ಸಾರಾಂಶ
ಕೃಷಿ ವಿಜ್ಞಾನ ಕೇಂದ್ರದ ಡಾ.ಓ.ಕುಮಾರ್ ಮಾಹಿತಿ । 2016ರ ತಮಿಳುನಾಡಲ್ಲಿ ಮೊದಲು ಪತ್ತೆ
ಕನ್ನಡಪ್ರಭ ವಾರ್ತೆ ಹಿರಿಯೂರು
ತೆಂಗು ಬೆಳೆಯಲ್ಲಿ ರೂಗೋಸ್ ಬಿಳಿ ನೊಣದ ಬಾಧೆ ಶುರುವಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಡಾ.ಓ.ಕುಮಾರ್, ಡಾ. ಎಸ್.ಓಂಕಾರಪ್ಪ, ಡಾ.ಟಿ ರುದ್ರಮುನಿ, ಡಾ.ಪಿ.ಎಸ್.ಮಹಾಂತೇಶ್ ತಿಳಿಸಿದ್ದಾರೆ.ರೂಗೋಸ್ ಬಿಳಿ ನೊಣವು ಮೊದಲ ಬಾರಿಗೆ 2016ರಲ್ಲಿ ತಮಿಳುನಾಡಿನ ಪೊಲ್ಲಾಚಿ ಪ್ರದೇಶದಲ್ಲಿ ಕಾಣಿಸಿಕೊಂಡಿರುತ್ತದೆ. ನಂತರ 2017 ರಲ್ಲಿ ಕರ್ನಾಟಕ, ಕೇರಳ, ಪಶ್ವಿಮಬಂಗಾಳ, ಗೋವಾ ಮತ್ತು ಅಸ್ಸಾಂ ರಾಜ್ಯಗಳಿಗೆ ಹರಡಿರುತ್ತದೆ. ಈ ಕೀಟವನ್ನು ಇಂಗ್ಲೀಷಿನಲ್ಲಿ ರೂಗೋಸ್ ಸ್ಪೈರಲಿಂಗ್ ವೈಟ್ ಫ್ಲೈ ಎಂದು ಕೀಟ ವಿಜ್ಞಾನಿಗಳು ನಾಮಕರಣ ಮಾಡಿದ್ದಾರೆ. ಇದಕ್ಕೆ ಕಾರಣ ಹೆಣ್ಣು ನೊಣವು ಮೊಟ್ಟೆಗಳನ್ನು ವೃತ್ತಾಕಾರದಲ್ಲಿ ಇಡುತ್ತದೆ. ಕೀಟವು ಗಾತ್ರದಲ್ಲಿ ಚಿಕ್ಕದಾಗಿದ್ದು ಪತಂಗವನ್ನು ಹೋಲುತ್ತದೆ. ಇದರ ರೆಕ್ಕೆಗಳು ಬಿಳಿ ಬಣ್ಣವಿದ್ದು ರೆಕ್ಕೆಗಳ ಮೇಲೆ ತಿಳಿ ಕಂದು ಬಣ್ಣದ ಪಟ್ಟಿ ಇರುತ್ತದೆ ಮತ್ತು ಬೇರೆ ಬೆಳೆಗಳಲ್ಲಿ ಕಂಡು ಬರುವ ಬಿಳಿ ನೊಣಗಳಿಗಿಂತ ಗಾತ್ರದಲ್ಲಿ ಮೂರು ಪಟ್ಟು ದೊಡ್ಡದಾಗಿರುತ್ತದೆ. ಮೊಟ್ಟೆಗಳನ್ನು ಗರಿಗಳ ಕೆಳಭಾಗದಲ್ಲಿ ಇಡುತ್ತದೆ, ಮೊಟ್ಟೆಗಳು ಹಳದಿ ಬಣ್ಣವಿದ್ದು ಮೊಟ್ಟೆಗಳ ಮೇಲೆ ಬಿಳಿ ಬಣ್ಣದ ಮೇಣವಿರುತ್ತದೆ. ಮೊಟ್ಟೆಯಿಂದ ಹೊರಬಂದ ಮರಿಗಳು ಐದು ಹಂತಗಳನ್ನು ಪೂರೈಸಿ ಪ್ರೌಢಾವಸ್ಥೆ ತಲುಪುತ್ತವೆ.
