ಸಾರಾಂಶ
ಎಲ್ಲ ಕಾರ್ಯಕ್ರಮಗಳು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ, ಮಠಾಧೀಶರ ಸಮ್ಮುಖದಲ್ಲಿ ನೆರವೇರುತ್ತವೆ
ಕನ್ನಡಪ್ರಭ ವಾರ್ತೆ ಮೈಸೂರು
ಸುತ್ತೂರು ಶ್ರೀ ವೀರಸಿಂಹಾಸನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1065ನೇ ಜಯಂತಿಯನ್ನು ಶ್ರೀ ಸುತ್ತೂರು ಕ್ಷೇತ್ರದಲ್ಲಿ ಡಿ. 29 ಭಾನುವಾರ ಆಚರಿಸಲಾಗುತ್ತದೆ.ಎಲ್ಲ ಕಾರ್ಯಕ್ರಮಗಳು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ, ಮಠಾಧೀಶರ ಸಮ್ಮುಖದಲ್ಲಿ ನೆರವೇರುತ್ತವೆ.
ಪ್ರಾತಃಕಾಲ 3ಕ್ಕೆ ಕರ್ತೃಗದ್ದುಗೆಯಲ್ಲಿ ರುದ್ರಾಭಿಷೇಕ, ಸಹಸ್ರನಾಮಾವಳಿ, ಶಿವಾಷ್ಟೋತ್ತರ, ಶಿವರಾತ್ರೀಶ್ವರ ಅಷ್ಟೋತ್ತರ, ಆದಿ ಜಗದ್ಗುರುಗಳವರ ಉತ್ಸವಮೂರ್ತಿಗೆ ಷೋಡಶೋಪಚಾರ, ಮಹಾಮಂಗಳಾರತಿ ಹಾಗೂ ಪ್ರಾಕಾರೋತ್ಸವ ಇತ್ಯಾದಿ ವಿಶೇಷ ಪೂಜೆಗಳು ನೆರವೇರುತ್ತವೆ. ಬೆಳಗ್ಗೆ 5ಕ್ಕೆ ಶಿವದೀಕ್ಷೆ-ಲಿಂಗದೀಕ್ಷೆ ಸಂಸ್ಕಾರ ನೀಡಲಾಗುತ್ತದೆ. 8ಕ್ಕೆ ಉತ್ಸವಮೂರ್ತಿಯನ್ನು ಶ್ರೀಮಠಕ್ಕೆ ಬಿಜಯಂಗೈಸಲಾಗುತ್ತದೆ. 9.30ಕ್ಕೆ ಬೆಳ್ಳಿ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿ ಶ್ರೀಮಠವನ್ನು ತಲುಪುತ್ತದೆ. 10ಕ್ಕೆ ಜೆಎಸ್‌ಎಸ್ ಲಲಿತಕಲಾ ವೃಂದ, ಸುತ್ತೂರಿನ ಜೆಎಸ್‌ಎಸ್ ವಸತಿ ಶಾಲೆಯ ಸಂಗೀತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಗಾಯನ ಏರ್ಪಡಿಸಿದೆ. ಬೆಳಗ್ಗೆ 10.30ಕ್ಕೆ ಜ್ಯೋತಿಷ್ಯ ಮಹಾಮಹೋಪಾಧ್ಯಾಯ ಸಿದ್ಧಾಂತಿ ಡಾ. ಕೆ.ಜಿ. ಪುಟ್ಟಹೊನ್ನಯ್ಯನವರು ಸಿದ್ಧಪಡಿಸಿ, ಭಾರತೀಯ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರದಿಂದ ಪ್ರಕಟಿಸಿರುವ ಶ್ರೀ ವಿಶ್ವಾವಸುನಾಮ ಸಂವತ್ಸರದ ಸುತ್ತೂರು ಶ್ರೀ ಶಿವರಾತ್ರೀಶ್ವರ ಪಂಚಾಂಗ ಮತ್ತು ಜೆಎಸ್‌ಎಸ್ ಮಹಾವಿದ್ಯಾಪೀಠದ ಹೊಸ ವರ್ಷದ ಕನ್ನಡ ಮತ್ತು ಇಂಗ್ಲಿಷ್ ಟೇಬಲ್ ಕ್ಯಾಲೆಂಡರ್ ಗಳನ್ನು ಬಿಡುಗಡೆ ಮಾಡಲಾಗುವುದು. 11ಕ್ಕೆ ವಿವಿಧ ಪ್ರಶಸ್ತಿ ಪುರಸ್ಕೃತ 39 ಗಣ್ಯರನ್ನು ಅಭಿನಂದಿಸಲಾಗುವುದು. ಶಿವದೀಕ್ಷೆ-ಲಿಂಗದೀಕ್ಷೆ ಪಡೆಯಬಯಸುವವರು ಡಿ. 28ರ ಶನಿವಾರ ಸಂಜೆ ಶ್ರೀಕ್ಷೇತ್ರಕ್ಕೆ ಬಂದು ಹೆಸರು ನೋಂದಾಯಿಸಿಕೊಳ್ಳಬೇಕು.ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಶ್ರೀಗುರು ಕೃಪೆಗೆ ಪಾತ್ರರಾಗಬೇಕಾಗಿ ಕೋರಿದೆ.