ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕೊಳ್ಳೇಗಾಲ ತಾಲೂಕಿನ ಪಾಳ್ಯ ಮತ್ತು ಹನೂರು ಕೃಷಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೃಷಿ ಅಧಿಕಾರಿಯೊಬ್ಬರು ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೇ ಇಲಾಖೆಯ 50 ಲಕ್ಷಕ್ಕೂ ಅಧಿಕ ಹಣವನ್ನು 8 ಕಂಪನಿಗಳಿಗೆ ತಪ್ಪಾಗಿ ಆರ್ಟಿಜಿಎಸ್ ಮೂಲಕ ಹಣ ಕಳುಹಿಸಿ ವಿವಾದಕ್ಕೀಡಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಲೆಕ್ಕ ಸಹಾಯಕರು ನಿರ್ವಹಿಸಬೇಕಾದ ಈ ಜವಾಬ್ದಾರಿಯನ್ನು ಸ್ವತಃ ಕೃಷಿ ಅಧಿಕಾರಿ ನಾಗೇಂದ್ರ ಅವರೇ ನಿರ್ವಹಿಸಿದ್ದು, ತಾವು ಕಳುಹಿಸಿರುವ 8 ಕಂಪನಿಗಳ
ಚೆಕ್ ಗಳಿಗೂ ಸಹ ತಾವೇ ಸಹಿ ಹಾಕಿ ಕರ್ತವ್ಯಲೋಪ ಎಸಗಿರುವುದು ಮಾತ್ರವಲ್ಲ, ಇಲಾಖೆ ಹಣ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆ ದುರ್ಬಳಕೆಯತಂತ್ರವೂ ಇದೆ ಎಂಬ ಗಂಬೀರ ಆರೋಪ ರೈತರಿಂದಲೇ ಕೇಳಿ ಬಂದಿದೆ.
ಅಷ್ಟಕ್ಕೂ ಏನಿದು ಕಥೆ? :8 ವಿವಿಧ ಕಂಪನಿಗಳಿಗೆ ಆರ್ ಟಿ ಜಿಎಸ್ ಅನ್ನು ಸ್ವತಃ ಚೆಕ್ ಗೆ ಸಹಿ ಮಾಡಿ ಎಒ ಅವರೇ ಸೆ. 21ರ ಶನಿವಾರದಂದು 50, 47, 541 ರು.ಗಳನ್ನು ತಪ್ಪಾಗಿ ಕಳುಹಿಸಿದ್ದಾರೆ, ಮಾತ್ರವಲ್ಲ 9 ಕಂಪನಿಗಳಿಗೂ ಸಹ ನಿಗಧಿಯಂತೆ ಕಳುಹಿಸಬೇಕಾದ ಹಣ ಸಮರ್ಪಕ ರೀತಿಯಾಗಿಲ್ಲ, ಹೆಚ್ಚು ಮತ್ತು ಕಡಿಮೆ ಅಂದಾಜಿನಲ್ಲಿ ಕಳುಹಿಸುವ ಮೂಲಕ ಲೋಪವೆಸಗಿ ದಾಖಲೆ ಮೂಲಕ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗಿದೆ. ವಿವಿಧ ಬಿತ್ತನೆ ಬೀಜಗಳಾದ ನೆಲಗಡಲೆ, ಜೋಳ, ರಾಗಿ ಇತರೆ ಔಷಧಿಗಳನ್ನು ರೈತರ ಉಪಯೋಗಕ್ಕಾಗಿ ಮೇ ತಿಂಗಳಲ್ಲಿ 9 ಕಂಪನಿಗಳು ಪೂರೈಸಿದ್ದವು. ಅದರ ಮೊತ್ತ ಅಂದಾಜು 50.47 ಲಕ್ಷ ರು.ಗಳು. ಕಾವೇರಿ ಕಂಪನಿಗೆ 17. 