ಇದು ಒಂದು ರಸಹೀರುವ ಕೀಟವಾಗಿದ್ದು ಎಲ್ಲಾ ಹಂತಗಳ ಎಲೆಗಳ ಕೆಳಭಾಗದಲ್ಲಿದ್ದು ರಸ ಹೀರುತ್ತದೆ. ಇದರಿಂದ ಮೊದಲಿಗೆ ಗರಿಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಇದರ ಜೊತೆಗೆ ಈ ಕೀಟವು ಸಿಹಿಯಾದ ಅಂಟುದ್ರವವನ್ನು ಹೊರಹಾಕುತ್ತದೆ. ಈ ಅಂಟುದ್ರವದ ಮೇಲೆ ಕಪ್ಪು ಶಿಲೀಂಧ್ರ ಬೆಳೆದು ದ್ಯುತಿ ಸಂಶ್ಲೇಷಣೆ (ಆಹಾರ ತಯಾರಾಗುವ) ಕ್ರಿಯೆಗೆ ಅಡಚಣೆಯುಂಟಾಗಿ ಎಲೆಗಳು ಒಣಗುತ್ತವೆ. ಇದರ ಪರಿಣಾಮ ಕಾಯಿಗಳ ಗಾತ್ರ ಕಡಿಮೆಯಾಗುತ್ತದೆ, ಒಳಭಾಗದ ಕಾಯಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಒಟ್ಟಾರೆ ರೈತರಿಗೆ ಬೆಳೆಯ ಇಳುವರಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಸಸಿಗಳನ್ನು ನಾಟಿ ಮಾಡುವಾಗ ಬಿಳಿನೊಣದ ಬಾಧೆಯಿಂದ ಮುಕ್ತವಾಗಿರಬೇಕು.ಹೆಚ್ಚು ಒತ್ತಡದೊಂದಿಗೆ ನೀರನ್ನು ಎಲೆಗಳ ಕೆಳಭಾಗಕ್ಕೆ ಸಿಂಪರಣೆ ಮಾಡುವುದು. ಎಕರೆಗೆ 15 ರಂತೆ ಹಳದಿ ಬಣ್ಣದ ಅಂಟುಬಲೆಗಳನ್ನು ತೆಂಗಿನ ಮರಗಳ ಮಧ್ಯ ಎತ್ತರದಲ್ಲಿರುವಂತೆ ಹಾಕಬೇಕು. ಗಾಣದ ಬೇವಿನ ಎಣ್ಣೆಯನ್ನು ಪ್ರತಿ ಲೀಟರ್ ನೀರಿಗೆ 5 ಮಿ.ಲೀ ಮತ್ತು 1 ಮಿ.ಲೀ ಸೋಪಿನ ದ್ರಾವಣ ಬೆರೆಸಿ ಸಿಂಪಡಿಸಬೇಕು. ಇದನ್ನು 15 ದಿನಗಳ ಅಂತರದಲ್ಲಿ ಪುನರಾವರ್ತಿಸಬೇಕು.
ಕಪ್ಪು ಬಣ್ಣದ ಶಿಲೀಂಧ್ರದ ನಿಯಂತ್ರಣಕ್ಕಾಗಿ ಪ್ರತಿ ಲೀಟರ್ ನೀರಿಗೆ 5 ಗ್ರಾಂ ಮೈದಾಹಿಟ್ಟನ್ನು ಬೆರೆಸಿ ಸಿಂಪಡಿಸಬೇಕು. ಈ ಕೀಟಕ್ಕೆ ರೋಗತರುವ ಜೈವಿಕ ಶಿಲೀಂದ್ರನಾಶಕ ಐಸಾರಿಯಾ ಪುಮೊಸೊರೊಸಿಯಾ ಪ್ರತಿ ಲೀಟರ್ ನೀರಿಗೆ 5 ಮಿ.ಲೀ.ಅನ್ನು 5 ಗ್ರಾಂ ಸೋಪಿನೊಂದಿಗೆ ಬೆರೆಸಿ ಸಿಂಪರಣೆ ಮಾಡುವುದು ಮತ್ತು 15 ದಿನಗಳ ನಂತರ ಅವಶ್ಯಕತೆಯಿದ್ದಲ್ಲಿ ಪುನರಾವರ್ತಿಸಬೇಕು.ಎಕರೆಗೆ 1500 ಎನ್ಕಾರ್ಸಿಯಾ ಗ್ವಾಡೆಲೋಪೆ ಪರಾವಲಂಬಿ ಕೀಟಗಳನ್ನು ಬಿಡುಗಡೆ ಮಾಡಿ ನಿಯಂತ್ರಿಸಬಹುದು. ಮೇಲಿನ ಕ್ರಮಗಳಿಂದ ನಿಯಂತ್ರಣವಾಗದಿದ್ದಲ್ಲಿ ಪ್ರತಿ ಲೀಟರ್ ನೀರಿಗೆ 0.5 ಮಿ.ಲೀ ಇಮಿಡಾಕ್ಲೋಪ್ರಿಡ್ ಅಥವಾ 0.3 ಗ್ರಾಂ ಥಯಮಿಥಕ್ಸಾಮ್ ಬೆರೆಸಿ ಸಿಂಪಡಿಸಬಹುದು. ಆಗ ಈ ರೋಗ ನಿಯಂತ್ರಣಕ್ಕೆ ಬರುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.