ಆರೆಸ್ಸೆಸ್‌ನಿಂದ ಸಾಮಾಜಿಕ ಸಾಮರಸ್ಯ ಮೂಡಿಸುವ ಕೆಲಸ

| Published : Oct 13 2025, 02:02 AM IST

ಸಾರಾಂಶ

ಪಥಸಂಚಲನೆ ಸಾಗುವ ಮಾರ್ಗದುದ್ದಕ್ಕೂ ಎರಡು ಬದಿಯಲ್ಲಿ ನಿಂತಿದ್ದ ಮಹಿಳೆಯರು ಗಣವೇಷಧಾರಿಗಳಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿ ಶುಭ ಕೋರಿದರು.

ಅಳ್ನಾವರ: ಪಟ್ಟಣದಲ್ಲಿ ಭಾನುವಾರ ಸಂಜೆ ಸಹಸ್ರಾರು ಸಂಖ್ಯೆಯ ಆರ್‌ಎಸ್‌ಎಸ್‌ ಗಣವೇಷಧಾರಿಗಳಿಂದ ಜರುಗಿದ ಆಕರ್ಷಣೀಯ ಪಥಸಂಚಲನ ಶತಮಾನದ ಸಂಘಟನೆಗೆ ಚೈತನ್ಯ ನೀಡುವ ಜತೆಗೆ ಜನರಲ್ಲಿ ಸಂಚಲನ ಮೂಡಿಸುವಂತಿತ್ತು.

ಅಳ್ನಾವರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪಥಸಂಚಲನ, ಅನ್ನಪೂರ್ಣಾ ಹಿರೇಮಠ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಮಾವೇಶಗೊಂಡು ಸಾರ್ವಜನಿಕರ ಸಭೆಯ ಮೂಲಕ ಮುಕ್ತಾಯಗೊಂಡಿತು.

ಪಥಸಂಚಲನೆ ಸಾಗುವ ಮಾರ್ಗದುದ್ದಕ್ಕೂ ಎರಡು ಬದಿಯಲ್ಲಿ ನಿಂತಿದ್ದ ಮಹಿಳೆಯರು ಗಣವೇಷಧಾರಿಗಳಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿಂದೂ ಜಾಗರಣ ವೇದಿಕೆಯ ಶ್ರೀಕಾಂತ ಹೊಸಕೆರೆ ಮಾತನಾಡಿ, ಭವಿಷ್ಯತ್ತಿನ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಪ್ರಾರಂಭಗೊಂಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ನಮ್ಮ ದೇಶ ನಮ್ಮ ಜನ ಎನ್ನುವ ಭಾವನೆಯನ್ನು ಮತ್ತು ಸಾಮಾಜಿಕ ಸಾಮರಸ್ಯ ಮೂಡಿಸುವ ಕೆಲಸ ಮಾಡುತ್ತದೆ ಎಂದರು.

ಮಾತೃಭೂಮಿ ಮತ್ತು ಧರ್ಮದ ಉಳಿವಿಗಾಗಿ ಹೋರಾಡುವ ಧ್ಯೇಯವನ್ನು ಸಂಘ ಹೊಂದಿದ್ದು, ಭಾರತವನ್ನು ಶಕ್ತಿಶಾಲಿ ರಾಷ್ಟ್ರವಾಗಿ ಮುನ್ನಡೆಸುವುದೇ ಸಂಘದ ಮೂಲ ಉದ್ದೇಶವೂ ಆಗಿದೆ. ಸ್ವಯಂ ಸೇವಕರು ಹಿಂದೂಗಳ ರಕ್ಷಣೆಗೆ ಸೈನಿಕರಿದ್ದಂತೆ, ಬಲಿಷ್ಠ ರಾಷ್ಟ್ರ ನಿರ್ಮಾಣ ನಮ್ಮೆಲ್ಲರ ಸಂಕಲ್ಪವಾಗಬೇಕು ಎಂದು ಶ್ರೀಕಾಂತ ಹೊಸಕೆರೆ ಹೇಳಿದರು.

ಛತ್ರಪತಿ ಶಿವಾಜಿ ಅರ್ಬನ್‌ ಕೋ ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಬಳಿರಾಮ ಅಳವಣಿ, ಆರ್‌ಎಸ್‌ಎಸ್ ಸಾಮಾಜಿಕ ಸೇವೆಯ ಮುಖಾಂತರ ಜನರ ಮನಸ್ಸಿನಲ್ಲಿ ಅಚ್ಚುಗೊಂಡಿದ್ದು, ಹಿಂದೂ ರಾಷ್ಟ್ರದ ನಿರ್ಮಾಣದಲ್ಲಿ ಮೂಂಚೂಣಿಯಲ್ಲಿದೆ ಎಂದರು.

ವಿಜಯದಶಮಿ ಹಬ್ಬದ ಮತ್ತು ಸಂಘಕ್ಕೆ ನೂರು ವರ್ಷ ಸಂದಿರುವ ಸಮಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಥ ಸಂಚಲನದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಬಸಯ್ಯ ಹಿರೇಮಠ, ಎಸ್.ಡಿ. ದೇಗಾಂವಿಮಠ, ಕಿರಣ ಪಾಟೀಲ ಕುಲಕರ್ಣಿ, ಕಲ್ಮೇಶ ಬೇಲೂರ ಭಾಗವಹಿಸಿದ್ದರು.