11ರಂದು ಮಾಹೆಯಿಂದ ರನ್‌ ಫಾರ್‌ ಮೆಂಟಲ್‌ ಹೆಲ್ತ್

| Published : Oct 09 2025, 02:01 AM IST

ಸಾರಾಂಶ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಯ ವಿದ್ಯಾರ್ಥಿ ವ್ಯವಹಾರಗಳ ವಿಭಾಗವು ಮಾನಸಿಕ ಆರೋಗ್ಯದ ರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಅ.11ರಂದು ರನ್‌ ಫಾರ್‌ ಮೆಂಟಲ್‌ ಹೆಲ್ತ್ 5 ಕಿ.ಮೀ. ಓಟವನ್ನು ಹಮ್ಮಿಕೊಂಡಿದೆ.

ಮಾನಸಿಕ ಆರೋಗ್ಯ ಜಾಗೃತಿಗಾಗಿ 5 ಕಿ.ಮೀ. ಓಟದ ಸ್ಪರ್ಧೆ

ಕನ್ನಡಪ್ರಭ ವಾರ್ತೆ ಉಡುಪಿ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಯ ವಿದ್ಯಾರ್ಥಿ ವ್ಯವಹಾರಗಳ ವಿಭಾಗವು ಮಾನಸಿಕ ಆರೋಗ್ಯದ ರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಅ.11ರಂದು ರನ್‌ ಫಾರ್‌ ಮೆಂಟಲ್‌ ಹೆಲ್ತ್ 5 ಕಿ.ಮೀ. ಓಟವನ್ನು ಹಮ್ಮಿಕೊಂಡಿದೆ.

ಈ ಬಗ್ಗೆ ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ನಿರ್ದೇಶಕಿ ಡಾ. ಗೀತಾ ಮಯ್ಯ ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು.ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಯ ಬಗ್ಗೆ ಜಾಗೃತಿ. ಬೆಂಬಲ ಮತ್ತು ಮುಕ್ತಮಾತುಕತೆಯ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಮಾಹೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದವರು ಹೇಳಿದರು.

ಫೆಡರಲ್ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಈ ಓಟವು ಅಂದು ಸಂಜೆ 5 ಗಂಟೆಗೆ ಮಣಿಪಾಲ ಮಾಹೆಯ ಮುಂಭಾಗದಿಂದ ಪ್ರಾರಂಭವಾಗಲಿದೆ. ಇದರಲ್ಲಿ ಮಾಹೆ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಸಿಬ್ಬಂದಿಯ ಅವಲಂಬಿತರು ಎಂದು ಮೂರು ಗುಂಪುಗಳನ್ನು ರಚಿಸಲಾಗಿದ್ದು, ಪ್ರತಿ ಗುಂಪಿನಲ್ಲಿ ಪುರುಷ ಮತ್ತು ಮಹಿಳಾ ಸ್ಪರ್ಧಿಗಳಿಗೆ ಪ್ರತ್ಯೇಕ ಬಹುಮಾನಗಳಿವೆ. ವಿಶೇಷ ಮಕ್ಕಳಿಗಾಗಿಯೂ ವಿಶೇಷ ವಿಭಾಗವಿದೆ. ಪ್ರತಿ ವಿಭಾಗದ ಮೊದಲು 3 ಸ್ಥಾನ ವಿಜೇತರಿಗೆ ಕ್ರಮವಾಗಿ 5, 3 ಮತ್ತು 2 ಸಾವಿರ ರು. ನಗದ ಬಹುಮಾನ, ಓಟ ಪೂರ್ಣಗೊಳಿಸಿದ ಎಲ್ಲರಿಗೂ ಸ್ಮರಣಾ ಪದಕಗಳನ್ನು ನೀಡಲಾಗುತ್ತದೆ.ಈ ಕಾರ್ಯಕ್ರಮಕ್ಕೆ ಡಿಸಿ ಸ್ವರೂಪ ಟಿ.ಕೆ., ಎಸ್ಪಿ ಹರಿರಾಮ್ ಶಂಕರ್ ಮುಖ್ಯ ಅತಿಥಿಗಳಾಗಿರುತ್ತಾರೆ. ಮಾಹೆಯ ಸಹಉಪಕುಲಪತಿಗಳಾದ ಡಾ.ನಾರಾಯಣ ಸಭಾಹಿತ್ ಮತ್ತು ಡಾ. ಶರತ್ ರಾವ್, ಕುಲಸಚಿವ ಡಾ. ಪಿ. ಗಿರಿಧರ ಕಿಣಿ ಉಪಸ್ಥಿತರಿರುತ್ತಾರೆ ಎಂದವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ವ್ಯವಹಾರಗಳ ಉಪನಿರ್ದೇಶಕ ಡಾ. ರೋಶನ್ ಡೇವಿಡ್ ಜತ್ತನ್ನ, ಆಪ್ತ ಸಮಾಲೋಚಕರಾದ ರಾಯನ್ ಮಥಾಯಸ್, ಜೀವನ್ ಲೂಯಿಸ್, ಸಾರ್ವಜನಿಕ ಸಂಪರ್ಕ, ಮಾಧ್ಯಮ ವಿಭಾಗದ ಅರ್ಚನಾ ನಾಯಕ್ ಮತ್ತು ಮಿಥುನ್ ರಾಜ್ ಉಪಸ್ಥಿತರಿದ್ದರು.