39 ಲಕ್ಷಕ್ಕೂ ಅಧಿಕ ಮೊತ್ತ ಕಳುಹಿಸಬೇಕಾಗಿತ್ತು. ಆದರೆ ಕಳಿಸಿದ್ದು 17, 00, 037ರು.ಗಳು. ಇನ್ನು ಸಹ ಈ ಕಂಪನಿಗೆ 39 ಸಾವಿರ ರು.ಹಣ ಪಾವತಿಯಾಗಬೇಕಿದೆ. ಅದರಂತೆ ಅಡ್ವಾಂಟಾ ಕಂಪನಿಗೆ 16,22, 868 ರು. ಕಳುಹಿಸಬೇಕಿತ್ತು, ಆದರೆ ಕಳುಹಿಸಿರುವುದು 8, 88, 623ರು.ಗಳನ್ನು ಮಾತ್ರ. ಇನ್ನು 7ಲಕ್ಷ ರು.ಗಳಿಗೂ ಅಧಿಕ ಹಣವನ್ನು ಈ ಕಂಪನಿಗೆ ಕಳುಹಿಸಬೇಕಿದೆ. ಉಳಿದಂತೆ ಸಿಪಿಸಿಡ್ ಕಂಪನಿಗೆ 3,0,7000 ಕ್ಕೂ ಅಧಿಕ ಮೊತ್ತ ಕಳಿಸಬೇಕಿತ್ತು. ಆದರೆ 3,00,218 ರು.ಗಳನ್ನು ಕಳುಹಿಸಲಾಗಿದ್ದು ಇಲ್ಲೂ ವ್ಯತ್ಯಾಸ ಮಾಡಲಾಗಿದೆ. ಗಂಗಾ ಕಾವೇರಿ ಕಂಪನಿಗೆ ಕಳುಹಿಸಬೇಕಾದ್ದು 3,22,000 ರು.ಗಳನ್ನು, ಆದರೆ ಕಳುಹಿಸಿರುವುದು 5, 42, 458 ರು.ಗಳನ್ನು, ಇಲ್ಲೂ ಸಹ ಅದ್ವಾನ ಎಸಗಲಾಗಿದ್ದು ಇಲಾಖೆಯ 2,20,000 ಗಳನ್ನು ಹೆಚ್ಚುವರಿ ಕಳುಹಿಸಿ ಲೋಪ ವೆಸಗಿರುವುದು ಸಾಬೀತಾಗಿದೆ. ವರದಾ ಆಗ್ರೋ ಕಂಪನಿಗೆ 92,000 ಕಳುಹಿಸಬೇಕಿತ್ತು. ಆದರೆ, 2 ಲಕ್ಷಕ್ಕೂ ಅಧಿಕ ಹಣವನ್ನು ಆರ್ ಟಿ ಜಿ ಎಸ್ ಮಾಡಿದ್ದು ಬ್ಯಾಂಕ್ ದಾಖಲೆಗಳ ಮೂಲಕವೇ ಬೆಳಕಿಗೆ ಬಂದಿದೆ. ಕೆ ಎಸ್ ಎಸ್ಸಿ ಕಂಪನಿಗೆ ಮಾತ್ರ 4 ,00, 994 ಸಾವಿರ ರು.ಗಳನ್ನು ಸರಿಯಾದ ರೀತಿ ಸಂದಾಯ ಮಾಡಲಾಗಿದೆ, ಉಳಿದಂತೆ ಮೈಸೂರಿನ ಎನ್‌ಎಸ್ಸಿ ಕಂಪನಿಗೆ 1, 93,765 ರು.ಗಳನ್ನು ಕಳುಹಿಸಿದ್ದು ಇದು ಸಹ ಹೆಚ್ಚುವರಿ ಸಂದಾಯ ಎನ್ನಲಾಗಿದೆ. ಕರ್ನಾಟಕ ಆಯಲ್ ಸೀಡ್ ಕಂಪನಿಗೆ 1, 75,000 ರು.ಗೂ ಅಧಿಕ ಹಣ ಕಳುಹಿಸಬೇಕಿತ್ತು, ಆದರೆ 44, 696 ರು.ಗಳನ್ನು ಕಳುಹಿಸುವ ಮೂಲಕ ಇಲ್ಲೂ 1,30,000 ರು.ಗಳ ಕಡಿಮೆ ಸಂದಾಯಮಾಡಿ ಇಲಾಖೆಯ ಹಣ ವ್ಯತ್ಯಾಸಕ್ಕೆ ಕಾರಣರಾಗಿದ್ದಾರೆ, ನಂತರ ಹಿರಿಯ ಅಧಿಕಾರಿಗಳ ಗಮನಕ್ಕೂ ಈ ವಿಚಾರವನ್ನು ತಂದಿಲ್ಲ ಎನ್ನಲಾಗಿದೆ.
