ಕುಕ್ಕೆ ಸುಬ್ರಹ್ಮಣ್ಯದ ಕಟ್ಟಡದಲ್ಲಿ ಗಾಂಜಾ ಗಿಡ ಪತ್ತೆ ವದಂತಿ

| Published : May 14 2024, 01:09 AM IST / Updated: May 14 2024, 11:08 AM IST

ಕುಕ್ಕೆ ಸುಬ್ರಹ್ಮಣ್ಯದ ಕಟ್ಟಡದಲ್ಲಿ ಗಾಂಜಾ ಗಿಡ ಪತ್ತೆ ವದಂತಿ
Share this Article
  • FB
  • TW
  • Linkdin
  • Email

ಸಾರಾಂಶ

ಅಲ್ಲಿ ಯಾವುದೇ ಗಾಂಜಾ ಗಿಡ ಪತ್ತೆಯಾಗಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಪ್ರತಿಕ್ರಿಯಿಸಿದ್ದಾರೆ.

  ಸುಬ್ರಹ್ಮಣ್ಯ :  ಕುಕ್ಕೆ ಸುಬ್ರಹ್ಮಣ್ಯದ ಕಟ್ಟಡವೊಂದರ ಮಹಡಿಯಲ್ಲಿ ಗಾಂಜಾ ಗಿಡ ಪತ್ತೆಯಾಗಿದೆ ಎನ್ನಲಾಗಿದ್ದು, ಅಲ್ಲಿಯದ್ದೇ ಎನ್ನಲಾದ ಗಾಂಜಾ ಗಿಡದ ಪೋಟೋ ವೈರಲ್ ಆಗಿದೆ.

ಕುಕ್ಕೆ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯದ ಕಲ್ಯಾಣ ಮಂಟಪದ ಮೇಲ್ಛಾವಣಿಯಲ್ಲಿ ಗಾಂಜಾ ಗಿಡ ಪತ್ತೆಯಾಗಿದೆ ಎಂಬ ಸುದ್ದಿ ವೈರಲ್ ಆಗಿತ್ತು. ಜತೆಗೆ ಈ ಬಗ್ಗೆ ಪೊಲೀಸ್ ಅಧಿಕಾರಿಗಳು, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂಬ ಬಗ್ಗೆಯೂ ಸುದ್ದಿ ಹರಿದಾಡಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಕಟ್ಟಡದ ಮೇಲ್ಛಾವಣಿಯಲ್ಲಿ ಗಾಂಜಾ ಗಿಡ ಬೆಳೆಯ ಪೊಟೋ ವೈರಲ್ ಆಗಿತ್ತು. ಜತೆಗೆ ನೀರಿನ ಪೈಪ್ ಕೂಡ ಕಂಡುಬಂದಿತ್ತು. ಘಟನೆ ಬಗ್ಗೆ ವಿವಿಧ ರೀತಿಯಲ್ಲಿ ಚರ್ಚೆ ನಡೆಯುತಿದ್ದು, ಕೆಲ ಗಂಭೀರ ಆರೋಪಗಳೂ ಕೇಳಿ ಬಂದಿದೆ. ಪೊಲೀಸ್ ಇಲಾಖೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಸಾರ್ವಜನಿಕರಿಗೆ ಸ್ಪಷ್ಟಣೆ ನೀಡಬೇಕಾದ ಅಗತ್ಯ ಇದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿದ ವೇಳೆ, ಗಾಂಜಾ ಗಿಡ ಪತ್ತೆಯಾಗಿದೆ ಎಂಬ ಸುದ್ದಿ ವೆಬ್‌ಸೈಟ್ ನ್ಯೂಸ್‌ನಿಂದ ನನಗೂ ತಿಳಿದುಬಂದಿದೆ. ಆದರೆ ಯಾವುದೇ ಅಧಿಕೃತ ದೂರು ನಮಗೆ ಬಂದಿಲ್ಲ. ಅಂತಹ ಪ್ರಕರಣವನ್ನು ಪೊಲೀಸರೇ ತನಿಖೆ ನಡೆಸುತ್ತಾರೆ ಎಂದು ತಿಳಿಸಿದ್ದಾರೆ.

ವೆಬ್ ಮಾಧ್ಯಮದಲ್ಲಿ ಪ್ರಕಟಗೊಂಡ ಸುದ್ದಿಯ ಹಿನ್ನಲೆಯಲ್ಲಿ ನಾವು ಆದಿ ಸುಬ್ರಹ್ಮಣ್ಯದ ಕಟ್ಟಡದ ಬಳಿಗೆ ತೆರಳಿ ಪರಿಶೀಲನೆ ನಡೆಸಿದ್ದೇವೆ. ಆದರ ಅಲ್ಲಿ ಯಾವುದೇ ಗಾಂಜಾ ಗಿಡ ಪತ್ತೆಯಾಗಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಪ್ರತಿಕ್ರಿಯಿಸಿದ್ದಾರೆ. ಪೊಲೀಸ್ ಇಲಾಖೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.