ಸಾರಾಂಶ
ಕನ್ನಡಪ್ರಭ ವಾರ್ತೆ ಖಾನಾಪುರ
ತಾಲೂಕಿನ ಅರಣ್ಯಪ್ರದೇಶದಲ್ಲಿ ಬುಧವಾರ ರಾತ್ರಿಯಿಂದ ಸುರಿಯುತ್ತಿರುವ ಸತತ ಧಾರೆಯಿಂದಾಗಿ ಗುಂಜಿ, ಲೋಂಡಾ, ಹೆಮ್ಮಡಗಾ, ನೇರಸೆ, ನೀಲಾವಡೆ, ಜಾಂಬೋಟಿ ಮತ್ತು ಕಣಕುಂಬಿ ಅರಣ್ಯಪ್ರದೇಶದ ಕಾಡಿನ ವಾಸಿಗಳ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾಡಂಚಿನ 30ಕ್ಕೂ ಅಧಿಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆಗಳ ಮೇಲೆ ನೀರು ಹರಿಯುತ್ತಿರುವ ಕಾರಣ ತಾಲೂಕಿನ ಹಲವು ಗ್ರಾಮಗಳು ಮುಖ್ಯ ವಾಹಿನಿಯಿಂದ ಸಂಪರ್ಕ ಕಡಿದುಕೊಂಡು ನಡುಗಡ್ಡೆಯಾಗಿವೆ.ಅರಣ್ಯ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ ಹಬ್ಬನಹಟ್ಟಿಯ ಆಂಜನೇಯ ದೇವಸ್ಥಾನ ಮತ್ತು ಇಟಗಿಯ ಮರುಳಶಂಕರ ದೇವಸ್ಥಾನಗಳು ಮಲಪ್ರಭಾ ನದಿಯಲ್ಲಿ ಸಂಪೂರ್ಣ ಮುಳುಗಿವೆ. ಅರಣ್ಯ ಪ್ರದೇಶದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿರುವುದರಿಂದ ಸಂಪರ್ಕ ಸೇತುವೆಗಳ ಮೇಲೆ ನೀರು ಹರಿಯುತ್ತಿದೆ. ಸತತ ಮಳೆಯಿಂದಾಗಿ ಮಲಪ್ರಭಾ, ಮಹದಾಯಿ, ಪಾಂಢರಿ ನದಿಗಳು ಮತ್ತು ಅಲಾತ್ರಿ, ಕಳಸಾ-ಬಂಡೂರಿ, ಮಂಗೇತ್ರಿ, ವಜ್ರಾ, ಪಣಸೂರಿ, ಕುಂಬಾರ, ತಟ್ಟಿ, ಕೋಟ್ನಿ, ಬೈಲ್, ನಿಟ್ಟೂರ, ಕುಂಬಾರ ಮತ್ತಿತರ ಹಳ್ಳಗಳಲ್ಲಿ ಪ್ರವಾಹ ಏರ್ಪಟ್ಟಿದೆ. ಸೇತುವೆಗಳು ಜಲಾವೃತ:
ನೀಲಾವಡೆ-ಮಳವ, ಚಿಕ್ಕಹಟ್ಟಿಹೊಳಿ-ಚಿಕ್ಕಮುನವಳ್ಳಿ, ಖಾನಾಪುರ-ಹೆಮ್ಮಡಗಾ, ಜಾಂಬೋಟಿ-ಮೋದೆಕೊಪ್ಪ, ಅಸೋಗಾ-ಭೋಸಗಾಳಿ, ತೋರಾಳಿ-ಹಬ್ಬನಹಟ್ಟಿ, ಅಮಟೆ-ಗೋಲ್ಯಾಳಿ, ದೇಗಾಂವ-ಹೆಮ್ಮಡಗಾ, ಅಬನಾಳಿ-ಡೊಂಗರಗಾಂವ, ಶಿರೋಲಿ-ತಿವೋಲಿ, ಕುಪ್ಪಟಗಿರಿ-ಖಾನಾಪುರ, ಲೋಂಡಾ-ವರ್ಕಡ, ಕೌಲಾಪುರವಾಡಾ-ಮೋದೆಕೊಪ್ಪ, ಚಿಕಲೆ-ಪಾರವಾಡ, ಚಿಕಲೆ-ಅಮಗಾಂವ, ದೇಗಾಂವ-ಹೆಮ್ಮಡಗಾ, ಗವ್ವಾಳಿ-ನೇರಸಾ ಮಾರ್ಗಗಳಲ್ಲಿರುವ ನದಿ, ಹಳ್ಳ-ಕೊಳ್ಳಗಳ ಸೇತುವೆಗಳ ಮೇಲೆ ಹಲವು ಅಡಿಗಳಷ್ಟು ನೀರು ಹರಿದು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕಂದಾಯ ಇಲಾಖೆಯ ಮೂಲಗಳ ಪ್ರಕಾರ ಗುರುವಾರ ಕಣಕುಂಬಿ ಸುತ್ತಮುತ್ತ 11.8 ಸೆಂ.ಮೀ ಮತ್ತು ಜಾಂಬೋಟಿ ಸುತ್ತಮುತ್ತ 12.4 ಸೆಂ.ಮೀ ಮಳೆಯಾಗಿದ್ದು, ಉಳಿದಂತೆ ತಾಲೂಕಿನಲ್ಲಿ ಸರಾಸರಿ 8 ಸೆಂ.ಮೀ ಮಳೆಯಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ ನದಿತೀರದ ಜನವಸತಿ ಪ್ರದೇಶಗಳ ಬಳಿ ನದಿಯ ನೀರು ನುಗ್ಗಿದ್ದು, ಮಧ್ಯಾಹ್ನದ ನಂತರ ತೆರವುಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ಆಡಳಿತ ಸಿಂಧನೂರು-ಹೆಮ್ಮಡಗಾ, ಜಾಂಬೋಟಿ-ಜತ್ತ ಹೆದ್ದಾರಿಗಳಲ್ಲಿ ಸಂಚಾರ ನಿರ್ಬಂಧಿಸಿ ಆದೇಶಿಸಿದೆ.