ನಿಯಮ ಉಲ್ಲಂಘಿಸಿ ಎಡಿಎ ಮತ್ತು ಎಇ ಖಾತೆಗೂ 88,000 ಆರ್ ಟಿ ಜಿ ಎಸ್ ಆಗಿದ್ದು ಇದು ಪಾರದರ್ಶಕವೇ ಎಂದು ತನಿಖೆಯಿಂದ ದೃಢಪಡಬೇಕಿದೆ. ಡೇ ಬುಕ್ ನಲ್ಲಿ ತಮ್ಮ ಲೋಪ ಬೆಳಕಿಗೆ ಬರುತ್ತಿದ್ದಂತೆ ಹೊಸ ಪುಸ್ತಕ ಇರಿಸಿ ತಿದ್ದುಪಡಿ ಮಾಡಿಸಿರುವ ವಿಚಾರವೂ ಬೆಳಕಿಗೆ ಬಂದಿದ್ದುಕೆಲ ಕಂಪನಿಗಳ ಸಿಬ್ಬಂದಿ ನಮ್ಮ ಕಂಪನಿಗೆ ಹೆಚ್ಚು ಹಣ, ಮತ್ತು ಕಡಿಮೆ ಹಣವನ್ನು ಎಇ ಅವರೇ ಕಳುಹಿಸಿ ನಂತರ ಕರೆ ಮಾಡಿ ವಾಪಸ್ಸು ತರಿಸಿಕೊಂಡಿದ್ದಾರೆ ಎಂಬ ಮಾತುಗಳನ್ನಾಡಿರುವ ಕುರಿತು ಆಡಿಯೋ ಕೂಡ ವೈರಲ್ ಆಗಿದೆ.
ಇದಲ್ಲದೆ ಗೋದಾಮಿನಲ್ಲಿರುವ ಹಳೆ ದಾಸ್ತಾನಿಗೆ 1 ಲಕ್ಷಕ್ಕೂ ಅಧಿಕ ಹಣವನ್ನು ಹಾಲಿ ಅಕೌಂಟೆಂಟ್ ಕೈನಲ್ಲಿ ಭರಿಸಿ ನಂತರ ಅವರಿಗೆ ಹಣ ನೀಡದೆಸತಾಯಿಸಿರುವ ಕುರಿತು ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಇದಕ್ಕೆ ಅಧಿಕಾರಿಗಳೇ ಉತ್ತರಿಸಬೇಕಿದೆ.
--------‘50 ಲಕ್ಷ ರು.ಗಳನ್ನು ತಪ್ಪಾಗಿ ಆರ್ ಟಿ ಜಿ ಎಸ್ ಮಾಡಿರುವ ಕ್ರಮ ಸರಿಯಲ್ಲ, ಇದು ನನ್ನ ಗಮನಕ್ಕೆ ಬಂದಿಲ್ಲ, ಹಾಗೇನಾದರೂ ಆಗಿದ್ದರೆ ಅದು ಅಕ್ಷಮ್ಯ ಅಪರಾಧ , ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವೆ, ನಮ್ಮ ಇಲಾಖೆ ಸಿಬ್ಬಂದಿ ಕುರ್ಚಿಯಲ್ಲಿ ಯಾರೂ ಕೂರುವಂತಿಲ್ಲ, ಈ ಸಂಬಂಧ ದಾಖಲೆಗಳು ಲಭ್ಯವಾದರೆ ಕ್ರಮವಹಿಸುವೆ.’
- ಅಬೀದ್, ಜಂಟಿ ನಿರ್ದೇಶಕರು, ಕೖಷಿ ಇಲಾಖೆ