ಸಾರಾಂಶ
ಕಾರವಾರ: ಪ್ರವಾಹದಿಂದ ಹಾನಿಯಾದ ಮನೆಗಳಿಗೆ ಹೆಚ್ಚಿನ ಪರಿಹಾರ ಹಾಗೂ ಮನೆ ಹಾನಿ ಪ್ರಕರಣದಲ್ಲಿ ಗಂಗಾವಳಿ ತೀರದ ನಿವಾಸಿಗಳಿಗೆ ನಿವೇಶನ ನೀಡಿ ಮನೆ ನಿರ್ಮಿಸಲು ಮುಂದಾಗಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷರು ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರು.ಇತ್ತಿಚೆಗೆ ಭಾರಿ ಮಳೆಯಿಂದ ಚೆಂಡಿಯಾ, ತೋಡುರು, ಅಮದಳ್ಳಿ, ಅರಗಾ ಮತ್ತಿತರ ಕಡೆಗಳಲ್ಲಿ ಮನೆಗಳು ಜಲಾವೃತವಾಗುತ್ತಿವೆ. ಜನತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ನೌಕಾನೆಲೆಯ ನಿರ್ಮಾಣ ಕಾಮಗಾರಿಗಳಿಂದ ನೀರು ಸರಾಗವಾಗಿ ಸಮುದ್ರಕ್ಕೆ ಹರಿದುಹೋಗದೆ ಗುಡ್ಡ ಬೆಟ್ಟಗಳಿಂದ ಹರಿದು ಬರುವ ನೀರು ಮನೆಗಳಿಗೆ ನುಗ್ಗುತ್ತಿದೆ.
ಆ ಪ್ರದೇಶದ ಜನತೆಯ ಬದುಕು ಅಸಹನೀಯವಾಗಿದೆ ಹಾಗೂ ಅಂಕೋಲಾ ತಾಲೂಕಿನ ಹಾರವಾಡ ಗೌಡಕೇರಿ, ಬೊಬ್ರುವಾಡದ ನದಿಬಾಗ ವ್ಯಾಪ್ತಿಯಲ್ಲಿ ನೀರು ಅಲ್ಲಿನ ಜನತೆ ಪ್ರತಿವರ್ಷ ಇದೇ ಬವಣೆಯನ್ನು ಅನುಭವಿಸುತ್ತಿದ್ದಾರೆ. ನೌಕಾನೆಲೆ ಹಾಗೂ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಗುಡ್ಡ- ಬೆಟ್ಟಗಳಿಂದ ಹರಿದುಬರುವ ನೀರು ಸರಾಗವಾಗಿ ಸಮುದ್ರಕ್ಕೆ ಹರಿದುಹೋಗುವಂತೆ ಶಾಶ್ವತ ಕ್ರಮ ಕೈಗೊಂಡು ಪ್ರತಿವರ್ಷ ಪ್ರವಾಹದ ಬವಣೆಯಿಂದ ಜನರನ್ನು ಪಾರು ಮಾಡಬೇಕು ಎಂದು ಒತ್ತಾಯಿಸಿದರು.ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಿಂದ ಬಳಸಿಕೊಳ್ಳುತ್ತಿರುವ ಅಗಸೂರು- ಶಿರಗುಂಜಿ- ಕೊಡ್ಸಣಿ ಮಾರ್ಗ ಹಾಗೂ ಹಿಲ್ಲೂರು- ಮಾದನಗೇರಿ ರಸ್ತೆ ದುರಸ್ತಿ ಮಾಡಬೇಕು. ಬೃಹತ್ ವಾಹನಗಳ ಓಡಾಟದಿಂದ ಹದಗೆಟ್ಟಿವೆ. ದೊಡ್ಡ ದೊಡ್ಡ ಹೊಂಡಗಳು ಬಿದ್ದು ಸಾರ್ವಜನಿಕರ ಓಡಾಟಕ್ಕೂ ತೊಂದರೆಯಾಗುತ್ತಿದೆ.ಬೃಹತ್ ವಾಹನಗಳ ಓಡಾಟದಿಂದಲೇ ರಸ್ತೆ ಸಂಪೂರ್ಣ ಹಾಳಾಗಿವೆ. ಅಂಕೋಲಾ ತಾಲ್ಲೂಕಿನ ಕೊಡ್ಸಣಿ ರಸ್ತೆ ಹಾಗೂ ಗೋಕರ್ಣ ವಡ್ಡಿ ರಸ್ತೆ, ಮಂಜಗುಣಿ ರಸ್ತೆಗಳನ್ನು ಪ್ರಕೃತಿ ವಿಕೋಪದಿಂದ ಹಾನಿಯಾದ ರಸ್ತೆ ಎಂದು ಪರಿಗಣಿಸಿ ಸರ್ವಋತು ರಸ್ತೆಯನ್ನಾಗಿ ಮಾಡಲು ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.
ಪರಿಹಾರವನ್ನು ಹೆಚ್ಚಿಸಿ: ಪ್ರವಾಹದಿಂದ ನೀರು ನುಗ್ಗಿದ ಮನೆಗಳಿಗೆ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹10 ಸಾವಿರ ಪರಿಹಾರ ನೀಡಲಾಗುತ್ತಿತ್ತು. ಈಗ ರಾಜ್ಯ ಸರ್ಕಾರ ₹5 ಸಾವಿರ ನೀಡುತ್ತಿದೆ. ಇದನ್ನು ₹10 ಸಾವಿರಕ್ಕೆ ಏರಿಸಬೇಕು. ಉಳುವರೆಯಲ್ಲಿ ಮನೆ ಹಾನಿಯಾಗಿದೆ. ಸಾವು ಸಂಭವಿಸಿದೆ. ಮನೆ ಕಳೆದುಕೊಂಡವರಿಗೆ ನಿವೇಶನ ಗುರುತಿಸಿ ಮನೆ ನಿರ್ಮಿಸಿ ಕೊಡಬೇಕು ಎಂದು ತಿಳಿಸಿದ್ದಾರೆ.ಸ್ಥಳಾಂತರಕ್ಕೆ ಆಗ್ರಹ: ಶಿಥಿಲಾವಸ್ಥೆಯಲ್ಲಿರುವ ಹಾಗೂ ಜನಸ್ನೇಹಿಯಾಗಿರದ ತಹಸೀಲ್ದಾರ್ ಕಚೇರಿ ಹಾಗೂ ಉಪ ನೋಂದಣಾಧಿಕಾರಿ ಕಚೇರಿಯನ್ನು ನೂತನವಾಗಿ ನಿರ್ಮಾಣಗೊಂಡಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ.