ಕೆಸರು ಗದ್ದೆಯಂತಾದ ಆರ್‌ಟಿಒ ಕಚೇರಿ ರಸ್ತೆ!

| Published : Oct 21 2024, 12:37 AM IST

ಸಾರಾಂಶ

ಸುರಕ್ಷಿತವಾಗಿ ಕಚೇರಿ ತಲುಪಿದರೆ ಅದು ಸಾಹಸವೇ ಸರಿ ಎನ್ನುವಂತಹ ಸ್ಥಿತಿ ನಿರ್ಮಾಣ

ಮಹೇಶ ಛಬ್ಬಿ ಗದಗ

ತಾಲೂಕಿನ ಕಳಸಾಪೂರ ಗ್ರಾಪಂ ವ್ಯಾಪ್ತಿಯ ಸರಹದ್ದಿಗೆ ಹೊಂದಿಕೊಂಡಿರುವ ಗದಗ ನಗರ ಪ್ರದೇಶದಿಂದ ದೂರವಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ತೆರಳುವ ರಸ್ತೆ ಹಲವಾರು ತಿಂಗಳಿಂದ ಸಂಪೂರ್ಣ ಹದಗೆಟ್ಟಿದ್ದು, ಸದ್ಯ ನಿರಂತರ ಸುರಿಯುತ್ತಿರುವ ಮಳೆಯಿಂದ ಮತ್ತಷ್ಟು ಹದಗೆಟ್ಟು ಕೆಸರು ಗದ್ದೆಯಂತಾಗಿದೆ.

ವಾಹನಗಳ ನೋಂದಣಿ, ಚಾಲನಾ ಪರವಾನಗಿ (ಲೈಸೆನ್ಸ್‌) ಸೇರಿದಂತೆ ವಾಹನಗಳಿಗೆ ಸಂಬಂಧಿಸಿದಂತೆ ನಿತ್ಯ ಜಿಲ್ಲೆಯ ಸಾವಿರಾರು ಜನರು ಆರ್‌.ಟಿ.ಓ ಕಚೇರಿಗೆ ಬರುತ್ತಾರೆ. ಆದರೆ ಕಚೇರಿಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಈ ಹದಗೆಟ್ಟ ರಸ್ತೆಯಲ್ಲಿ ಸುರಕ್ಷಿತವಾಗಿ ಕಚೇರಿ ತಲುಪಿದರೆ ಅದು ಸಾಹಸವೇ ಸರಿ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.

ವಾಹನ ಚಾಲನಾ ನಿಯಮ ಉಲ್ಲಂಘನೆ, ದಾಖಲಾತಿ ಸೇರಿದಂತೆ ಇನ್ನಿತರ ಕಾರಣಗಳಿಂದ ವಾಹನ ಚಾಲಕರಿಗೆ ದಂಡ ವಿಧಿಸುವ ಆರ್.ಟಿ.ಓ ಅಧಿಕಾರಿಗಳು, ತಮ್ಮ ಕಚೇರಿಗೆ ತೆರಳುವ ರಸ್ತೆ ದುಸ್ಥಿತಿ ಬಗ್ಗೆ ಅವರ ಗಮನಕ್ಕೆ ಬಂದಿಲ್ಲವೇ..? ಈ ಯಮಸ್ವರೂಪಿ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಹೋಗುವಂತಹ ಸ್ಥಿತಿ ಇದೆ. ಸ್ವಲ್ಪ ಯಾಮಾರಿದರೂ ಕೈ ಕಾಲು ಮುರಿದುಕೊಳ್ಳುವದಂತು ಗ್ಯಾರಂಟಿ, ದಿನ ನಿತ್ಯ ಆರ್.ಟಿ.ಓ ಕಚೇರಿಗೆ ತೆರಳುವ ನೂರಾರು ಸಾರ್ವಜನಿಕರ ಗೋಳು ಕೇಳುವರೇ ಇಲ್ಲದಂತಾಗಿದೆ.

ಅಭಿವೃದ್ಧಿ ಕಾಣದ ಆರ್‌.ಟಿ.ಓ ರಸ್ತೆ:ಗದಗ ಹೊರವಲಯದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣದಿಂದ ಈ ವರೆಗೂ ಕಚೇರಿಗೆ ತೆರಳುವ ರಸ್ತೆ ಅಭಿವೃದ್ಧಿ ಆಗಿದೆಯೋ ಇಲ್ಲವೋ ಎಂಬಂತಿದೆ. ರಸ್ತೆಗೆ ಹಾಕಿದ ಡಾಂಬರ್‌ ಸಂಪೂರ್ಣ ಕಿತ್ತು ಹೋಗಿದ್ದು, ಜಲ್ಲಿ ಕಲ್ಲು ಮೇಲೆದ್ದೀವೆ ಈ ರಸ್ತೆಯಲ್ಲಿ ಬೈಕ್‌ ಸವಾರರಂತು ಉಸಿರು ಬಿಗಿ ಹಿಡಿದು ಸಂಚರಿಸಬೇಕು, ಭಾರಿ ಗಾತ್ರದ ವಾಹನಗಳು ಸಂಚರಿಸುವಾಗ ವಾಹನದ ಚಕ್ರಕ್ಕೆ ಕಲ್ಲುಗಳು ಜಿಗಿದು ಬೀಳುತ್ತವೆ. ಆ ಸಮಯದಲ್ಲಿ ರಸ್ತೆಯಲ್ಲಿ ಯಾರಾದರೂ ನಡೆದುಕೊಂಡು ಹೋಗುತ್ತಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ನಿತ್ಯ ಸಾವಿರಾರು ಜನ ವಾಹನಗಳ ಕುರಿತು ತೆರಳುವ ಆರ್‌.ಟಿ.ಒ ಕಚೇರಿ ರಸ್ತೆಯ ಸ್ಥಿತಿ ಬಗ್ಗೆ ಜನಪ್ರತಿನಿಧಿ, ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ. ಗಮನಕ್ಕೆ ಬಂದರೂ ಅವರ ನಿರ್ಲಕ್ಷ್ಯವೇ ಅಥವಾ ಈ ರಸ್ತೆ ಹಣೆಬರವೇ ಇಷ್ಟೇ ಎನ್ನುವಂತಾಗಿದೆ ಎನ್ನುತ್ತಾರೆ ಸಾರ್ವಜನಿಕರು.