ಭೂಕುಸಿತ: ಭಾರೀ ವಾಹನಗಳ ಸಂಚಾರ ಸ್ಥಗಿತ: ಬೆಳಗಾವಿಯಿಂದ ಜಾಂಬೋಟಿ, ಕಣಕುಂಬಿ, ಚೋರ್ಲಾ ಮಾರ್ಗವಾಗಿ ಗೋವಾ ರಾಜ್ಯದ ಪಣಜಿಯತ್ತ ಸಾಗುವ ಚೋರ್ಲಾ ಘಾಟ್ ಮಾರ್ಗದಲ್ಲಿ ಭೂಕುಸಿತ ಉಂಟಾಗಿದೆ. ಉತ್ತರ ಗೋವಾ ಜಿಲ್ಲೆಯ ಕೇರಿ ಎಂಬಲ್ಲಿ ಭೂ ಕುಸಿತ ಉಂಟಾಗಿದ್ದು, ರಸ್ತೆಯ ಒಂದು ಭಾಗದ ಕೆಳಗಿನ ಮಣ್ಣು ಕುಸಿದು ಕಂದಕ ನಿರ್ಮಾಣವಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಗೋವಾ ಪೊಲೀಸರು ಮತ್ತು ಅಧಿಕಾರಿಗಳು ಭೂಕುಸಿತವಾದ ರಸ್ತೆಯ ಅಕ್ಕಪಕ್ಕ ಬ್ಯಾರಿಕೇಡ್ ಅಳವಡಿಸಿದ್ದಾರೆ. ತಾತ್ಕಾಲಿಕವಾಗಿ ರಸ್ತೆಯ ಮತ್ತೊಂದು ಬದಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ರಸ್ತೆ ದುರಸ್ತಿ ಆಗುವವರೆಗೆ ಭಾರೀ ವಾಹನಗಳ ಸಂಚಾರಕ್ಕೆ ಗೋವಾ ಜಿಲ್ಲಾಧಿಕಾರಿಗಳು ನಿಷೇಧಿಸಿ ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಖಾನಾಪುರ ತಾಲೂಕಿನ ಲೋಂಡಾ ಅರಣ್ಯ ವ್ಯಾಪ್ತಿಯ ಸಾತನಾಳಿ ಮತ್ತು ಮಾಚಾಳಿ ಗ್ರಾಮಗಳಿಂದ ಲೋಂಡಾ ಗ್ರಾಮದತ್ತ ಸಾಗುವ ರಸ್ತೆಯಲ್ಲಿರುವ ಪಾಂಢರಿ ನದಿಯಲ್ಲಿ ಗುರುವಾರ ಮುಂಜಾನೆಯಿಂದ ಪ್ರವಾಹ ಉಂಟಾಗಿ ಸೇತುವೆಯ ಮೇಲೆ ನೀರು ಹರಿಯಲಾರಂಭಿಸಿದೆ. ಉಭಯ ಗ್ರಾಮಗಳಿಂದ ಲೋಂಡಾ ಗ್ರಾಮದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನಿತ್ಯ ಹತ್ತಾರು ವಿದ್ಯಾರ್ಥಿಗಳಿಗೆ ಹೋಗಿಬರುತ್ತಾರೆ. ಗುರುವಾರ ಅವರಿಗೆ ಶಾಲೆಯಲ್ಲಿ ಕಿರು ಪರೀಕ್ಷೆ ಇದ್ದ ಕಾರಣ ವಿದ್ಯಾರ್ಥಿಗಳ ಪಾಲಕರು ತಮ್ಮ ಮಕ್ಕಳನ್ನು ಹೆಗಲಮೇಲೆ ಹೊತ್ತುಕೊಂಡು ತುಂಬಿ ಹರಿಯುತ್ತಿರುವ ನದಿಯನ್ನು ದಾಟಿಸಿ ಮಕ್ಕಳನ್ನು ಶಾಲೆಗಳಿಗೆ ತಲುಪಿಸಿದ್ದಾರೆ. ಸ್ಥಳೀಯ ನಿವಾಸಿಯೊಬ್ಬರು ಪಾಲಕರ ಈ ಸಾಹಸವನ್ನು ಮತ್ತು ತಮ್ಮೂರಿನ ಜನರ ಬವಣೆಯನ್ನು ಚಿತ್ರೀಕರಿಸಿ ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್ ಮಾಡುವ ಮೂಲಕ ತಮ್ಮ ಸಮಸ್ಯೆ ಆಲಿಸದ ಜನಪ್ರತಿನಿಧಿಗಳು ಮತ್ತು ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿದ್ದಾರೆ.
ಶಾಲೆ, ಕಾಲೇಜುಗಳಿಗೆ ರಜೆ:ಸತತ ಮಳೆ ಸುರಿಯುತ್ತಿರುವುದರಿಂದ ಖಾನಾಪುರ ತಾಲೂಕಿನ ಅಂಗನವಾಡಿ, ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ಜು. 19 ಮತ್ತು 20 ರಂದು ಎರಡು ದಿನ ರಜೆ ಘೋಷಣೆ ಮಾಡಲಾಗಿದೆ.