚ್ಚಿನ ಗೀತೆಯಾಗಿದ್ದ ‘ರಘುಪತಿ ರಾಘವ ರಾಜಾರಾಮ್’ ಭಜನೆ ಹೇಳಿಕೊಟ್ಟರು. ನಂತರ ಗೋವಿಂದ.. ಗೋವಿಂದ ಎನ್ನಲಾರಂಭಿಸಿದರು. ಈ ವೇಳೆ ತೀವ್ರ ಸುಸ್ತಾದಂತಾದ ಭಾನುಪ್ರಕಾಶ್ ಸಮೀಪದಲ್ಲೇ ಇದ್ದ ಕಾರಿನಲ್ಲಿ ಕೂರುವ ಯತ್ನದ ಭಾಗವಾಗಿ ಅತ್ತ ನಡೆದು ಕಾರಿನ ಬಾಗಿಲಿಗೆ ಕೈ ಹಾಕಿದರು. ಅಷ್ಟರಲ್ಲೇ ಅವರು ಕುಸಿದು ಬಿದ್ದರು.
ತಕ್ಷಣ ಅಲ್ಲಿದ್ದವರು ಭಾನುಪ್ರಕಾಶ್ ರನ್ನು ಸಮೀಪದ ಖಾಸಗಿ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ದುರು. ಆದರೆ ಪರೀಕ್ಷಿಸಿದ ವೈದ್ಯರು ಚಿಕಿತ್ಸೆ ನೀಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ತೀವ್ರ ಹೃದಯಾಘಾತದಿಂದ ಭಾನುಪ್ರಕಾಶ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ನಂತರ ಮೃತದೇಹವನ್ನು ಅವರ ಸ್ವಂತ ಊರಾದ ಮತ್ತೂರಿಗೆ ಕರೆದೊಯ್ಯಲಾಯಿತು. ಮತ್ತೂರಿನ ಅವರ ಮನೆಯಲ್ಲಿ ಕೆಲಕಾಲ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿತ್ತು. ಸಾವಿರಾರು ಜನ ಗ್ರಾಮಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು. ಚೆನ್ನೈನಲ್ಲಿ ಓದುತ್ತಿರುವ ಮೂರನೇ ಪುತ್ರ ಸಂಜೆ 8.30 ಸ ಸುಮಾರಿಗೆ ಆಗಮಿಸಿದ್ದು, ಆ ಬಳಿಕ ಮತ್ತೂರಿನ ತುಂಗಾನದಿ ದಂಡೆಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಸಲಾಯಿತು.
ಸಂತಾಪ: ಹಿರಿಯ ಬಿಜೆಪಿ ನಾಯಕ ಎಂ.ಬಿ.ಭಾನುಪ್ರಕಾಶ್ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಚನ್ನಬಸಪ್ಪ, ಎಂಎಲ್ಸಿ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ ಇತರರು ಸಂತಾಪ ಸೂಚಿಸಿದ್ದಾರೆ.